Advertisement

ಲಕ್ಷ್ಮೇಶ್ವರ: ಪೂರ್ವಭಾವಿ ಸಭೆ

04:15 PM Mar 31, 2022 | Team Udayavani |

ಲಕ್ಷ್ಮೇಶ್ವರ: ಏಪ್ರಿಲ್‌ 5 ರಂದು ಡಾ|ಬಾಬು ಜಗಜೀವನರಾಂ ಹಾಗೂ ಏ.14 ರಂದು ಡಾ|ಬಿ. ಆರ್‌.ಅಂಬೇಡ್ಕರ್‌ ಅವರ ಜಯಂತಿ ಆಚರಿಸುವ ಕುರಿತು ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

Advertisement

ಸಭೆಯಲ್ಲಿ ಲಕ್ಷ್ಮೇಶ್ವರ ತಾಲೂಕು ಮಟ್ಟದ ಅಧಿಕಾರಿಗಳ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮುಖಂಡರ, ಚುನಾಯಿತ ಜನಪ್ರತಿನಿಧಿಗಳ, ಗಣ್ಯರ, ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ, ನಾಡು ಕಂಡ ಶ್ರೇಷ್ಠರಲ್ಲಿ ಒಬ್ಬರಾದ ಡಾ|ಬಾಬು ಜಗಜೀವನರಾಂ ಅವರ ಜಯಂತಿಯನ್ನು ಏ.5 ರಂದು ಹಾಗೂ ಏ.14 ರಂದು ಡಾ|ಬಿ. ಆರ್‌.ಅಂಬೇಡ್ಕರ್‌ ಅವರ ಜಯಂತಿ ಆಚರಿಸಬೇಕಾಗಿದೆ. ಕಳೆದ 3-4 ವರ್ಷಗಳಿಂದ ಕಾರ್ಯಕ್ರಮಗಳನ್ನು ಸಂಕ್ಷಿಪ್ತವಾಗಿ ಆಚರಿಸಿದ್ದು, ಅದರಂತೆ ಈ ಬಾರಿಯೂ ಇಬ್ಬರೂ ಮಹಾನ್‌ ವ್ಯಕ್ತಿಗಳ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ಮಾಡಬೇಕಾಗಿದೆ. ಎಲ್ಲರ ಸಲಹೆ-ಸೂಚನೆಗಳನ್ನು ಗಣನೆಗೆ ತೆಗೆದುಕೊಂಡು ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸುವುದಾಗಿ ಹೇಳಿದರು.

ದಲಿತ ಸಂಘರ್ಷ ಸಮಿತಿ ತಾಲೂಕು ಮುಖಂಡರಾದ ಸುರೇಶ ನಂದೆಣ್ಣವರ, ಕೋಟೆಪ್ಪ ವರ್ದಿ, ನಾಗರಾಜ ದೊಡ್ಡಮನಿ, ರಾಮಣ್ಣ ಗಡದವರ ಅವರು ಲಕ್ಷ್ಮೇಶ್ವರ ಹೊಸ ತಾಲೂಕು ಕೇಂದ್ರವಾಗಿದ್ದು, ಈ ಬಾರಿ ಡಾ|ಬಾಬು ಜಗಜೀವನರಾಂ ಮತ್ತು ಡಾ|ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಬೇಕು. ಕಳೆದ 3-4 ವರ್ಷಗಳಿಂದ ಪ್ರಯತ್ನಿಸುತ್ತಿದ್ದು, ಕಾರಣಾಂತರಗಳಿಂದ ಕಾರ್ಯಕ್ರಮ ನಡೆಯುತ್ತಿಲ್ಲ. ಏ.31 ರ ಒಳಗಾಗಿ ಇಲಾಖೆ, ತಾಲೂಕು ಆಡಳಿತ ಹಾಗೂ ವಿವಿಧ ಸಂಘಟನೆಗಳೊಂದಿಗೆ ಅದ್ಧೂರಿ ಕಾರ್ಯಕ್ರಮಕ್ಕೆ ಅನುಮತಿ ನೀಡಲೇಬೇಕು. ನಾಲ್ಕು ಗೋಡೆಗಳ ಮಧ್ಯೆ ಆಚರಣೆ ಮಾಡಿದರೆ ಅಂತಹ ಶ್ರೇಷ್ಠರ ತತ್ವ ಸಿದ್ಧಾಂತಗಳು ಸಮಾಜಕ್ಕೆ ಮುಟ್ಟುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಸಾರ್ವಜನಿಕವಾಗಿ ಕಾರ್ಯಕ್ರಮ ಮಾಡಿ ಅವರ ಚರಿತ್ರೆ, ಸಂವಿಧಾನದ ಬಗ್ಗೆ ಸರಿಯಾದ ಮಾಹಿತಿ ನೀಡುವ ಮೂಲಕ ಶ್ರೇಷ್ಠರ ಸ್ಮರಣೆ ಮಾಡಬೇಕೆಂದು ಸಲಹೆ ನೀಡಿದರು.

ಸಭೆಯಲ್ಲಿ ಉಪತಹಶೀಲ್ದಾರ್‌ ಮಂಜುನಾಥ ದಾಸಪ್ಪನವರ, ತಾಪಂ ಇಒ ಆರ್‌.ವೈ.ಗುರಿಕಾರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉದಯಕುಮಾರ ಯಲಿವಾಳ, ಬಿಇಒ ಆರ್‌.ಎಸ್‌.ಬುರಡಿ, ಮುಖಂಡರಾದ ಮಹೇಶ ಲಮಾಣಿ, ಶಿವಣ್ಣ ಲಮಾಣಿ, ಅನಿಲ ಮುಳಗುಂದ, ಮನೋಹರ ಕರ್ಜಗಿ, ಥಾವರೆಪ್ಪ ಲಮಾಣಿ, ವಿಜಯಕುಮಾರ ಆಲೂರ ಫಕ್ಕೀರೇಶ ನಂದೆಣ್ಣವರ, ಸಾತಪೂತೆ, ರಾಮು ಅಡಗಿಮನಿ, ಸದಾನಂದ ನಂದೆಣ್ಣವರ, ನಂದಾ ನವಲೆ, ಪುರಸಭೆ ಸದಸ್ಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next