Advertisement

ಕೋವಿಡ್‌ ಗೆಲ್ಲಲಿ ಎಸ್‌ಪಿಬಿ: ಸಂಗೀತ ಪ್ರೇಮಿಗಳ ಮಧುರ ದನಿಯ ಆಲಾಪ

10:05 PM Aug 23, 2020 | Karthik A |

ಅದೊಂದು ಕಾಲವಿತ್ತು… ತೆಲುಗಿನಲ್ಲಿ ಘಂಟಸಾಲ, ತಮಿಳಿನಲ್ಲಿ ಸೌಂದರ್ಯರಾಜನ್‌, ಕನ್ನಡದಲ್ಲಿ ಪಿ.ಬಿ. ಶ್ರೀನಿವಾಸ್‌ರಂತಹ ಘಟಾನುಘಟಿಗಳು ಆಯಾಯ ಭಾಷೆಯ ಚಿತ್ರರಂಗದ ಹಿನ್ನೆಲೆ ಗಾಯನದಲ್ಲಿ ಸಾರ್ವಭೌಮರಾಗಿ ಮೆರೆಯುತ್ತಿದ್ದರು.

Advertisement

ಇಂತಹ ಸಮಯದಲ್ಲಿ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಎಂಬ ಯುವ ಗಾಯಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

ಚಿತ್ರರಂಗವೂ ಮಧುರ ದನಿಗೆ ಮನಸೋತು ಇವರನ್ನು ಅಪ್ಪಿಕೊಂಡುಬಿಟ್ಟಿತು.

ಅಂದಿನಿಂದ ಈ ಎಲ್ಲ ಭಾಷೆಗಳಲ್ಲೂ ಇವರದ್ದೇ ಹವಾ.

ದಕ್ಷಿಣ ಭಾರತ ಚಿತ್ರರಂಗ ಇವರ ದನಿಗೆ, ಹಾಡಿನಲ್ಲಿ ಮಾರ್ಧನಿಸುತ್ತಿದ್ದ ಭಾವಕ್ಕೆ ಅಕ್ಷರಶಃ ಬೆರಗಾಗಿಬಿಟ್ಟಿತ್ತು.

Advertisement

ಶ್ರೀಪತಿ ಪಂಡಿತರಾದ್ಯುಲ ಬಾಲಸುಬ್ರಹ್ಮಣ್ಯಂ ಅವರು ಹುಟ್ಟಿದ್ದು 1946ರ ಜೂನ್‌ 4ರಂದು ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾ ಎಂಬಲ್ಲಿನ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ.

ಬಾಲು ವ್ಯವಸ್ಥಿತವಾಗಿ ಸಂಗೀತ ಕಲಿಯಲಿಲ್ಲ. ಹರಿಕಥೆ ಹೇಳುತ್ತಿದ್ದ ತಂದೆ ಎಸ್‌.ಪಿ. ಸಾಂಬಮೂರ್ತಿ ಅವರೇ ಅವರಿಗೆ ಪ್ರೇರಣೆ. ಹಾಡುವುದನ್ನು, ಹಾರ್ಮೋನಿಯಂ, ಕೊಳಲನ್ನು ತಮ್ಮಷ್ಟಕ್ಕೆ ತಾವು ನುಡಿಸುತ್ತಾ ಸಂಗೀತದ ಮೇರು ಪರ್ವತವೇ ಆದರು. ಮುಂದೆ ಪ್ರಸಿದ್ಧಿ ಪಡೆದ ಅನಂತರದಲ್ಲಿ ವಿಧೇಯ ವಿದ್ಯಾರ್ಥಿಯಂತೆ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದರು.

1966ರ ವರ್ಷದಲ್ಲಿ ಬಾಲು ಅವರು, ಘಂಟಸಾಲಾ ಮತ್ತು ಎಸ್‌.ಪಿ. ಕೋದಂಡಪಾಣಿ ತೀರ್ಪುಗಾರರಾಗಿದ್ದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದರು. ಇಬ್ಬರಿಂದಲೂ ಅವರಿಗೆ ಮೆಚ್ಚುಗೆಯ ಸುರಿಮಳೆಯಾಯಿತು.

ಕೋದಂಡಪಾಣಿಯವರು ತಮ್ಮ ತೆಲುಗು ಚಿತ್ರ “ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ’ದಲ್ಲಿ ಹಾಡಲು ಬಾಲೂಗೆ ಅವಕಾಶ ನೀಡಿದರು.

ಕನ್ನಡದಲ್ಲಿ ಒಂದೇ ದಿನ 17 ಗೀತೆಗಳನ್ನು ಧ್ವನಿಮುದ್ರಿಸಿದ್ದರು, ಹಿಂದಿಯಲ್ಲಿ ಒಂದೇ ದಿನ 16 ಹಾಡುಗಳನ್ನು ಧ್ವನಿಮುದ್ರಿಸಿದ್ದರು. ಇದು ಎಸ್‌ಪಿಬಿ ಅವರ ಸಾಮರ್ಥ್ಯ, ಅವರಿಗಿದ್ದ ಬೇಡಿಕೆ, ಅವರಿಗಿರುವ ಹೃದಯ ವೈಶಾಲ್ಯತೆಗೆ ನಿದರ್ಶನ. ಸಂಗೀತ ಪ್ರಧಾನವಾದ ಭಾರತೀಯ ಚಿತ್ರರಂಗದಲ್ಲಿ ಒಂದು ರೀತಿಯಲ್ಲಿ ಹಿನ್ನೆಲೆ ಗಾಯಕರು ಅಭಿನಯಿಸುವವರ ಆತ್ಮವಿದ್ದಂತೆ.  ಎಸ್‌.ಪಿ.ಬಿ. ಗಾಯನದಲ್ಲಷ್ಟೇ ಅಲ್ಲದೆ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆ ನಿರಂತರವಾದ ಸಾಧನೆ ಮಾಡಿದ್ದರು.

ಸಾಧನೆಯ ಮೇರು ಪರ್ವತ
ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ದನಿಯಾಗಿರುವ ಅವರು ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಮೊದಲಿಗರಾಗಿದ್ದಾರೆ. ಪದ್ಮಶ್ರೀ, ಪದ್ಮಭೂಷಣ, 25 ಬಾರಿ ಆಂಧ್ರ ಪ್ರದೇಶ ಸರಕಾರದ ನಂದಿ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಸಂಗೀತ ಸಾಧನೆಗೆ ಹಲವು ವಿಶ್ವವಿದ್ಯಾನಿಲಯಗಳು ತಾಮುಂದು ತಾಮುಂದು ಎಂಬಂತೆ ಹಲವು ಡಾಕ್ಟರೇಟ್‌ಗಳು ನೀಡಿವೆ.

ಬಾಲಿವುಡ್‌ಗೂ ಬೆನ್ನೆಲುಬು
ಬಾಲಿವುಡ್‌ ಸಂಗೀತದ ಅಗ್ರಜರಾದ ಮಹಮ್ಮದ್‌ ರಫಿ, ಕಿಶೋರ್‌ ಕುಮಾರ್‌ ಅವರು ಅಗಲಿದಾಗ ಬಾಲಿವುಡ್‌ ಸಂಗೀತ ಲೋಕದಲ್ಲಿ ಶೂನ್ಯ ಅಡರಿತ್ತು. ಆ ಸಮಯದಲ್ಲಿ ಏಕ್‌ ದೂಜೆ ಕೇಲಿಯೇ ಸಿನೆಮಾ ಹಾಡಿನ ಮೂಲಕ ಕಂಗಾಲಾಗಿದ್ದ ಬಾಲಿವುಡ್‌ನ‌ಲ್ಲಿ ಹೊಸ ಚೈತನ್ಯ ತುಂಬಿದರು.

ಇವರ ಹಾಡಿನಲ್ಲಿ ಮಾಂತ್ರಿಕತೆ
ಬಾಲಸುಬ್ರಹ್ಮಣ್ಯಂ ಅವರ ಎಲ್ಲ ಹಾಡುಗಳಲ್ಲೂ ಚಿತ್ರದ ಸನ್ನಿವೇಷಕ್ಕೆ ತಕ್ಕಂತೆ ಹಾಡಿನ ಭಾವವೂ ಅಡಕವಾಗಿರುತ್ತಿತ್ತು. ಹಾಡೇ ಅಷ್ಟು ಭಾವಪೂರ್ಣವಾಗಿರುವಾಗ ನಟರಿಗೆ ಜೀವತುಂಬುವ ಕಾರ್ಯ ತುಂಬಾ ಸುಲಭ. ವಿಷ್ಣುವರ್ಧನ್‌ ಅವರ ಪ್ರತಿ ಚಿತ್ರದಲ್ಲೂ ಎಸ್‌ಪಿಬಿ ದನಿಯೇ ಇರುತ್ತಿತ್ತು. ವಿಷ್ಣು ಶರೀರವಾದರೆ ಬಾಲು ಆತ್ಮದಂತಿದ್ದರು. ಕನ್ನಡದ ಅಗ್ರನಟರಾದ ರಾಜ್‌ಕುಮಾರ್‌, ಅಂಬರೀಶ್‌, ಅನಂತ್‌ನಾಗ್‌, ಶಂಕರ್‌ನಾಗ್‌, ಶ್ರೀನಾಥ್‌, ರವಿಚಂದ್ರನ್‌, ಶಿವರಾಜ್‌ಕುಮಾರ್‌ ಸೇರಿದಂತೆ ಅನ್ಯ ರಾಜ್ಯದ ರಜನಿಕಾಂತ್‌, ಕಮಲ್‌ಹಾಸನ್‌, ಚಿರಂಜೀವಿ, ಎಂ.ಜಿ.ಆರ್‌., ಶಿವಾಜಿ ಗಣೇಶನ್‌, ಎನ್‌.ಟಿ. ರಾಮರಾವ್‌, ಅಕ್ಕಿನೇನಿ ಮೊದಲಾದವರ ಅನೇಕ ಚಿತ್ರಗಳ ಹಾಡುಗಳಿಗೆ ಭಾವ ತುಂಬುವ ಕಾರ್ಯವನ್ನು ಬಾಲು ನಿರಂತರವಾಗಿ ಮಾಡುತ್ತಾ ಬಂದಿದ್ದರು.

ಅಂತಹ ಮೇರು ಕಲಾವಿದನೀಗ ಕೋವಿಡ್‌ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ದೇಶಾದ್ಯಂತ ಸಂಗೀತ ಪ್ರೇಮಿಗಳೆಲ್ಲರೂ ಬಾಲು ಬೇಗ ಗುಣಮುಖರಾಗಿ ಬರಲಿ ಎಂದು ಎಲ್ಲೆಡೆ ಪ್ರಾರ್ಥಿಸುತ್ತಿದ್ದಾರೆ. ಸಂಗೀತ ಪ್ರೇಮಿಗಳ ಪ್ರಾರ್ಥನೆ, ಹಾರೈಕೆ ಫ‌ಲಿಸಲಿ, ಎಸ್‌ಪಿಬಿ ಕೋವಿಡ್‌ ಗೆದ್ದು ಬಂದು ಮತ್ತೆ ವೇದಿಕೆಗಳಲ್ಲಿ ಮಿಂಚುವಂತಾಗಲಿ ಎಂಬುದು ನಮ್ಮ ಆಶಯ.

 ಹಿರಣ್ಮಯಿ 

 

Advertisement

Udayavani is now on Telegram. Click here to join our channel and stay updated with the latest news.

Next