Advertisement

ಪಾರ್ವತಮ್ಮ ರಾಜಕುಮಾರ್‌ಗೆ ಶ್ರದ್ಧಾಂಜಲಿ

12:00 PM Jun 06, 2017 | |

ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್‌ ನಿಧನದ ಹಿನ್ನೆಲೆಯಲ್ಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೋಮವಾರ ಶ್ರದ್ಧಾಂಜಲಿ ಸಭೆ ಏರ್ಪಡಿಸಿತ್ತು. ಸಭೆಯಲ್ಲಿ ಕನ್ನಡ ಚಿತ್ರರಂಗದ ಗಣ್ಯರು, ನಿರ್ಮಾಪಕರು, ನಿರ್ದೇಶಕರು, ಹಿರಿತೆರೆ ಹಾಗೂ ಕಿರುತೆರೆ ನಟ,ನಟಿಯರು ಒಕ್ಕೂಟದ ಕಾರ್ಯಕರ್ತರು ಸೇರಿದಂತೆ ಹಲವರು ಆಗಮಿಸಿ ಪಾರ್ವತಮ್ಮ ರಾಜಕುಮಾರ್‌ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿದರು.

Advertisement

ಈ ವೇಳೆ ಹಿರಿಯ ಕಲಾವಿದೆ ಬಿ.ಸರೋಜಾದೇವಿ ಮಾತನಾಡಿ, “ರಾಜಕುಮಾರ್‌ ಮತ್ತು ಪಾರ್ವತಮ್ಮ ಇವರಿಬ್ಬರೂ ನಮ್ಮೊಂದಿಗೆ ಇದ್ದಾರೆ. ಮಡ್ರಾಸ್‌ನಲ್ಲಿದ್ದಾಗ ಪಾರ್ವತಮ್ಮ ಅವರ ಪರಿಚಯವಾಗಿ, ಆ ಗೆಳೆತನ ಇಲ್ಲಿಯವರೆಗೂ ಗಟ್ಟಿಯಾಗಿದೆ. ರಾಜಕುಮಾರ್‌ ಪ್ರಸಿದ್ಧಿ ಪಡೆದರೂ ಪಾರ್ವತಮ್ಮ ಅವರಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಇಬ್ಬರಲ್ಲೂ ಹೊಂದಾಣಿಕೆ ಇತ್ತು. ರಾಜಕುಮಾರ್‌ ಅವರು ಪಾರ್ವತಮ್ಮ ಒಪ್ಪಿದ ಕಥೆ, ಕಾದಂಬರಿಯನ್ನೇ ಸಿನಿಮಾ ಮಾಡುತ್ತಿದ್ದರು. ಸೂರ್ಯ, ಚಂದ್ರ ಇರುವವರೆಗೂ ರಾಜಕುಮಾರ್‌, ಪಾರ್ವತಮ್ಮ ಹೆಸರು ಇದ್ದೇ ಇರುತ್ತೆ’ ಎಂದರು.

ನಟ, ನಿರ್ಮಾಪಕ ದ್ವಾರಕೀಶ್‌ ಮಾತನಾಡಿ,”ಪಾರ್ವತಮ್ಮ ಮಿಂಚು ಇದ್ದಂತೆ. 1961ರಿಂದಲೂ ಪಾರ್ವತಮ್ಮ ಅವರ ಪರಿಯವಿದೆ. ಆಗ ನಾನಿನ್ನೂ ಮಡ್ರಾಸ್‌ನಲ್ಲಿದ್ದೆ. ಒಮ್ಮೆ ಪಾರ್ವತಮ್ಮ ಸಿಕ್ಕಿ, “ಏನ್‌ ದ್ವಾರಕೀಶ್‌ ಬೆಂಗಳೂರಿಗೆ ಬರಲ್ವ’ ಅಂದಿದ್ದರು. ಆಗ ನಾನು, ಇದ್ದ ಮನೆ ಮಾರಿಕೊಂಡಿದ್ದೇನೆ ಅಲ್ಲಿಗೆ ಹೇಗೆ ಬಂದಿರಲಿ’ ಅಂದಾಗ, ದ್ವಾರಕೀಶ್‌ ಬೆಂಗಳೂರಲ್ಲಿ ನಿಮಗೆ ಇಷ್ಟವಾದ ಮನೆ ತೋರಿಸಿ, ನಾನು ಕೊಡಿಸ್ತೀನಿ’ ಅಂದಿದ್ದರು. ಅವರೊಬ್ಬ ಲೀಡರ್‌’ ಎಂದು ದ್ವಾರಕೀಶ್‌ ಹೇಳಿದರು.

ಪಾರ್ವತಮ್ಮ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಟಿ ಜಯಮಾಲ, ಎರಡು ನಿಮಿಷಗಳ ಕಾಲ ಮೈಕ್‌ ಹಿಡಿದು ಮಾತನಾಡದೆ, ಭಾವುಕರಾದರು. ಭಾವುಕತೆಯಲ್ಲೇ ಮಾತಿಗಿಳಿದರು. “ಇವತ್ತು ಈ ಜಾಗದಲ್ಲಿ ನಿಂತಿದ್ದೇನೆ ಅಂದರೆ ಅದಕ್ಕೆ ಕಾರಣ ಪಾರ್ವತಮ್ಮ ಕಾರಣ. 1975ರಿಂದ ಇಂದಿನವರೆಗೂ ನನ್ನೆಲ್ಲಾ ಸುಖ-ದುಃಖದಲ್ಲಿ ಭಾಗಿಯಾಗಿ, ನನಗೆ ಧೈರ್ಯ ತುಂಬುತ್ತಿದ್ದ ಮಹಾನ್‌ ತಾಯಿ ಅವರು. ಅವರ ಸಹಕಾರ ಇರದೇ ಇದ್ದಿದ್ದರೆ, ನಾನು ಸಿನಿಮಾ ರಂಗ ಪ್ರವೇಶ ಮಾಡುತ್ತಿರಲಿಲ್ಲ.

ಅವರು ಆಯ್ಕೆ ಮಾಡದೇ ಹೋಗಿದ್ದರೆ, ರಾಜಕುಮಾರ್‌ ಜತೆ 7 ಸಿನಿಮಾ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಚಿತ್ರೀಕರಣ ವೇಳೆ ರಾಜಕುಮಾರ್‌, ಯಾಕೆ ಜಯಮಾಲ ಇನ್ನೂ ಬಂದಿಲ್ಲ ಅಂತ ಯಾರನ್ನೋ ಕೇಳಿದಾಗ, ಅವರಿನ್ನೂ ಬಸ್‌ ಇಳಿದಿಲ್ಲ ಅಂತ ಕಾಣಿಸುತ್ತೆ’ ಅಂದಾಗ, ರಾಜಕುಮಾರ್‌, ಪಾರ್ವತಮ್ಮ ಅವರ ಗಮನಕ್ಕೆ ತಂದು, ಜಯಮಾಲ ಬಸ್‌ನಲ್ಲೇ ಓಡಾಡುತ್ತಿದ್ದಾರಂತೆ ಅನ್ನುತ್ತಿದ್ದಂತೆಯೇ ಪಾರ್ವತಮ್ಮ ಮರುದಿನವೇ ಕಾರು ವ್ಯವಸ್ಥೆ ಮಾಡಿದ್ದರು.

Advertisement

ಅದು ಅವರ ದೊಡ್ಡಗುಣ. ಅಂತಹ ನಿಜ ನಾಯಕಿ ಮುಂದೆ ಹುಟ್ಟುವುದಿಲ್ಲ’ ಎಂದರು ಜಯಮಾಲ. ಹಿರಿಯ ನಟ ರಾಜೇಶ್‌ ಮಾತನಾಡಿ “ನನ್ನ ಮಗಳಿಗೆ ಅವಕಾಶ ಕೊಟ್ಟವರು. ಅವರು “ರಥಸಪ್ತಮಿ’ ಚಿತ್ರಕ್ಕೆ ಆಯ್ಕೆ ಮಾಡಿದ್ದರಿಂದಲೇ ನನ್ನ ಮಗಳು ತೆಲುಗು, ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯ್ತು. ಪಾರ್ವತಮ್ಮ ಅಂತಹ ಶಕ್ತಿ ನಮ್ಮ ಚಿತ್ರರಂಗದಲ್ಲಿತ್ತು ಎಂಬುದು ಹೆಮ್ಮೆ ಎಂದರು ರಾಜೇಶ್‌.

ಹಿರಿಯ ಕಲಾವಿದೆ ಜಯಂತಿ, ಶಿವರಾಜಕುಮಾರ್‌, ತಾರಾ, ಶೃತಿ, ರಾಕ್‌ಲೈನ್‌ ವೆಂಕಟೇಶ್‌, ಸಾ.ರಾ.ಗೋವಿಂದು, ಒಕ್ಕೂಟ ಅಧ್ಯಕ್ಷ ಅಶೋಕ್‌, ಕೆ.ಸಿ.ಎನ್‌. ಚಂದ್ರಶೇಖರ್‌, ಶಿವರಾಮಣ್ಣ, ಭಗವಾನ್‌, ಕೆ.ವಿ.ಗುಪ್ತ, ಶಿವಶಂಕರ್‌, ಎಂ.ಎಸ್‌.ರಮೇಶ್‌, ಚಿನ್ನೇಗೌಡ್ರು ಸೇರಿದಂತೆ ಹಲವರು ಮಾತನಾಡಿದರು. ಪುನೀತ್‌ರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌, ವಿನಯ್‌ರಾಜಕುಮಾರ್‌, ಹಂಸಲೇಖ, ವಿಜಯರಾಘವೇಂದ್ರ, ಸಂಜನಾ, ಗುರುಕಿರಣ್‌, ಗುರುದತ್‌, ಥಾಮಸ್‌ ಡಿಸೋಜ, ಎನ್‌.ಎಂ.ಸುರೇಶ್‌, ಧರ್ಮಕೀರ್ತಿರಾಜ್‌, ಕೆ.ಪಿ.ಶ್ರೀಕಾಂತ್‌ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next