Advertisement

ಬೆಲೆ ಮೊದಲೇ ನಿಗದಿ ಮಾಡಿ

02:03 PM Feb 05, 2020 | Suhan S |

ಗದಗ: ರೈತರ ಬೆಳೆಗಳಿಗೆ ಮುಂಚಿತವಾಗಿ ಸೂಕ್ತ ಖರೀದಿ ಬೆಲೆ ನಿಗದಿಗೊಳಿಸುವುದು ಹಾಗೂ ಸಂಚಾರಿ ಖರೀದಿ ಕೇಂದ್ರ ವ್ಯವಸ್ಥೆಯನ್ನು ಜಾರಿಗೊಳಿಸಿದಲ್ಲಿ ರೈತರ ಬೆಳೆಗಳಿಗೆ ನ್ಯಾಯ ಸಮ್ಮತ ಬೆಲೆ ದೊರಕಲು ಸಾಧ್ಯವೆಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದರು.

Advertisement

ಜಿ.ಪಂ., ಕೃಷಿ ಇಲಾಖೆ ಹಾಗೂ ಐಸಿಎಆರ್‌ ಕೆ.ಎಚ್‌. ಪಾಟೀಲ, ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ನಡೆದ ಪಡಿತರ ವ್ಯವಸ್ಥೆಯಲ್ಲಿ ಅವಶ್ಯವಿರುವ ಹಿಂಗಾರು ಜೋಳ ಉತ್ಪಾದಿಸಿ, ವ್ಯವಸ್ಥೆ ಸದೃಢಗೊಳಿಸುವ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಸದ್ಯ 4 ಕೋಟಿ 60 ಲಕ್ಷ ಪಡಿತರ ಕಾರ್ಡ್‌ದಾರರಿದ್ದು, 2020- 21ನೇ ಸಾಲಿನ ಜನಗಣತಿ ಪ್ರಕಾರ ಸುಮಾರು 7 ಕೋಟಿ ಜನಸಂಖ್ಯೆ ನಿರೀಕ್ಷಿಸಲಾಗಿದೆ. ಹೀಗಾಗಿ ಭವಿಷ್ಯದಲ್ಲಿ 42 ಲಕ್ಷ ಟನ್‌ ಅಕ್ಕಿ, 10 ಲಕ್ಷ ಟನ್‌ ಜೋಳ ಹಾಗೂ 10 ಲಕ್ಷ ಟನ್‌ ರಾಗಿ ಪಡಿತರದಾರರಿಗೆ ಬೇಕಾಗುತ್ತದೆ. ಪಡಿತರದಾರರಿಗೆ ಕೇವಲ ಅಕ್ಕಿ ಮತ್ತು ಗೋಧಿ ನೀಡುತ್ತಿರುವುದರಿಂದ ಕೊಟ್ಟ ಅಕ್ಕಿಯನ್ನು ಮಾರಾಟ ಮಾಡಿ, ಜೋಳ ಖರೀದಿ ಮಾಡುತ್ತಿರುವ ಪ್ರಸಂಗಗಳು ಕಂಡುಬರುತ್ತಿದ್ದು, ಅಕ್ಕಿ ಮತ್ತು ಗೋಧಿಯ ಜೊತೆಗೆ ಜೋಳ ವಿತರಿಸಬೇಕು. ಇದರಿಂದ ಜೋಳದ ಉತ್ಪಾದನೆ ಹೆಚ್ಚುತ್ತಲ್ಲದೇ, ಪಡಿತರ ವ್ಯವಸ್ಥೆ ಸದೃಢಗೊಳಿಸಿದಂತಾಗುತ್ತದೆ. ಬೆಳೆಯ ಉತ್ಪಾದನೆಗಿಂತ ಮೊದಲೇ ಬೆಲೆ ನಿಗದಿಯಾದರೆ ಮಾರುಕಟ್ಟೆ ಹಾಗೂ ಉತ್ಪಾದನೆಗೆ ನಿರ್ದಿಷ್ಟತೆ ಬರುತ್ತದೆ. ಬೆಳೆ ವಿಮೆ ಯೋಜನೆ ನ್ಯೂನತೆಗಳಿರುವುದರಿಂದ ಯೋಜನೆಯ ಫಲ ಎಲ್ಲರಿಗೂ ದೊರಕುತ್ತಿಲ್ಲ ಎಂದು ಹನುಮನಗೌಡ ಬೆಳಗುರ್ಕಿ ಹೇಳಿದರು.

ತೋಟಗಾರಿಕಾ ಉತ್ಪಾದಕ ಸಂಘದ ಅಧ್ಯಕ್ಷ ಜೆ.ಆರ್‌. ಓದುಗೌಡರ ಮಾತನಾಡಿ, ಇಡೀ ವಿಶ್ವಕ್ಕೆ ಕೃಷಿಯ ಪಾಠ ಹೇಳಿದ ರಾಷ್ಟ್ರ ನಮ್ಮದು. ರೈತರಿಂದ ಖರೀದಿ ಮಾಡಿದ ಉತ್ಪಾದನೆ ರಪ್ತಾಗುವ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಬೇರೆ ದೇಶಗಳಿಗೆ ಅವಶ್ಯಕವಿರುವ ಬೆಳೆ ಬೆಳೆದು ರಫ್ತು ಮಾಡಿದರೆ ರೈತರ ಆದಾಯ ತನ್ನಿಂದ ತಾನೇ ದ್ವಿಗುಣಗೊಳ್ಳುತ್ತದೆ ಎಂದರು. ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪಟಿ.ಎಸ್‌. ಮಾತನಾಡಿ, ಪಡಿತರರಿಗೆ ಅಕ್ಕಿ, ಗೋಧಿ  ವಿತರಿಸುತ್ತಿರುವುದರಿಂದ ಜೋಳದ ಉತ್ಪಾದನೆ 80 ಸಾವಿರ ಹೆಕ್ಟೇರ್‌ ನಿಂದ 60 ಸಾವಿರ ಹೆಕ್ಟೇರ್‌ಗೆ ಇಳುವರಿ ಕಡಿಮೆಯಾಗಿದೆ. ಹೀಗಾಗಿ 20-30 ವರ್ಷಗಳಿಂದಿರುವ ಜೋಳದ ಹಳೆ ತಳಿಯ ಬದಲಾಗಿ ಪರ್ಯಾಯ ಹೊಸ ತಳಿ ಬರಬೇಕಿದೆ ಎಂದು ಮಾಹಿತಿ ನೀಡಿದರು.

ಕೃಷಿ ಉಪ ನಿರ್ದೇಶಕ ವೀರೇಶ ಹುನಗುಂದ, ಹುಲಕೋಟಿ ಕೃಷಿ ವಿಜ್ಞಾನ ಮುಖ್ಯಸ್ಥ ಎಲ್‌.ಜಿ.ಹಿರೇಗೌಡರ, ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರ ವೇದಿಕೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next