ಕಳೆದ ತಿಂಗಳಷ್ಟೇ ಪ್ಯಾಕ್‌ಗಳಲ್ಲಿ ಬರುವ ಅಗತ್ಯ ವಸ್ತುಗಳ ಮೇಲಿನ ಸರಕು ಮತ್ತು ಸೇವೆ ತೆರಿಗೆಯನ್ನು ಹೆಚ್ಚಳ ಮಾಡಲು ನಿರ್ಧರಿಸಲಾಗಿದ್ದು, ಸೋಮವಾರದಿಂದ ಇದು ಜಾರಿಗೆ ಬಂದಿದೆ.
ತೀರಾ ಮಧ್ಯಮ ವರ್ಗದವರು ಬಳಕೆ ಮಾಡುವ ಮೊಸರು, ಮಜ್ಜಿಗೆ, ಲಸ್ಸಿಯಂಥ ವಸ್ತುಗಳ ಮೇಲೆ ಈಗ ದರ ಹೆಚ್ಚಳವಾಗಿದೆ. ಈಗಾಗಲೇ ದರ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೂಂದು ಸುತ್ತಿನ ಹೊಡೆತ ಬಿದ್ದಂತಾಗಿದೆ.
ದರ ಹೆಚ್ಚಳವಾದ ಮೇಲೆ ಈಗ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ಸಮರವೂ ಜೋರಾಗಿದೆ. ವಿಶೇಷವೆಂದರೆ ಜಿಎಸ್‌ಟಿ ಮಂಡಳಿಯಲ್ಲಿ ಇಂಥ ನಿರ್ಧಾರ ತೆಗೆದುಕೊಳ್ಳುವಾಗ ಎಲ್ಲ ರಾಜ್ಯಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಆಗಲೇ ದರ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ಇದನ್ನು ತಡೆಯಬಹುದಾಗಿತ್ತು. ಆದರೆ ಈ ಬಗ್ಗೆ ಆಗ ಯಾವುದೇ ಕ್ರಮಕ್ಕೆ ಮುಂದಾಗದೆ ಈಗ ಜನರ ಮುಂದೆ ಕಣ್ಣೊರೆಸುವ ತಂತ್ರ ಅನುಸರಿಸ ಲಾಗುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಕೇವಲ ಮೊಸರು, ಮಜ್ಜಿಗೆ, ಲಸ್ಸಿಯಷ್ಟೇ ಅಲ್ಲ, ಬೇಳೆಕಾಳುಗಳು, ಬೆಲ್ಲ, ಹಿಟ್ಟು ಸೇರಿದಂತೆ ಹಲವಾರು ಅಗತ್ಯ ವಸ್ತುಗಳ ದರ ಏರಿಕೆಯಾಗಿದೆ. ಜಿಎಸ್‌ಟಿ ಮಂಡಳಿ ಹೇಳುವ ಪ್ರಕಾರ, ಈ ಎಲ್ಲ ಪದಾರ್ಥಗಳು ಪ್ಯಾಕ್‌ನಲ್ಲಿ ಬಂದರಷ್ಟೇ ಹೆಚ್ಚಳವಾಗುತ್ತದೆ. ಹಾಗೆಯೇ ಮಾರಾಟ ಮಾಡಿದರೆ ಅಥವಾ ಖರೀದಿಸಿದರೆ ಹೆಚ್ಚಳದ ಬಿಸಿ ತಗಲುವುದಿಲ್ಲ. ವಿಶೇಷವೆಂದರೆ ಬೇಳೆಕಾಳುಗಳು, ಹಿಟ್ಟು, ಅಕ್ಕಿ, ಗೋಧಿಯಂಥ ಪದಾರ್ಥಗಳು ಪ್ಯಾಕೇಜ್‌ನಲ್ಲಿಯೇ ಬರುವುದು. ಈ ವಸ್ತುಗಳ ದರವಂತೂ ಹೆಚ್ಚಾಗಿಯೇ ಆಗುತ್ತದೆ. ಜಿಎಸ್‌ಟಿ ಮಂಡಳಿ ಪ್ರಕಾರ, ಪೇಪರ್ ಕತ್ತರಿ, ಸ್ಪೂನ್‌ಗಳು, ಪೋರ್ಕ್, ಸ್ಕಿಮ್ಮರ್ಸ್, ಕೇಕ್ ಸರ್ವರ್ಸ್‌ಗಳು, ಪವರ್ ಆಧರಿತ ಪಂಪ್‌ಗ್ಳು, ಸಬ್‌ಮರ್ಮಿಸಬಲ್ ಪಂಪ್‌ಗ್ಳು, ಬೈಸಿಕಲ್ ಪಂಪ್‌ಗ್ಳ ದರ ಶೇ. 12ರಿಂದ ಶೇ.18ಕ್ಕೆ ಏರಿಕೆಯಾಗಿದೆ. ಮೊದಲೇ ಪ್ಯಾಕ್ ಮಾಡಿರುವ ಲೇಬಲ್ ಹಾಕಿರುವ ಬೇಳೆ ಕಾಳುಗಳು, ಅಕ್ಕಿ, ಗೋಧಿ, ಗೋಧಿ ಹಿಟ್ಟಿನ ಮೇಲೆ ಶೇ. 5ರಷ್ಟು ಜಿಎಸ್‌ಟಿ ಹಾಕಲಾಗಿದೆ.
ಜತೆಗೆ ಹೊಟೇಲ್ ಉದ್ಯಮದ ಮೇಲೂ ಜಿಎಸ್‌ಟಿ ದರ ಏರಿಕೆ ಪೆಟ್ಟು ನೀಡುವ ಸಾಧ್ಯತೆ ಇದೆ. ಒಂದು ಸಾವಿರದ ಒಳಗಿನ ಕೊಠಡಿ ಬಾಡಿಗೆ ಮೇಲೆ ಈಗ ಶೇ. 12ರಷ್ಟು ಜಿಎಸ್‌ಟಿ ಹಾಕಲಾಗುತ್ತದೆ. ಇನ್ನು ಬ್ಯಾಂಕ್ ಚೆಕ್‌ಗಳು ಶೇ. 18, ಎಲ್‌ಇಡಿ ಲ್ಯಾಂಪ್ಸ್ ಶೇ. 18, ಆಸ್ಪತ್ರೆಯಲ್ಲಿನ 5 ಸಾವಿರಕ್ಕಿಂತ ಹೆಚ್ಚಿನ ಬಾಡಿಗೆಯ ಕೊಠಡಿ ಮೇಲೂ ಶೇ. 18ರಷ್ಟು ಜಿಎಸ್‌ಟಿ ಬೀಳಲಿದೆ. ಮೇಲೆ ಹೇಳಿದ ಬಹುತೇಕ ಸರಕು, ಸೇವೆಗಳನ್ನು ಹೆಚ್ಚಾಗಿ ಬಳಕೆ ಮಾಡುವುದು ಮಧ್ಯಮ ವರ್ಗದವರೇ. ಈಗಾಗಲೇ ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆಯಾಗಿ ಜನ ಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಇಂಥ ಹೊತ್ತಿನಲ್ಲೇ ಮತ್ತೆ ಈ ವಸ್ತುಗಳ ದರ ಏರಿಕೆ ಮಾಡಿರುವುದರಿಂದ ಜನಸಾಮಾನ್ಯರಿಗೆ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ಹಣದುಬ್ಬರ ಏರಿಕೆಯಾಗಿ ದ್ದರಿಂದ ಆರ್‌ಬಿಐ ಕೂಡ ಬಡ್ಡಿದರ ಏರಿಕೆ ಮಾಡುವ ಮೂಲಕ ಗೃಹ ಮತ್ತು ವಾಹನ ಖರೀದಿದಾರರಿಗೆ ಶಾಕ್ ನೀಡಿಯಾಗಿದೆ. ಇದರಿಂದ ಉಳಿತಾಯ ಮಾಡುವವರಿಗೆ ಲಾಭವಾಗಲಿದೆ ಎಂದು ಹೇಳಬಹು ದಾದರೂ ಗೃಹ ಮತ್ತು ವಾಹನೋದ್ಯಮಕ್ಕೆ ಪೆಟ್ಟು ಬೀಳುವುದು ಖಂಡಿತ. ಹೀಗಾಗಿ ಈಗ ಏರಿಕೆ ಮಾಡಿರುವ ಜಿಎಸ್‌ಟಿಯನ್ನು ಕಡಿಮೆ ಮಾಡಿ ಜನರಿಗೆ ಕೊಂಚ ಮಟ್ಟಿಗಾದರೂ ನಿರಾಳತೆ ನೀಡಬೇಕು.