ಸಕಲೇಶಪುರ: ತಾಲೂಕಿನಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಹೇಳಿದರು. ಶನಿವಾರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ರೆಸಾರ್ಟ್ ಹೋಂಸ್ಟೇ ಸೇರಿದಂತೆ ವಿವಿಧ ವರ್ತಕರು ಹಾಗೂ ಅಧಿಕಾರಿಗಳ ಜಾಗೃತಿ ಸಭೆಯಲ್ಲಿ ಮಾತನಾಡಿ, ಕೊರೊನಾ ವೈರಸ್ ಹರಡದಂತೆ ರಾಜ್ಯ ಸರ್ಕಾರ ಮುಂಜಾಗ್ರತ ಕ್ರಮವಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ.
ಶೀತ, ಕೆಮ್ಮು, ಕಫ, ಜ್ವರದಂತಹ ಯಾವುದೇ ಮೇಲಿನ ರೋಗಲಕ್ಷಣಗಳು ಅತಿಯಾಗಿ ಕಂಡುಬಂದರೆ ತಕ್ಷಣ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮುಂದಾಗಬೇಕು. ಸಾರ್ವಜನಿಕರಿಗೆ ತಪ್ಪು ಮಾಹಿತಿಯನ್ನು ಕೊರೊನಾ ಕುರಿತು ಸುಳ್ಳು ಮಾಹಿತಿಗಳನ್ನು ಕೆಲವರು ಹಬ್ಬಿಸುತ್ತಿರುವುದರಿಂದ ಜನರಲ್ಲಿ ಗೊಂದಲ ಉಂಟಾಗುತ್ತಿದೆ. ಯಾವುದೇ ವದಂತಿಗಳನ್ನು ಜನ ತಕ್ಷಣ ನಂಬಬಾರದು ಮತ್ತು ಹರಡಬಾರದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶಗಳನ್ನು ಪೂರ್ವಾಪರ ತಿಳಿದುಕೊಳ್ಳದೇ ಹಂಚಿಕೊಳ್ಳಬಾರದು ಎಂದರು.
ಅದ್ಧೂರಿ ವಿವಾಹಕ್ಕೆ ನಿಷೇಧ: ತಾಲೂಕಿನಲ್ಲೂ ಅದ್ಧೂರಿ ಮದುವೆಗೆ ಮಾಡುವುದನ್ನು ನಿಷೇಧಿಸಲಾಗಿದೆ. ಚಿತ್ರಮಂದಿರ ಬಂದ್ ಮಾಡಲು ಸೂಚನೆ ನೀಡಲಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ, 7ನೇ ತರಗತಿ ಹೊರತರುಪಡಿಸಿ ಇತರೆ ಎಲ್ಲಾ ಶಾಲಾಕಾಲೇಜುಗಳಿಗೆ ಕಡ್ಡಾಯ ರಜೆ ಘೋಷಿಸಲಾಗಿದೆ. ಹೋಂಸ್ಟೇ ಹಾಗೂ ರೇಸಾರ್ಟ್‌ಗಳನ್ನು ಕನಿಷ್ಠ 15 ದಿನಗಳ ಕಾಲ ಬಂದ್ ಮಾಡುವಂತೆ ಸೂಚಿಸಲಾಗಿದೆ ಹಾಗೂ ತಾಲೂಕಿಗೆ ಬರುವ ವಿದೇಶಿ ಪ್ರಜೆಗಳ ಬಗ್ಗೆ ಪ್ರತಿಯೊಬ್ಬರೂ ನಿಗಾವಹಿಸಬೇಕೆಂದು ಹೇಳಿದರು.
ಆತಂಕ ಬೇಡ-ಟಿಎಚ್‌ಒ: ತಾಲೂಕು ಆರೋಗ್ಯಾಧಿಕಾರಿ ಮಹೇಶ್ ಮಾತನಾಡಿ, ರಾಜ್ಯಾದ್ಯಂತ ಜನರಲ್ಲಿ ಅತಂಕ ಉಂಟುಮಾಡುತ್ತಿರುವ ಕೊರೊನಾ ವೈರಸ್ ಸೋಂಕಿನ ಬಗ್ಗೆ ಯಾವುದೇ ಆತಂಕ, ಭಯ ಬೇಡ, ನೊವೆಲ್ ಕರೋನಾ ವೈರಸ್ ಒಬ್ಬರಿಂದ ಒಬ್ಬರಿಗೆ ಕೆಮ್ಮು ಅಥವಾ ಸೀನಿನ ಮೂಲಕ ಹರಡುತ್ತದೆ. ಹಾಗೂ ಅನಾರೋಗ್ಯ ಪೀಡಿತ ವ್ಯಕ್ತಿಯಿಂದ ಅಥವಾ ಕಲುಷಿತ ಕೈಗಳಿಂದ ಕರೋನಾ ವೈರಸ್ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿಸಿದರು.
ಈ ರೋಗವು ಮೊದಲಿಗೆ ಚೀನಾದ ವೂಹಾನ್ ನಗರದಲ್ಲಿ ಕಾಣಿಸಿಕೊಂಡಿದ್ದು, ಈಗ ಪ್ರಪಂಚದ ಆನೇಕ ದೇಶಗಳಲ್ಲಿ ಕಾಣಿಸಿಕೊಂಡಿದೆ. ಭಾರತದಲ್ಲೂ ಸುಮಾರು 60ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ತೀವ್ರ ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ಹಾಗೂ ಭೇದಿಯಾದರೆ ತಕ್ಷಣ ಚಿಕಿತ್ಸೆ ಪಡೆಯುವಂತೆ ತಿಳಿಸಿದರು. ತಹಶೀಲ್ದಾರ್ ಮಂಜುನಾಥ್,ಪಿಎಸ್‌ಐ ರಾಘವೇಂದ್ರ, ರೆಸಾರ್ಟ್ ಹಾಗೂ ಹೋಂಸ್ಟೇ ಯೂನಿಯನ್ ಅಧ್ಯಕ್ಷ ಬ್ಯಾಕರವಳ್ಳಿ ಜಯಣ್ಣ ಮುಂತಾದವರಿದ್ದರು.