ನವದೆಹಲಿ:ಒಂದೇ ಕುಟುಂಬದ ಐವರನ್ನು ಬರ್ಬರವಾಗಿ ಹತ್ಯೆಗೈದಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಪ್ರಯಾಗ್ ರಾಜ್ ನ ಮನೆಯೊಂದರಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಏಕಾಏಕಿ ದಾಳಿ ನಡೆಸಿ, ಹರಿತವಾದ ಆಯುಧದಿಂದ ಕೊಲ್ಲಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ:ಸಕ್ಕರೆ ಕಾರ್ಖಾನೆಯಲ್ಲಿ 1 ರೂ. ಅವ್ಯವಹಾರ ಸಾಬೀತಾದರೂ ರಾಜಕೀಯ ನಿವೃತ್ತಿ: ಯಶವಂತರಾಯಗೌಡ
ಐವರನ್ನು ಹತ್ಯೆಗೈದ ನಂತರ ಇಡೀ ಮನೆಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿರುವುದಾಗಿ ವರದಿ ತಿಳಿಸಿದೆ. ಈ ಘಟನೆ ಬಳಿಕ ಸ್ಥಳೀಯರಲ್ಲಿ ಭಯ ಮೂಡಿಸಿದ್ದು, ಈ ಮೊದಲು ಜಿಲ್ಲೆಯಲ್ಲಿ ಇಂತಹದ್ದೇ ಘಟನೆ ನಡೆದಿರುವುದಾಗಿ ವರದಿ ವಿವರಿಸಿದೆ.
ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ವಿಧಿವಿಜ್ಞಾನ ತಜ್ಞರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದೊಂದು ಪೈಶಾಚಿಕ ಕೃತ್ಯವಾಗಿದೆ. ಪ್ರಾಥಮಿಕ ತನಿಖೆಯ ನಂತರ ಕೊಲೆಯ ಹಿಂದಿನ ಉದ್ದೇಶ ಏನು ಎಂಬುದು ಬಹಿರಂಗವಾಗಲಿದೆ ಎಂದು ಎಡಿಜಿ ಪ್ರಶಾಂತ್ ಕುಮಾರ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ವಿಪರೀತ ಸೆಖೆಯ ಹಿನ್ನೆಲೆಯಲ್ಲಿ ಇವರೆಲ್ಲಾ ಮನೆಯ ಅಂಗಳದಲ್ಲಿ ಮಲಗಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ತುಂಬಾ ಹರಿತವಾದ ಆಯುಧದಿಂದ ಬರ್ಬರವಾಗಿ ಹತ್ಯೆಗೈದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಮನೆಗೆ ಬೆಂಕಿ ಹಚ್ಚಿದ್ದರಿಂದ ಹೊಗೆ ಬರಲು ಆರಂಭಿಸಿತ್ತು, ಆಗ ಸ್ಥಳೀಯ ನಿವಾಸಿಗಳು ಹೊರಗೆ ಬಂದು ಘಟನಾ ಸ್ಥಳಕ್ಕೆ ಹೋದಾಗ ಐವರನ್ನು ಬರ್ಬರವಾಗಿ ಹತ್ಯೆಗೈದಿರುವುದು ಬೆಳಕಿಗೆ ಬಂದಿತ್ತು ಎಂದು ವರದಿ ವಿವರಿಸಿದೆ.