Advertisement

ಪ್ರಧಾನ್‌ ಎದುರೇ ವಿನಯ್‌-ಬೆಲ್ಲದ ಜಟಾಪಟಿ

02:41 PM Jun 18, 2017 | Team Udayavani |

ಧಾರವಾಡ: ನಗರದಲ್ಲಿ ಶನಿವಾರ ನಡೆದ 71 ಕೋಟಿ ರೂ. ವೆಚ್ಚದ ಜುಬಿಲಿ ವೃತ್ತದಿಂದ ನರೇಂದ್ರ ಕ್ರಾಸ್‌ ವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವ ಕಾರ್ಯಕ್ರಮ ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ ಕುಲಕರ್ಣಿ ಮತ್ತು ಶಾಸಕ ಅರವಿಂದ ಬೆಲ್ಲದ ಅವರ ಮಧ್ಯದ ವಾಕ್‌ ಸಮರಕ್ಕೆ ವೇದಿಕೆಯಾಯ್ತು. 

Advertisement

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಭೂಮಿಪೂಜೆ ನೆರವೇರಿಸಿದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತ, ಈ ರಸ್ತೆ ಅಭಿವೃದ್ಧಿಗೆ ಬಿಜೆಪಿ ಸಚಿವರು, ಸಂಸದರು ಮತ್ತು ಶಾಸಕರು ಶ್ರಮಿಸಿದ್ದಾರೆ ಎಂದಷ್ಟೇ  ಹೇಳಿ, ಸಚಿವ ವಿನಯ್‌ ಕುಲಕರ್ಣಿ ಅವರಿಗೆ ಕಾಂಗ್ರೆಸ್‌ನ ಸಚಿವ ವಿನಯ್‌ ಕುಲಕರ್ಣಿ ಎಂದು ಸಂಬೋಧಿಸಿದ್ದಕ್ಕೆ ಆ ಕ್ಷಣವೇ ಆಕ್ಷೇಪ ವ್ಯಕ್ತಪಡಿಸಿದ  ಸಚಿವ ವಿನಯ್‌, ಇದು ಸರಿಯಲ್ಲ.

ಈ ರಸ್ತೆಗೆಎಲ್ಲರೂ ದುಡಿದಿದ್ದೇವೆ. ಸರಿಯಾಗಿ ಹೇಳು ಎಂದು  ಎಚ್ಚರಿಸಿದರು. ಪರಿಸ್ಥಿತಿಯನ್ನು ಗಮನಿಸಿದ ಶಾಸಕ ಅರವಿಂದ ಬೆಲ್ಲದ, ಜಿಲ್ಲಾ ಉಸ್ತುವಾರಿ ಸಚಿವವಿನಯ್‌ ಕುಲಕರ್ಣಿ ಅವರ ಹೆಸರನ್ನೂ ಹೇಳಿದಾಗ ಸಚಿವರ ಕೋಪ ಕೊಂಚ ತಣ್ಣಗಾಯಿತು. 

ವಿನಯ್‌ ನೀತಿ ಪಾಠ: ತಮ್ಮ ಮಾತಿನ ಸರದಿ ಬರುತ್ತಿದ್ದಂತೆ ಸಚಿವ ವಿನಯ್‌ ನೇರವಾಗಿ ಬಿಜೆಪಿ ಮುಖಂಡರನ್ನು, ಶಾಸಕ ಅರವಿಂದ ಬೆಲ್ಲದ ಅವರನ್ನು ವೇದಿಕೆ ಮೇಲೆ ಅದರಲ್ಲೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌, ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಸಂಸದ ಪ್ರಹ್ಲಾದ ಜೋಶಿ ಸೇರಿದಂತೆ ಎಲ್ಲರ ಎದುರೇ ತೀವ್ರ ತರಾಟೆಗೆ ತೆಗೆದುಕೊಂಡರು.  

ರಾಜ್ಯ ಸರ್ಕಾರದ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಕಿಕೊಳ್ಳುವುದು ಸರಿಯಲ್ಲ. ಅರವಿಂದ ಬೆಲ್ಲದ ಅವರಿಗೆ ಪ್ರಚಾರದ ಹುಚ್ಚು ಮತ್ತು ಬ್ಯಾನರ್‌ ಹುಚ್ಚು ಹಿಡಿದಿದೆ. ನಿಮ್ಮ ಕ್ಷೇತ್ರದಲ್ಲಿರುವ ಶೇ. 80ರಷ್ಟು ಕಾಮಗಾರಿಗಳಿಗೆ ರಾಜ್ಯ ಸರ್ಕಾರ ದುಡ್ಡು ಕೊಟ್ಟರೂ, ಕೇಂದ್ರ ಸರ್ಕಾರದ ಹೆಸರು ಯಾಕೆ ಹಾಕಿಕೊಳ್ಳುತ್ತೀರಿ? ಅದನ್ನು ಕಡಿಮೆ ಮಾಡಿ.

Advertisement

ನಾವು ಬರುವುದಕ್ಕೆ ಮುಂಚೆಯೇ ಹುಬ್ಬಳ್ಳಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೀರಿ, ಇದು ಎಷ್ಟು ಸರಿ? ಈ ಬೂಟಾಟಿಕೆಯನ್ನು ಇನ್ನಾದರೂ ಬಿಟ್ಟು ಬುದ್ಧಿ ಹೇಳಿಸಿಕೊಳ್ಳದಂತೆ ಕೆಲಸ ಮಾಡಿ ಎಂದು ಸಲಹೆ ನೀಡಿದರು. 

ಬೆಲ್ಲದ ತಿರುಗೇಟು: ಇದಕ್ಕೆ ತಿರುಗೇಟು ನೀಡಿದ ಶಾಸಕ ಅರವಿಂದ ಬೆಲ್ಲದ, ನನಗೆ ಯಾವ ಪೋಸ್ಟರ್‌ ಹಾಕಿಕೊಳ್ಳುವ ಹುಚ್ಚಿಲ್ಲ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ಅಷ್ಟೇ. ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ, ಕೇಂದ್ರ ಮತ್ತು ವಿಶ್ವಬ್ಯಾಂಕ್‌ ಸೇರಿದಂತೆ ಬೇರೆ ನೆರವು ಕೂಡ ದೊರೆತಿದೆ.

ಹೀಗಾಗಿ ಮೋದಿ ಅವರ ಭಾವಚಿತ್ರ ಹಾಕಿಕೊಂಡಿದ್ದೇನೆ. ರಾಜ್ಯ ಸರ್ಕಾರ ಕೊಡುವ ಅನ್ನಭಾಗ್ಯ ಅಕ್ಕಿಯಲ್ಲಿ ಶೇ.29ರಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡುತ್ತದೆ? ಹಾಗಿದ್ದರೆ ಅದಕ್ಕೂ ಮೋದಿ ಅವರ ಭಾವಚಿತ್ರ ಹಾಕುವಂತೆ ಹೇಳಿ ಎಂದು ತಿರುಗೇಟು ನೀಡಿದರು. 

ಜೈಕಾರ್‌ದ ಮುಜುಗರ: ತುಂಬಿದ ಬಿಜೆಪಿ ಸಭೆಯಲ್ಲಿ ಕಾಂಗ್ರೆಸ್‌ನ ಒಬ್ಬನೇ ಒಬ್ಬ ಸಚಿವ ವಿನಯ್‌ ಕುಲಕರ್ಣಿ ನೇರವಾಗಿ ಬಿಜೆಪಿಯವರನ್ನು ತರಾಟೆಗೆ ತೆಗೆದುಕೊಂಡಾಗ ಸಭೆಯಲ್ಲಿದ್ದ ವಿನಯ್‌ ಬೆಂಬಲಿಗರು ಸಚಿವ ವಿನಯ್‌ ಕುಲಕರ್ಣಿಗೆ ಜೈಕಾರ ಹಾಕಿದರು.

ನಂತರ ಶಾಸಕ ಅರವಿಂದ ಬೆಲ್ಲದ ಅವರು ತಿರುಗೇಟು ನೀಡಿದಾಗ ಸಭೆಯಲ್ಲಿದ್ದ ಎಲ್ಲರೂ ಅರವಿಂದ ಬೆಲ್ಲದ ಅವರಿಗೂ ಮೇಲಿಂದ ಮೇಲೆ ಜೈಕಾರ ಹಾಕಿದ್ದು ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆಯುವ ಹಂತ ತಲುಪಿತು.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ವಿಮಾನದ ಸಮಯವಾಯಿತು ಎಂದು ಹೇಳಿ ಹೊರಟು ಅಣಿಯಾಗಿ ನಿಂತಿದ್ದು, ರಾಜ್ಯ ಬಿಜೆಪಿ ಮುಖಂಡರಿಗೆ ಸಚಿವ ವಿನಯ್‌ ಆಕ್ಷೇಪ ವ್ಯಕ್ತಪಡಿಸಿದ್ದು, ಶಾಸಕ ಬೆಲ್ಲದ ತಿರುಗೇಟು ನೀಡಿದ್ದು ಎಲ್ಲವೂ ತೀವ್ರ ಮುಜುಗರವನ್ನುಂಟು ಮಾಡಿತು. ಕೊನೆಗೆ ಸಚಿವರಾದಿಯಾಗಿ ಬಿಜೆಪಿ ಮುಖಂಡರು ವೇದಿಕೆಯಿಂದ ತಕ್ಷಣವೇ ಕೆಳಗಿಳಿದು ಹೊರಟರು.

ಅವರನ್ನೇ ಹಿಂಬಾಲಿಸಿದ ಸಚಿವ ತಮ್ಮ ಕಾರ್ಯಕರ್ತರೊಂದಿಗೆ ಜುಬಿಲಿ ವೃತ್ತದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಹೊರಟರು. ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ, ಶಾಸಕರಾದ ಬಸವರಾಜ ಬೊಮ್ಮಾಯಿ, ಪ್ರದೀಪ ಶೆಟ್ಟರ, ಮಾಜಿ ಶಾಸಕಿ ಸೀಮಾ ಮಸೂತಿ, ಮೇಯರ್‌ ಡಿ.ಕೆ. ಚವ್ಹಾಣ ಹಾಗೂ ಬಿಜೆಪಿ ಪದಾಧಿಕಾರಿಗಳಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next