ಬೆಂಗಳೂರು:ರಾಜ್ಯ ಸರ್ಕಾರದ ಸಾಧನೆ ಜನರಿಗೆ ತಲುಪಿಸುವ “ಸಾಧನಾ ಸಂಭ್ರಮ’ ಯಾತ್ರೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಜನವರಿ 17 ರಿಂದ ಫೆಬ್ರವರಿ 3 ರ ವರೆಗೂ 2018-19 ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ನಡೆಸಲಿದ್ದು ಫೆಬ್ರವರಿ ಎರಡನೇ ವಾರದಲ್ಲಿ ಬಜೆಟ್ ಮಂಡನೆಯಾಗುವ ಸಾಧ್ಯತೆಯಿದೆ.
ಮುಖ್ಯಮಂತ್ರಿಯಾಗಿ ಐದನೇ ಹಾಗೂ ತಮ್ಮ ನೇತೃತ್ವದ ಸರ್ಕಾರದ ಕೊನೆಯ ಬಜೆಟ್ ಸಹ ಇದಾಗಿದೆ. ಈಗಾಗಲೇ ಬಜೆಟ್ ಪೂರ್ವಬಾವಿ ಚರ್ಚೆ ಸಂಬಂಧ ಎಲ್ಲ ಇಲಾಖೆಗಳಿಗೂ ಸೂಚನೆ ನೀಡಲಾಗಿದೆ.
ಮೂಲಗಳ ಪ್ರಕಾರ, ಜನವರಿ 17 ರಂದು ಸಿದ್ದರಾಮಯ್ಯ ಅವರು ಕೆಪಿಸಿ ಕಚೇರಿಯಲ್ಲಿ ವೈದ್ಯಕೀಯ ಶಿಕ್ಷಣ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ, ಕಾರ್ಮಿಕ ಇಲಾಖೆ, ಕೌಶಾಲ್ಯಭಿವೃದ್ಧಿ, ಅರಣ್ಯ ಮತ್ತು ಜೀವ ಶಾಸ್ತ್ರ, ಇಂಧನ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಜನವರಿ 18 ರಂದು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತರ ಸಂಘದ ಸಂಘಟನೆಗಳೊಂದಿಗೆ, ಜನವರಿ 20 ರಂದು ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಂದಾಯ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ , ಅಲ್ಪ ಸಂಖ್ಯಾತ ಮತ್ತು ವಕ್ಫ್ , ಜವಳಿ ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಜನವರಿ 22 ರಂದು ಜಲ ಸಂಪನ್ಮೂಲ, ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ, ನಗರಾಭಿವೃದ್ದಿ, ಪೌರಾಡಳಿತ, ಸಾರ್ವಜನಿಕ ಉದ್ದಿಮೆ, ಯುವ ಸಬಲೀಕರಣ ಹಾಗೂ ಮೀನುಗಾರಿಕೆ ಇಲಾಖೆ, ಜನವರಿ 25 ರಂದು ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ ಇಲಾಖೆ, ಜನವರಿ 29 ರಂದು ಗ್ರಾಮೀಣಾಭಿವೃದ್ಧಿ, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ, ವಾಣಿಜ್ಯ ಮತ್ತು ಬೃಹತ್ ಮತ್ತು ಸಣ್ಣ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ, ಸಕ್ಕರೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಸಭೆ ಕರೆದಿದ್ದಾರೆ.
ಜನವರಿ 30 ರಂದು ಸಹಕಾರ, ಯೋಜನೆ ಅನುಷ್ಠಾನ, ವಿಜ್ಞಾನ ತಂತ್ರಜ್ಞಾನ, ವಸತಿ, ಬೆಂಗಳೂರು ನಗರಾಭಿವೃದ್ಧಿ, ಮಹಾನಗರ ಪಾಲಿಕೆಗಳು ಮತ್ತು ಹಜ್ ಇಲಾಖೆಗೆ ಸಂಬಂಧಿಸಿದಂತೆ ಸಭೆ ನಡೆಸಲಿದ್ದು, ಜನವರಿ 31 ರಂದು ಗೃಹ, ಲೋಕೋಪಯೋಗಿ, ಸಾರಿಗೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಮತ್ತು ಡಿಪಿಎಆರ್ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ತೆರಿಗೆ ಇಲಾಖೆಗಳ ಸಭೆ
ಫೆಬ್ರವರಿ 1ರಂದು ವಾಣಿಜ್ಯ ಸಂಘ ಸಂಸ್ಥೆಗಳು, ಫೆಬ್ರವರಿ 2 ರಂದು ವಾಣಿಜ್ಯ, ಅಬಕಾರಿ, ಸಾರಿಗೆ, ಮುದ್ರಾಂಕ ನೋಂದಣಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಕೊನೆಯದಾಗಿ ರಾಜ್ಯ ಸರ್ಕಾರಿ ನೌಕರರೊಂದಿಗೂ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.