Advertisement

ನಕಲು ತಡೆಯಲು ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ: ಡಿಸಿ

09:47 AM Mar 16, 2019 | |

ಬಳ್ಳಾರಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮಾ.21 ರಿಂದ ಪ್ರಾರಂಭವಾಗಿ ಏ.4ರ ವರೆಗೆ ನಡೆಯಲಿದ್ದು, ಇದಕ್ಕೆ 16058 ಬಾಲಕರು ಹಾಗೂ 15096 ಬಾಲಕಿಯರು ಸೇರಿದಂತೆ ಒಟ್ಟು 31154 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿಗಳು ಸುಸೂತ್ರವಾಗಿ ಪರೀಕ್ಷೆ ಬರೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್‌ ಮೂಲಕ ಪರೀಕ್ಷೆ ಮುಖ್ಯ ಅಧೀಕ್ಷಕರು, ತಹಶೀಲ್ದಾರರು, ಬಿಇಒ, ಉಪಖಜನಾಧಿಕಾರಿಗಳೊಂದಿಗೆ ಶುಕ್ರವಾರ ನಡೆಸಿದ ವೀಡಿಯೋ ಸಂವಾದದಲ್ಲಿ ಈ ಸೂಚನೆ ನೀಡಿದರು. ಪರೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲಾಮಟ್ಟದ ವೀಕ್ಷಕರನ್ನು ನೇಮಿಸಲಾಗುತ್ತದೆ. 

ನೇಮಕವಾದ ವೀಕ್ಷಕರು ಸರಿಯಾಗಿ ಕಾರ್ಯ ಪ್ರವೃತರಾಗಬೇಕು. ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಸಂಚಾರಿ ಜಾಗೃತ ದಳವನ್ನು ಹಾಗೂ ಪರೀಕ್ಷಾ ಕೇಂದ್ರಗಳಿಗೆ ಸ್ಥಾನಿಕ ಜಾಗೃತ ದಳವನ್ನು ನೇಮಕ ಮಾಡಲಾಗಿದೆ. ಜಾಗೃತದಲ್ಲಿ ನೇಮಕವಾದವರು ಪರೀಕ್ಷಾ ಕೇಂದ್ರಗಳಿಗೆ ಆಕಸ್ಮಿಕ ಭೇಟಿ ನೀಡಿ ಪರೀಕ್ಷೆಯಲ್ಲಿ ಅಕ್ರಮವಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯು ಮಾ. 21 ರಿಂದ ಏ.04 ರವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಬಳ್ಳಾರಿ ಪೂರ್ವ -14, ಹಗರಿಬೊಮ್ಮನಹಳ್ಳಿ -09, ಹೊಸಪೇಟೆ-17, ಹಡಗಲಿ-10, ಕೂಡ್ಲಿಗಿ-15, ಸಂಡೂರು-07, ಸಿರುಗುಪ್ಪ-11 ಮತ್ತು ಕುರುಗೋಡು-22 ಒಟ್ಟು 99 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯು ನಡೆಯಲಿವೆ. ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್‌ ಆವರಣವನ್ನು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷೆ ವೇಳೆ 200 ಮೀಟರ್‌ರೊಳಗಿನ ಜೆರಾಕ್ಸ್‌ ಸೆಂಟರ್‌ ಮುಚ್ಚುವಂತೆ ಸೂಚಿಸಲಾಗಿದೆ ಎಂದರು.

ಮೊಬೈಲ್‌ ಫೋನ್‌, ಬ್ಲೂಟೂತ್‌, ಡಿವೈಸ್‌, ಪೇಜರ್‌, ವೈರ್‌ಲೆಸ್‌, ಕ್ಯಾಲ್ಕುಲೇಟರ್‌ ಇತರೆ ಮೊದಲಾದ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಕೇಂದ್ರದಲ್ಲಿ ಪರೀಕ್ಷಿಸಿ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ ಕೊರತೆ ಇದ್ದಲ್ಲಿ ಅಗತ್ಯ ಸಿದ್ದತೆ ಮಾಡಬೇಕೆಂದರು.

Advertisement

ಜಿಪಂ ಸಿಇಒ ಕೆ.ನಿತೀಶ್‌ ಇದೇ ಸಂದರ್ಭದಲ್ಲಿ ಕೆಲ ಸಲಹೆ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಧರ್‌, ಖಜನಾಧಿಕಾರಿ ರವಿ, ತಹಶೀಲ್ದಾರರು ಸೇರಿದಂತೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next