Advertisement

ಪ್ರವೀಣ್‌ ತಂಡದ ಕೃತ್ಯ:”ಕೊಲೆಗೈದು ಬಾವಿಯಲ್ಲಿ ಹೂತಿಟ್ಟಿದ್ದರು’

03:45 AM Jan 12, 2017 | Harsha Rao |

ಉಡುಪಿ: ರೌಡಿ ಪ್ರವೀಣ್‌ ಕುಲಾಲ್‌ನ ಹತ್ಯೆಯಾದ ಬಳಿಕ ಆತ ಜೀವಂತವಿರುವಾಗ ನಡೆಸಿದ ಪಾಪ ಕುಕೃತ್ಯಗಳ ಪೈಕಿ ಒಂದು ಅಮಾನುಷ ಕೊಲೆಯು ಪೊಲೀಸರ ತನಿಖೆಯಿಂದ ಬಯಲಾಗಿದೆ.

Advertisement

ಉಡುಪಿ ಜಿಲ್ಲಾ ಎಸ್‌ಪಿ ಕೆ.ಟಿ. ಬಾಲಕೃಷ್ಣ ಅವರು ಬುಧವಾರ ಎಸ್‌ಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಎಎಸ್‌ಪಿ ವಿಷ್ಣುವರ್ಧನ ಉಪಸ್ಥಿತರಿದ್ದರು.

ನಾಪತ್ತೆಯಾಗಿದ್ದ ಪರ್ಕಳ ಸಣ್ಣಕ್ಕಿಬೆಟ್ಟು ನಿವಾಸಿ ಸಂತೋಷ್‌ ನಾಯಕ್‌ (38) ನನ್ನು ಪ್ರವೀಣ್‌ ಕುಲಾಲ್‌ ಮತ್ತಾತನ ತಂಡ ಕೊಲೆ ನಡೆಸಿದ್ದರು. ಕೊಲೆ ನಡೆಸಿ ಪಾಳು ಬಾವಿಯೊಂದರಲ್ಲಿ ಶವವನ್ನು ಹೂತಿಟ್ಟಿದ್ದರು. ಇನ್ನೂ ಕೆಲ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.ಪ್ರವೀಣ್‌ ಕುಲಾಲ್‌ನ ಜತೆ   ಸೇರಿ ಕೊಲೆ ಮಾಡಿದ್ದ ‌ ಎರ್ಲಪಾಡಿಯ ಪ್ರಸಾದ್‌ (23), ಮಂಗಳೂರು ಕೃಷ್ಣಾಪುರದ ದಯಾನಂದ (37), ಉಡುಪಿಯ ವಿಲ್ಫೆ†ಡ್‌ ಅರ್ಥರ್‌ ಯಾನೆ ವಿನ್ನು (40), ಹಿರಿಯಡಕದ ಜಯಂತ್‌ ಪೈ (55), ಪೆರ್ಣಂಕಿಲದ ಕೃಷ್ಣ (33) ಮತ್ತು ರಮೇಶ್‌ (35), ಮರ್ಣೆಯ ಮಹೇಶ್‌ ಆಚಾರಿ (23), ಪ್ರಕಾಶ್‌ ಮೂಲ್ಯ ಕೊಡಿಬೆಟ್ಟು (29) ಅವರನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಸಂತೋಷ್‌ ನಾಯಕ್‌ 2016ರ ಡಿ. 2ರಿಂದ ಕಾಣೆಯಾಗಿದ್ದರು. ವರ್ವಾಡಿಯ ಪ್ರವೀಣ್‌ ಕುಲಾಲನ ಹತ್ಯೆಯ ಅನಂತರ 2017ರ ಜ. 4ರಂದು ಸಂತೋಷ್‌ ನಾಯಕ್‌ ಅವರ ಪತ್ನಿ ಸುಮಿತ್ರಾ ನಾಯಕ್‌ ಅವರು ಪ್ರವೀಣ ಮತ್ತು ತಂಡದವರು ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಹಿರಿಯಡಕ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. 

“ಹಣಕ್ಕಾಗಿ ದೈವಸ್ಥಾನದ ಒಳಗೂ ಜಾಲಾಡಿದ್ದರು’
ರಾತ್ರಿಯಾಗುತ್ತಲೇ ಪ್ರವೀಣ್‌ ಕುಲಾಲ್‌ ಸಹಚರರಾದ ದಯಾನಂದ, ಪ್ರಸಾದ್‌, ರಾಜೇಶ್‌ ಮತ್ತು ದಿಲೀಪ್‌ ಅವರೊಂದಿಗೆ ಸಂತೋಷ್‌ ನಾಯಕ್‌ನ ಮನೆಗೆ ಹೋಗಿ ಬಾಗಿಲು ಒಡೆದು ಹಾಕಿ ಹಣಕ್ಕಾಗಿ ಜಾಲಾಡಿದ್ದರು. ಮನೆಯ ಮುಂದಿದ್ದ ದೈವದ ಗುಡಿಯ ಪೀಠವನ್ನು ಕೂಡ ಅಗೆದು ಹಾಕಿ ಶೋಧ ನಡೆಸಿದ್ದರು. ಬಳಿಕ  ಸಂತೋಷ್‌ ಅವರ ಪತ್ನಿ ಸುಮಿತ್ರಾ, ತಾಯಿ ರತ್ನಾವತಿ ನಾಯಕ್‌, ತಮ್ಮ ವಿದ್ಯಾಧರ, ಅವರ ಪತ್ನಿ ಶೋಭಾ ಮತ್ತು ಮಕ್ಕಳನ್ನು ಕಾರಿನಲ್ಲಿ ವರ್ವಾಡಿಗೆ ಕರೆದೊಯ್ದು ಹಣ ಎಲ್ಲಿ ಇಟ್ಟಿದ್ದೀರಿ ಎಂದು ಬಾಯಿ ಬಿಡಿಸಲು ಪ್ರಯತ್ನಿಸಿದ್ದ. ಬಳಿಕ ಕರಿಮಣಿ ಸರ, ಉಂಗುರ, ಮಕ್ಕಳ ಕಾಲಿನ ಚೈನು ಕಿತ್ತು  ಸಣ್ಣಕ್ಕಿಬೆಟ್ಟುವಿಗೆ ಬಿಟ್ಟು ಬಂದಿದ್ದ.

Advertisement

ತಾನೇ ಕೊಲೆಯಾಗಿ ಬಿಟ್ಟ’
ಪ್ರವೀಣ್‌ ಎಲ್ಲರನ್ನೂ ಹೆದರಿಸುತ್ತಲಿದ್ದ. ಮೊದಲಿಗೆ ಲೋಡೆಡ್‌ ಪಿಸ್ತೂಲು ಇದ್ದರೂ, ಕೊಲೆಯಾಗುವ ಸಂದರ್ಭ ಆತನ ಬಳಿ ಇದ್ದದ್ದು ಆಟದ ಪಿಸ್ತೂಲು ಎನ್ನುವುದನ್ನು ಪೊಲೀಸರು ಹೇಳಿದ್ದಾರೆ. ನನ್ನ ಮುಂದೆ ಬಂದು ಯಾರು ತಲವಾರು ಬೀಸುತ್ತಾರೆ? ನನಗೆ ಹೊಡೆಯುವವರು ದೂರದಿಂದ ಪಿಸ್ತೂಲಿನಿಂದ ಹೊಡೆಯಬೇಕಾದೀತು. ಅಷ್ಟು ಗುಂಡಿಗೆಯವರು ನನ್ನೆದುರು ಇದ್ದಾರಾ? ಎಂದೆಲ್ಲ ಅಹಂಕಾರದ ಮಾತನ್ನು ಪ್ರವೀಣ ಮಿತ್ರರಲ್ಲಿ ಹೇಳಿಕೊಳ್ಳುತ್ತಿದ್ದನಂತೆ. 

ಮೃತದೇಹವನ್ನು ತುಂಡರಿಸಿದ್ದರು
ಸಂತೋಷ್‌ ನಾಯಕ್‌ ಅವರ ಮೃತದೇಹದ ಕಾಲುಗಳನ್ನು ಕತ್ತರಿಸಿ ಗೋಣಿ ಚೀಲಕ್ಕೆ ಹಾಕಿ ಪೆರ್ಣಂಕಿಲದ ಕಾಡಿನೊಳಗೆ ಇರುವ 7-8 ಅಡಿ ಇರುವ ಆ ಪಾಳು ಬಾವಿಯೊಳಗೆ ಇಳಿದು ಮೃತದೇಹವನ್ನು ಹೂತು ಹಾಕಿಬಿಟ್ಟಿರುವುದು ತನಿಖೆಯಿಂದ ಗೊತ್ತಾಗಿತ್ತು. ಅವಶೇಷಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಹಣದ ಡೀಲಿಂಗ್‌, ಸುಪಾರಿಗೆ ಬಲಿ’
ಸಂತೋಷ್‌ ನಾಯಕ್‌ ಟನ್‌ಗಟ್ಟಲೆ ಸೊತ್ತುಗಳ ಖರೀದಿಸಿ ಮಾರುವಾಗ  ಲಕ್ಷಾಂತರ ಹಣ ಮುಂಗಡ ಪಡೆದು ಬಳಿಕ ನಾಮ ಹಾಕುತ್ತಿದ್ದ. ಹಣ ಕೊಟ್ಟವರ ಪೈಕಿ ಹಿರಿಯಡಕದ ಜಯಂತ್‌ ಪೈ, ನಿತ್ಯಾನಂದ ನಾಯಕ್‌ ಮತ್ತು ವಿಲ್ಫೆ†ಡ್‌ ಯಾನೆ ವಿನ್ನು ಅವರು ಸಂತೋಷನಿಂದ ಹಣ ವಸೂಲಿ ಮಾಡಿಕೊಡುವಂತೆ ಪ್ರವೀಣ್‌ಗೆ ಸುಪಾರಿ ನೀಡಿದ್ದರು. ಡಿ. 2ರ ಬೆಳಗ್ಗೆ ಪ್ರವೀಣ್‌ ಕುಲಾಲ್‌ ಮತ್ತಾತನ ತಂಡವು ಸಂತೋಷ್‌ ನಾಯಕ್‌ನನ್ನು ಕುದಿಯಲ್ಲಿದ್ದ ಆತನ ಪತ್ನಿಯ ಮನೆಯಿಂದ ಅಪಹರಣ ಮಾಡಿ ವರ್ವಾಡಿಗೆ ಕರೆದುಕೊಂಡು ಬಂದಿದ್ದರು. ಅಲ್ಲಿಗೆ ಸುಪಾರಿ ಕೊಟ್ಟವರನ್ನೂ ಕರೆಯಿಸಿಕೊಂಡು ಅವರ ಎದುರಿನಲ್ಲಿಯೇ ಸಂತೋಷ್‌ ನಾಯಕನಿಗೆ ಗಂಭೀರವಾಗಿ ಹಲ್ಲೆ ನಡೆಸಿದ್ದರು. ಪರಿಣಾಮ ಸಂತೋಷ್‌ ಅವರು ಮೃತಪಟ್ಟಿದ್ದರು.

ಕರುವನ್ನು ಸುಟ್ಟು ಹಾಕಿದರು
ಪ್ರವೀಣನು ಸಣ್ಣ ಕರುವನ್ನು ತಂದು ತುಂಡು ಮಾಡಿ ಸುಟ್ಟು ಹಾಕಿ ಮೂಳೆಗಳನ್ನೆಲ್ಲ ಅಲ್ಲೆ ಬಿಟ್ಟಿದ್ದ. ಕೊಲೆ ಪ್ರಕರಣ ಬೆಳಕಿಗೆ ಬಂದರೆ ಸುಟ್ಟು ಹಾಕಿ ಕೊಲೆ ನಡೆಸಿದ್ದು ಎಂದು ಬಿಂಬಿಸಲು ಈ ರೀತಿ ಮಾಡಲಾಗಿತ್ತು. ಸುಟ್ಟದ್ದು ಎಂದು ಪ್ರಕರಣ ದಾಖಲಾಗಿ, ವಿಧಿವಿಜ್ಞಾನ ವರದಿಯಲ್ಲಿ ದನದ ಅವಶೇಷಗಳು ಎಂದು ಬಂದರೆ ಇವರೆಲ್ಲ ಪ್ರಕರಣದಿಂದ ಖುಲಾಸೆ ಖಚಿತವಲ್ಲವೇ. ಅದಕ್ಕಾಗಿ ಪ್ರವೀಣ ಇಂತಹದ್ದೊಂದು ಸಂಚು ಹೆಣೆದಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next