ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ -19 ತಡೆಗೆ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತಾ ಕ್ರಮ, ಕಲ್ಪಿಸಲಾಗಿರುವ ವೈದ್ಯಕೀಯ ಸೌಲಭ್ಯಗಳ ಕುರಿತು ಸಚಿವ ಬಿ.ಶ್ರೀರಾಮುಲು ಪರಿಶೀಲನೆ ನಡೆಸಿದರು.
ನಗರದ ಡೀಸಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ತಡೆ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಸಚಿವರು, ಕೋವಿಡ್ -19 ವೈರಾಣು ಹರಡದಂತೆ ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ಆರೋಗ್ಯ ಸೇವೆಗೆ ಒದಗಿಸಬೇಕಿರುವ ಸೌಲಭ್ಯ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ. ಅಧಿಕಾರಿಗಳು ಯಾವುದೇ ಕೊರತೆ ಬಾರದಂತೆ ಕಾರ್ಯ ನಿರ್ವಹಣೆಗೆ ಮುಂದಾಗಬೇಕೆಂದು ಸೂಚಿಸಿದರು.
ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಮಾತನಾಡಿ, ಜ್ವರ ತಪಾಸಣಾ ಕೇಂದ್ರ, ಕೋವಿಡ್ ಆಸ್ಪತ್ರೆ, ಕ್ವಾರೆಂಟೈನ್ ಕೇಂದ್ರ, ತಾಲೂಕುಗಳಲ್ಲೂ ಐಸೋಲೇಷನ್ ವಾರ್ಡ್ ಸಿದ್ಧಪಡಿಸಿದ್ದೇವೆ. ಆರಂಭದಲ್ಲಿ ಕೆಲದಿನಗಳ ಮಟ್ಟಿಗೆ ಮಾತ್ರ ಹೋಮ್ ಕ್ವಾರೆಂಟೈನ್‌ಗೆ ಅವಕಾಶ ಮಾಡಿಕೊಡಲಾಗಿತ್ತು. ತದನಂತರ ನಗರದ ಡಾ.ಅಂಬೇಡ್ಕರ್ ಭವನದ ಕ್ವಾರಂಟೈನ್ ಕೇಂದ್ರಕ್ಕೆ ಎಲ್ಲರನ್ನೂ ಸ್ಥಳಾಂತರಿಸಲಾಯಿತು.
ಎಲ್ಲರನ್ನೂ ಕ್ವಾರೆಂಟೈನ್ ಕೇಂದ್ರದಲ್ಲೇ ನಿಗಾವಣೆ ಮಾಡಲಾಗುತ್ತಿದೆ. ಊಟ, ಉಪಾಹಾರ ಸೇರಿದಂತೆ ಎಲ್ಲಾ ಸೌಲಭ್ಯ, ಮನೆಯ ವಾತಾವರಣ ಮಾದರಿಯಲ್ಲಿಯೇ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ ಎಂದರು. ವೈದ್ಯಕೀಯ ಕಾಲೇಜಿನ ಡೀನ್ ಡಾ. ಸಂಜೀವ್, ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ. ನಾಗರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ ಸಂಪೂರ್ಣ ವಿವರವನ್ನು ಸಚಿವರ ಮುಂದೆ ಪವರ್ ಪಾಯಿಂಟ್ ಮೂಲಕ ಪ್ರಸ್ತುತಪಡಿಸಿದರು. ಉದ್ಭವ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಗೌರವ ಕಾರ್ಯದರ್ಶಿ ಚಂದ್ರಕಲಾಬಾಯಿಯವರು ತಮ್ಮ ಸಂಸ್ಥೆಯಿಂದ ಜಿಲ್ಲೆಯ ಆರೋಗ್ಯ ಸೇವೆಗಾಗಿ ಮೂರು ಆ್ಯಂಬುಲೆನ್ಸ್‌ಗಳನ್ನು ನೀಡುವುದಾಗಿ ತಿಳಿಸಿದರು. ಶಾಸಕ ಎನ್. ಮಹೇಶ್, ಜಿಪಂ ಅಧ್ಯಕ್ಷ ಮಹೇಶ್, ಜಿಪಂ ಸಿಇಒ ನಾರಾಯಣರಾವ್, ಎಸ್ಪಿ ಆನಂದಕುಮಾರ್, ಎಡೀಸಿ ಆನಂದ್, ಎಸಿ ನಿಖೀತಾ ಹಾಜರಿದ್ದರು.