Advertisement

ಕುತೂಹಲ ಮೂಡಿಸಿರುವ ಪ್ರವೇಶ

10:50 PM May 15, 2019 | Sriram |

ಆಧುನಿಕ ಸ್ಪರ್ಶದ ಹೊರಜಗತ್ತಿನಿಂದ ದೂರ ನಿಂತ ಸಮಾಜವದು. ಆದರೆ, ಅಂತಹ ಊರು ಜಾತಿ- ಧರ್ಮದ ಆಧಾರದಲ್ಲಿ ಯಾರೂ ಊಹಿಸದ ಹಾಗೆ ಬದಲಾಗಿ ಬಿಡುತ್ತದೆ. ಯಾಕೆ ಹೀಗೆ.. ಎಂದು ಯೋಚಿಸುವ ಸಮಯದಲ್ಲಿ ಊರಿನ ಚಿತ್ರಣವೇ ಅದಲು- ಬದಲು. ಯಾಕೆಂದರೆ; ಅನ್ಯೋನ್ಯ ಬದುಕಿಗೆ ಅಲ್ಲಿ ಕೊಳ್ಳಿ ಏಟು ಬಿದ್ದಾಗಿರುತ್ತದೆ. ಅಂದಹಾಗೆ, ವರ್ಷಾಂತ್ಯಕ್ಕೆ ತೆರೆ ಕಾಣಲಿರುವ ಪ್ರವೇಶ ಸಿನೆಮಾದ ಒನ್‌ಲೈನ್‌ ಸಬೆjಕ್ಟ್ ಇದು.

Advertisement

ಇದೇ ಕಥೆಯ ಜತೆಗೆ ಸಾಗಿದ ಪ್ರವೇಶದ ಕಥಾನಕ ಅತ್ಯಂತ ಸುಮಧುರ ಹಾಗೂ ಭಯಾನಕ. ವಿಶೇಷವೆಂದರೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿರುವ ಚೇತನ್‌ ಮುಂಡಾಡಿ ಅವರು ಮಾಡಿದ ಸಿನೆಮಾ ಇದಾಗಿರುವುದರಿಂದ “ಪ್ರವೇಶ’ದ ಬಗ್ಗೆ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆ ಇದ್ದೇ ಇದೆ. ಇದು ತುಳು ಸಿನೆಮಾ. ಜತೆಗೆ ಬ್ಯಾರಿ ಸಿನೆಮಾ ಕೂಡ ಹೌದು.

ಅಷ್ಟು ಮಾತ್ರವಲ್ಲ; ಕುಂದಾಪುರ ಕನ್ನಡ, ಮಂಗಳೂರು ಕನ್ನಡ ಹಾಗೂ ಬೆಂಗಳೂರು ಕನ್ನಡ ಈ ಚಿತ್ರದಲ್ಲಿ ಬಳಕೆಯಾಗಿದೆ. ಹೀಗಾಗಿ ಕರ್ನಾಟಕದ ಪ್ರಾದೇಶಿಕ ಭಾಷೆಯನ್ನು ಹದವಾಗಿ ಮಿಕ್ಸ್‌ ಮಾಡಿ ರೆಡಿ ಮಾಡಿದ ಸಿನೆಮಾ. ಸಿನೆಮಾಗೆ ಚೇತನ್‌ ಅವರೇ ಕಥೆ ಬರೆದಿದ್ದು, ಅದನ್ನು ಖ್ಯಾತ ಸಿನಿ ಪತ್ರಕರ್ತ ಜೋಗಿ ಅವರು ವಿಸ್ತರಿಸಿದ್ದಾರೆ.

ಹಿಂದಿನ ಪ್ರಶಸ್ತಿ ಪುರಸ್ಕೃತ “ಮದಿಪು’ ಚಿತ್ರದ ತಂಡವನ್ನೇ ಈ ಸಿನೆಮಾಕ್ಕೂ ಬಳಸಲಾಗಿದೆ. ವಿ. ಮನೋಹರ್‌ ಅವರ ಸಂಗೀತವಿದೆ. ನಾಯಕನಾಗಿ ಪೃಥ್ವೀ ಅಂಬರ್‌ ಮತ್ತು ನಾಯಕಿಯಾಗಿ ಬಿಂದು ರಕ್ಷಿದಿ ಅವರು ನಟಿಸುತ್ತಿದ್ದಾರೆ. ಖ್ಯಾತ ರಂಗಭೂಮಿ ನಟ ಮತ್ತು ಪಡ್ಡಾಯಿ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ಚಂದ್ರಹಾಸ್‌ ಉಳ್ಳಾಲ ಅವರು ಒಂದು ಭಿನ್ನ ಮತ್ತು ವಿಶೇಷ ಪಾತ್ರದಲ್ಲಿದ್ದಾರೆ.

ಇನ್ನೊಂದು ಸಂಗತಿಯೆಂದರೆ, “ಕೆಜಿಎಫ್‌’ ಸಿನೆಮಾದ ಎಡಿಟಿಂಗ್‌ ಮಾಡಿದ ಶ್ರೀಕಾಂತ್‌ ಅವರೇ “ಪ್ರವೇಶ’ ಸಿನೆಮಾಕ್ಕೂ ಎಡಿಟಿಂಗ್‌ ಮಾಡುತ್ತಿದ್ದಾರೆ. ಚೇತನ್‌ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟ “ಮದಿಪು’ ಸಿನೆಮಾದ ಸಂಕಲನವನ್ನೂ ಅವರೇ ಮಾಡಿದ್ದರು. ಈಗ ಎರಡನೇ ತುಳು ಸಿನೆಮಾವಾಗಿ “ಪ್ರವೇಶ’ದ ಸಂಕಲನ ಮಾಡಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next