ಮೈಸೂರು: ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದಿದ್ದ ದರೋಡೆ, ಸುಲಿಗೆ, ಮನೆ ಕಳವು, ವಾಹನ ಕಳವು ಪ್ರಕರಣ ಭೇದಿಸಿರುವ ಮೈಸೂರು ನಗರ ಪೊಲೀಸರು 5.06 ಕೋಟಿ ರೂ. ಮೌಲ್ಯದ ವಸ್ತುಗ ಳನ್ನು ವಶಕ್ಕೆ ಪಡೆದು ಮಾಲಿಕರಿಗೆ ಹಸ್ತಾಂತರಿಸಿದರು. ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಸೋಮವಾರ ನಡೆದ ಕಳವು ಮಾಲು ಪ್ರದರ್ಶನ ಕಾರ್ಯಕ್ರಮದಲ್ಲಿ ವಿವಿಧ ಪ್ರಕರಣಗಳಲ್ಲಿ ತಮ್ಮ ವಸ್ತು ಗಳನ್ನು ಕಳೆದುಕೊಂಡಿದ್ದ ವಸ್ತುಗಳನ್ನು ವಾರಸು ದಾರರಿಗೆ ಒಪ್ಪಿಸಲಾಯಿತು.
2020 ರ ನವಂಬರ್‌ನಿಂದ 2021 ರ ನವೆಂಬರ್ ವರೆಗೆ ಮೈಸೂರು ನಗರದಲ್ಲಿ ನಡೆದ 676 ಪ್ರಕರಣ ಗಳಲ್ಲಿ ಬರೋಬ್ಬರಿ 374 ಪ್ರಕರಣಗಳನ್ನು ನೆರೆ ಜಿಲ್ಲೆ, ನೆರೆ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುವ ಮೂಲಕ ಪತ್ತೆ ಮಾಡಿದ ಪೊಲೀಸರು, ಕಳವಾಗಿದ್ದ 5.06 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ ಮತ್ತು ವಸ್ತು ಗಳನ್ನು ವಶಪಡಿಸಿಕೊಂಡಿದ್ದರು.
ಬಳಿಕ ಕಳುವಾದ ಸ್ವತ್ತನ್ನು ವಾರಸುದಾರರಿಗೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಒಪ್ಪಿಸಿದರು. ಬಳಿಕ ಮಾತನಾಡಿದ ಅವರು, ಕೊರೊನಾಂತಕದ ನಡುವೆ ಮೈಸೂರು ನಗರ ಪೊಲೀಸರು, ನಗರದಲ್ಲಿ ನಡೆದ ಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಹಗಲು ರಾತ್ರಿ ಶ್ರಮಿಸಿದ್ದಾರೆ. ಅಲ್ಲದೇ ಕಳ್ಳರನ್ನು ಹಿಡಿಯುವ ಆತುರದಲ್ಲಿ ತಾವೇ ಕೋವಿಡ್ ಸೋಂಕಿಗೆ ತುತ್ತಾಗಿ, ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.
ಮೈಸೂರು ನಗರದ ವಿವಿಧ ಭಾಗಗಳಲ್ಲಿ ಒಂದು ವರ್ಷದ ಅವಧಿಯಲ್ಲಿ ನಡೆದಿದ್ದ 04 ದರೋಡೆ, 17 ಸುಲಿಗೆ, 34 ಸರಗಳ್ಳತನ, 47 ಕನ್ನಕಳುವು, 09 ಮನೆಕಳವು, 05 ಕೆಲಸದವರಿಂದ ಕಳ್ಳತನ, 212 ವಾಹನ ಕಳವು, 35 ಸಾಮಾನ್ಯ ಕಳವು, 06 ಜಾನುವಾರು ಕಳುವು ಪ್ರಕರಣ ಸೇರಿ 676 ಪ್ರಕರಣ ದಾಖಲಾಗಿದ್ದು, 7.34 ಕೋಟಿ ರೂ ಮೌಲ್ಯದ ಆಸ್ತಿ, ವಸ್ತುಗಳು ಕಳುವಾಗಿದ್ದವು.
ಇದನ್ನೂ ಓದಿ;- ಜವಾಬ್ದಾರಿ ಅರಿತು ಮತ ಚಲಾಯಿಸಿ
ಇದರಲ್ಲಿ 374 ಪ್ರಕರಣ ಪತ್ತೆಯಾಗಿದ್ದು, 5.06 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿ ಕೊಂಡು ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಈ ಎಲ್ಲಾ ಪ್ರಕರಣಗಳಲ್ಲಿ 301 ಮಂದಿಯನ್ನು ಬಂಧಿಸ ಲಾಗಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ ಉಪಸ್ಥಿತರಿದ್ದರು.
“ಪತ್ತೆಯಾಗಿರುವ ಪ್ರಕರಣಗಳಲ್ಲಿ ಬೇರೆ ರಾಜ್ಯ, ಜಿಲ್ಲೆಯ ಅಪರಾಧಿಗಳಿದ್ದಾರೆ. ಅವರ ಮೇಲೆ ನಿಗಾ ಇಡಲಾಗಿದ್ದು, ಮುಂದಿನ ದಿನಗಳಲ್ಲಿ ಅಪರಾಧ ಘಟಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಡಿಸೆಂಬರ್‌ನಲ್ಲಿ ಅಪರಾಧ ತಡೆ ಮಾಸಾಚರಣೆ ಇದ್ದು, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ.”
– ಡಾ.ಚಂದ್ರಗುಪ್ತ, ನಗರ ಪೊಲೀಸ್ ಆಯುಕ್ತ.