Advertisement

ಕೊರೊನಾ ತಡೆಗೆ ಮುಂಜಾಗ್ರತಾ ಕ್ರಮ

02:26 PM Mar 13, 2020 | Suhan S |

ಚಾಮರಾಜನಗರ: ಕೊರೊನಾ ವೈರಸ್‌ (ಕೋವಿಡ್‌ -19) ಸಂಬಂಧ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜಿಲ್ಲೆಯ ಜನತೆ ಯಾವುದೇ ಆತಂಕ ಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕೊರೊನಾ ವೈರಸ್‌ ಸೋಂಕು ವಿಷಯ ಕುರಿತು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ಸೋಂಕು ಸಂಬಂಧ ಯಾವುದೇ ಪ್ರಕರಣ ವರದಿಯಾಗಿಲ್ಲ. ರಾಜ್ಯ ಚೆಕ್‌ ಪೋಸ್ಟ್‌ಗಳಲ್ಲಿ ವಿಶೇಷ ಗಮನ ಹರಿಸಲಾಗಿದೆ. ತೀವ್ರ ಜ್ವರ, ಕೆಮ್ಮು, ಶೀತದಿಂದ ಬಳಲುತ್ತಿರುವ ಲಕ್ಷಣವಿದ್ದಲ್ಲಿ ತಪಾಸಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಸೋಂಕು ಹರಡದಂತೆ ತಡೆಯಲು ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್‌: ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್‌ಗಳನ್ನು ತೆರೆಯಲಾಗಿದೆ. ನಗರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ 10 ಹಾಸಿಗೆಗಳ, ಗುಂಡ್ಲುಪೇಟೆ, ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗಳಲ್ಲಿ ತಲಾ 5 ಹಾಸಿಗೆಗಳ, ಯಳಂದೂರು, ಹನೂರುಗಳಲ್ಲಿ ತಲಾ 2 ಹಾಸಿಗೆಗಳ ವಾರ್ಡ್‌ ತೆರೆಯಲಾಗಿದೆ. ಅಲ್ಲದೆ, ನಗರದ ಜೆ.ಎಸ್‌.ಎಸ್‌ ಮತ್ತು ಕಾಮಗೆರೆಯ ಹೋಲಿಕ್ರಾಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ವಿದೇಶಕ್ಕೆ ಹೋಗುವುದನ್ನು ಮುಂದೂಡಿ: ಕೊರೊನಾ ಆತಂಕ ಇರುವುದರಿಂದ ಜಿಲ್ಲೆಯ ಜನರು ವಿದೇಶಕ್ಕೆ ಹೋಗುವುದನ್ನು ಮುಂದೂಡಬೇಕು. ವಿದೇಶದಿಂದ ಬರುವವರನ್ನು ಸದ್ಯಕ್ಕೆ ಅಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಆಕಸ್ಮಾತ್‌ ವಿದೇಶಗಳಿಂದ ಜಿಲ್ಲೆಗೆ ಆಗಮಿಸಿದ್ದಲ್ಲಿ ಅವರ ವಿವರವನ್ನು ಆರೋಗ್ಯ ಇಲಾಖೆಗೆ ತಿಳಿಸಬೇಕು. ಸಹಾಯವಾಣಿ 104ಕ್ಕೂ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಜಿಲ್ಲೆಯ ಗಡಿಯಲ್ಲಿ ಪುಣಜನೂರು, ಮಹದೇಶ್ವರಬೆಟ್ಟ ಸೇರಿದಂತೆ ಇತರೆ ಚೆಕ್‌ಪೋಸ್ಟ್ ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಹೆಚ್ಚು ಜನರು ಸೇರುವ ಸಭೆ, ಸಮ್ಮೇಳನ ಕಾರ್ಯಕ್ರಮ ಮುಂದಕ್ಕೆ ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಜನರ ಆರೋಗ್ಯದ ಕಾಳಜಿಯಿಂದ ಈ ಚಿಂತನೆ ನಡೆದಿದೆ ಎಂದು ತಿಳಿಸಿದರು.

Advertisement

ಭಕ್ತಾದಿಗಳ ತಪಾಸಣೆಗಾಗಿ ಶಿಬಿರ: ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಯುಗಾದಿ ಜಾತ್ರಾ ಮಹೋತ್ಸವದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಗತ್ಯ ವೈದ್ಯಕೀಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಅಲ್ಲಿಗೆ ಬರುವ ಭಕ್ತಾದಿಗಳ ತಪಾಸಣೆಗಾಗಿ ಕೌದಹಳ್ಳಿ, ಪಾಲಾರ್‌ ಬಳಿ ಶಿಬಿರ ತೆರೆಯಲಾಗುವುದು. ವಿಶೇಷವಾಗಿ ತಮಿಳುನಾಡಿನಿಂದಲೂ ಹೆಚ್ಚು ಸಂಖ್ಯೆಯಲ್ಲಿ ಭಕ್ತಾದಿಗಳು ಬರುವುದರಿಂದ ಅಲ್ಲಿಯೆ ತಪಾಸಣೆ ನಡೆಸಲು ಕೋರಲಾಗುವುದು ಎಂದು ತಿಳಿಸಿದರು.

ಮಾಸ್ಕ್ ಕೊರತೆಯಿಲ್ಲ: ಮುಖಗವಸು ದಾಸ್ತಾನು ಪ್ರಮಾಣದಲ್ಲಿ ಯಾವುದೇ ಗೊಂದಲ, ಕೊರತೆಯಿಲ್ಲ. ಮುಖಗವಸು (ಮಾಸ್ಕ್) ಸಾಕಷ್ಟಿದೆ. ಇನ್ನೂ ಅಗತ್ಯವಿದ್ದಲ್ಲಿ ಆರೋಗ್ಯ ಇಲಾಖೆಯಿಂದ ತರಿಸಿಕೊಳ್ಳಲಾಗುವುದು. ಜನರು ಸಹ ಮುಖಗವಸು ಅವಶ್ಯವಿದ್ದಲ್ಲಿ ಮಾತ್ರ ಬಳಸಬಹುದು. ಈ ವಿಷಯದಲ್ಲಿ ಯಾವುದೇ ಅನಗತ್ಯ ಆತಂಕಕ್ಕೆ ಅವಕಾಶ ಮಾಡಕೊಡಬಾರದು ಎಂದು ಮನವಿ ಮಾಡಿದರು.

ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ತಪಾಸಣೆ: ಇದೇ ವೇಳೆ ಹಕ್ಕಿಜ್ವರ ಕುರಿತು ವಿವರಿಸಿದ ಜಿಲ್ಲಾಧಿಕಾರಿಯವರು, ಕೇರಳದಲ್ಲಿ ಹಕ್ಕಿಜ್ವರ ಪ್ರಕರಣ ಹಿನ್ನೆಲೆಯಲ್ಲಿ ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ. ಈಗಾಗಲೇ ನಾಲ್ಕು ಕಡೆ ಚೆಕ್‌ಪೋಸ್ಟ್ ಗಳಲ್ಲಿ ತೀವ್ರ ತಪಾಸಣೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲೇ ಇರುವ ಪೌಲಿó ಫಾರಂಗಳಿಂದ ಅಗತ್ಯಕ್ಕನುಸಾರವಾಗಿ ಕೋಳಿಗಳ ಸರಬರಾಜು ಆಗಲಿದೆ. ಈ ವಿಷಯದಲ್ಲಿ ಅನಗತ್ಯ ಭೀತಿ ಬೇಡ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಭೋಯರ್‌ ಹರ್ಷಲ್‌ ನಾರಾಯಣರಾವ್‌, ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್‌ ಡಾ.ಸಂಜೀವ್‌, ಜಿಲ್ಲಾಸ್ಪತ್ರೆ ಸರ್ಜನ್‌ ಡಾ. ಕೃಷ್ಣಪ್ರಸಾದ್‌, ಪಶು ಪಾಲನಾ ಇಲಾಖೆಯ ಉಪ ನಿರ್ದೇಶಕ ವೀರಭದ್ರಯ್ಯ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next