Advertisement
ನೀವು ಮನೆಯಲ್ಲೇ ಸಿದ್ಧ ಪಡಿಸಿ; ಮಾಂಸಹಾರಿಗಳು ಇಷ್ಟಪಡುವ ಮತ್ತು ಪೌಷ್ಠಿಕಾಂಶದ ಸಿಗಡಿ ಬಿರಿಯಾನಿಯನ್ನು ನೀವೂ ಒಮ್ಮೆ ಸವಿದು ನೋಡಿ.
ಸಿಗಡಿ 20, ಬಾಸುಮತಿ ಅಕ್ಕಿ 1/2 ಕೆ.ಜಿ., ಟೊಮೆಟೋ 2, ಈರುಳ್ಳಿ 4, ತುಪ್ಪ 4 ಚಮಚ, ಜೀರಿಗೆ 1 ಚಮಚ, ಅರಿಶಿನ ಪುಡಿ ಸ್ವಲ್ಪ, ಗಸಗಸೆ 1 ಚಮಚ, ಕರಿಮೆಣಸು 5 ರಿಂದ 10, ಮೆಣಸಿನ ಕಾಯಿ 5, ಒಣಮೆಣಸು 5, ಏಲಕ್ಕಿ 4, ಲವಂಗ 5, ಬೆಳ್ಳುಳ್ಳಿ ಬೀಜ 4, ಹಸಿ ಶುಂಠಿ ಸ್ವಲ್ಪ, ಕೊತ್ತಂಬರಿ ಸೊಪ್ಪು 1 ಕಂತೆ, ತೆಂಗಿನ ತುರಿ 2 ಚಮಚ ಗೇರು ಬೀಜ 10 ರುಚಿಗೆ ತಕ್ಕಷ್ಟು ಉಪ್ಪು. ತಯಾರಿಸುವ ವಿಧಾನ
ಸಿಗಡಿ ಸಿಪ್ಪೆ ಸುಲಿದು(ತಲೆಭಾಗ ಸೇರಿ)ತೆಗೆದು ಹಾಕಿ, ಸ್ವಚ್ಛಗೊಳಿಸಿ ನೀರಲ್ಲಿ ತೊಳೆಯಿರಿ. ನಂತರ ನೀರು ಬಸಿದು ಹಿಂಡಿ ತೆಗೆಯಿರಿ. ಜೀರಿಗೆ, ಗಸಗಸೆ, ಕರಿ ಮೆಣಸು, ಹಸಿ ಮೆಣಸು, ಒಣ ಮೆಣಸು, ಬೆಳ್ಳುಳ್ಳಿ ಬೀಜ, ಶುಂಠಿ, ಆರಿಶಿನ ಪುಡಿ, 1 ಈರುಳ್ಳಿ ಮತ್ತು ತೆಂಗಿನ ತುರಿ ಹಾಕಿ ಈ ಎಲ್ಲ ಪದಾರ್ಥಗಳನ್ನು ಮಿಕ್ಸರಿಗೆ ಹಾಕಿ ನಯವಾಗಿ ಮಸಾಲೆ ರುಬ್ಬಿರಿ. ಅಕ್ಕಿಯನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ 3 ಕಪ್ ನೀರು ಬಿಸಿ ಮಾಡಿ ಪಕ್ಕದಲ್ಲಿಟ್ಟುಕೊಳ್ಳಿ. ಬಿರಿಯಾನಿ ಮಾಡುವ ಪಾತ್ರೆಗೆ 4 ಚಮಚ ತುಪ್ಪ ಹಾಕಿ ಒಲೆಯ ಮೇಲಿಟ್ಟು ಕಾಯಿಸಿರಿ. ಅದರಲ್ಲಿ ಈರುಳ್ಳಿ ಕೊಚ್ಚಲನ್ನು ಹಾಕಿ ಹುರಿಯಿರಿ. ಈರುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದ ಮೇಲೆ ಟೊಮೆಟೋ ಸೇರಿಸಿ ಸ್ವಲ್ಪ ಹುರಿದು ಸಿಗಡಿಯನ್ನು ಸೇರಿಸಿ ಮಗುಚಿರಿ. ಇವುಗಳನ್ನು ಚೆನ್ನಾಗಿ ಹುರಿದ ಮೇಲೆ ಅಕ್ಕಿ ಸೇರಿಸಿ ಹುರಿಯಿರಿ. ನಂತರ 3 ಕಪ್ ಬಿಸಿ ನೀರು ಸೇರಿಸಿ, ಲವಂಗ, ಏಲಕ್ಕಿ, ಗೇರು ಬೀಜ ಮತ್ತು ರುಚಿಗೆ ಉಪ್ಪು ಹಾಕಿ ಒಂದು ಕುದಿ ಚೆನ್ನಾಗಿ ಬಂದ ಮೇಲೆ ಉರಿಯನ್ನು ಮಂದಗೊಳಿಸಿರಿ. ಪಾತ್ರೆಯನ್ನು ಮುಚ್ಚಿ ಮಂದ ಉರಿಯ ಮೇಲೆ ಬೇಯಿಸಿರಿ. ಬಿರಿಯಾನಿ ತಳ ಹತ್ತದಂತೆ 2 ರಿಂದ 3 ಬಾರಿ ಮುಚ್ಚಳ ತೆಗೆದು ಮಗುಚಿರಿ. ಪಾತ್ರೆಯಲ್ಲಿ ನೀರು ಪೂರ್ತಿ ಆರಿದ ಬಳಿಕ ಪಾತ್ರೆ ಕೆಳಗಿಸಿರಿ. ಈಗ ಬಿಸಿ-ಬಿಸಿಯಾದ ಸಿಗಡಿ ಬಿರಿಯಾನಿ ಸವಿಯಲು ಸಿದ್ಧ.