ಬೆಂಗಳೂರು: ಪಿಯುಸಿಯಲ್ಲಿ ಮೂರು ಪರೀಕ್ಷೆ ನಡೆಸುವು ದರಿಂದ ಪರೀಕ್ಷೆಯ ಪಾವಿತ್ರ್ಯ ಉಳಿಸಲು ಅಸಾಧ್ಯ. ಪರೀಕ್ಷೆ ಗುಣಮಟ್ಟ ಹೊಂದಿರುವುದಿಲ್ಲ ಹಾಗೂ ಪರೀಕ್ಷೆ-ಮೌಲ್ಯಮಾಪನ ಮಾಡಲು ಸಮಯ ಹೊಂದಿಸುವುದು ಕಷ್ಟವಾಗಿರು ವುದರಿಂದ 3 ಪರೀಕ್ಷೆ ನಿರ್ಧಾರವನ್ನು ಸರಕಾರ ತತ್‌ಕ್ಷಣವೇ ಕೈಬಿಡಬೇಕು ಎಂದು ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘ (ಕುಪ್ಮ) ಸರಕಾರವನ್ನು ಆಗ್ರಹಿಸಿದೆ.
ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ ಪದಾಧಿಕಾರಿಗಳು ವಿಧಾನ ಸೌಧದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಅಧ್ಯಕ್ಷತೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ ಅವರ ಜತೆಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಶಾಲಾ ಶಿಕ್ಷಣ (ಪದವಿ ಪೂರ್ವ) ನಿರ್ದೇಶಕರಾದ ಸಿಂಧೂ ರೂಪೇಶ್, ಜಂಟಿ ನಿರ್ದೇಶಕರಾದ ಶ್ವೇತಾ ಜಿ.ಎನ್. ಅವರ ಜತೆಗೆ ರವಿವಾರ ವಿಶೇಷ ಸಭೆ ನಡೆಸಿ ಮನವಿ ಸಲ್ಲಿಸಿದ್ದಾರೆ.
ಕುಪ¾ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಕಾರ್ಯದರ್ಶಿ ಪ್ರೊ| ನರೇಂದ್ರ ನಾಯಕ್ ಎಲ್., ಗೌರವಾಧ್ಯಕ್ಷರಾದ ಪ್ರೊ| ಎಂ.ಬಿ ಪುರಾಣಿಕ್, ಉಪಾಧ್ಯಕ್ಷ ರಾದ ಡಾ| ಸುಧಾಕರ ಶೆಟ್ಟಿ, ಯುವರಾಜ್ ಜೈನ್, ಸದ್ಯಸರಾದ ಸುಬ್ರಹ್ಮಣ್ಯ ನಟ್ಟೋಜ, ಜತೆ ಕಾರ್ಯ ದರ್ಶಿ ವಿಶ್ವನಾಥ ಶೇಷಾಚಲ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಡಾ| ಜಯರಾಮ ಶೆಟ್ಟಿ, ಪದಾಧಿಕಾರಿಗಳಾದ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ದೇವರಾಜ ಬಿ., ದಾವಣಗೆರೆಯ ಜಿಲ್ಲಾ ಅಧ್ಯಕ್ಷ ಎಸ್.ಜೆ ಶ್ರೀಧರ್, ಹಾವೇರಿ ಜಿಲ್ಲಾಧ್ಯಕ್ಷ ಸತೀಶ, ಖಜಾಂಚಿ ರಮೇಶ ಕೆ. ಉಪಸ್ಥಿತರಿದ್ದರು.
ಇಲಾಖೆಗಳು ನಡೆಸುವ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಯಾವುದೇ ದೋಷ ಇರಬಾರದು. ಔಟ್ ಆಫ್ ಸಿಲೆಬಸ್ ಇರಬಾರದು. ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಗುಣಮಟ್ಟದಿಂದ ಕೂಡಿರಬೇಕು. ಒಂದು ಮುಖ್ಯ ಪರೀಕ್ಷೆ ಮತ್ತು ಒಂದು ಪೂರಕ ಪರೀಕ್ಷೆ ಮಾತ್ರವೇ ಶಿಕ್ಷಣ ಇಲಾಖೆ ನಡೆಸಬೇಕು. ಪರೀಕ್ಷೆಗೆ ಬೇಕಾಗುವ ಸರಿಯಾದ ಸಿಲೆಬಸ್ ಅನ್ನು ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ ಪ್ರಕಟಿಸಬೇಕು. ಅದರಲ್ಲಿ ಸ್ಪಷ್ಟತೆ ಇರಬೇಕು. ಎನ್‌ಸಿಇಆರ್‌ಟಿ ಸಿಲೆಬಸ್ ಆಗಿದ್ದರೂ ವಿವರವಾಗಿ ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಅದರಂತೆ ಪ್ರಶ್ನೆ ಪತ್ರಿಕೆಯನ್ನು ದೋಷರಹಿತವಾಗಿ ತಯಾರಿಸಲು ಕುಪ್ಮ ವತಿಯಿಂದ ಮನವಿ ಮಾಡಲಾಯಿತು.
ಈ ಶೈಕ್ಷಣಿಕ ವರ್ಷದಿಂದ 10 ವರ್ಷಗಳವರೆಗೆ ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಮಾನ್ಯತೆಯನ್ನು ನವೀಕರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಆನ್‌ಲೈನ್ ಅರ್ಜಿಯಲ್ಲಿರುವ ದಾಖಲೆಗಳನ್ನು ಮಾತ್ರ ಪರಿಶೀಲಿಸಲಾಗುವುದು ಹಾಗೂ ದಕ್ಕೆ ತಗಲುವ ಶುಲ್ಕವನ್ನು ಖಾಸಗಿ ಆಡಳಿತ ಮಂಡಳಿಗಳು ಪಾವತಿಸಲು ಸಿದ್ಧರಿರಬೇಕೆಂದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. ಭೂಪರಿವರ್ತನೆಯನ್ನು ಶೈಕ್ಷಣಿಕ ಉದ್ದೇಶಕ್ಕೆಂದು ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಯಲ್ಲೂ ಅಳವಡಿಸುವಂತೆ ಕಂದಾಯ ಇಲಾಖೆಗೆ ವಿನಂತಿಸಲಾಗಿದೆ ಎಂದು ಪಿಯು ನಿರ್ದೇಶಕಿ ಸಿಂಧೂ ಬಿ. ರೂಪೇಶ್ ಅವರು ತಿಳಿಸಿದರು.
ವೇಳಾಪಟ್ಟಿ ತಯಾರಿ ಮೊದಲು ಚರ್ಚಿಸಿ
ಪದವಿ ಪೂರ್ವ ಶಿಕ್ಷಣ ಇಲಾಖೆಯು ಪರೀಕ್ಷಾ ವೇಳಾಪಟ್ಟಿಯನ್ನು ತಯಾರಿಸುವಾಗ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಸಿಇಟಿ, ವಾರ್ಷಿಕ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಹೀಗೆ ಮುಂತಾದ ಪರೀಕ್ಷೆಗಳ ದಿನಾಂಕಗಳನ್ನು ನಿಗದಿಪಡಿಸುವ ಮೊದಲು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕುಪ್ಮ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಂಡರೆ ಉತ್ತಮ ಎಂಬ ಮನವಿಯನ್ನು ಮುಂದಿಡಲಾಯಿತು.