Advertisement

ಕನ್ನಡಿಗರ ಮೇಲಿನ ಕೇಸ್‌ಗೆ ಅಂತೂ ಸೂದ್‌ ಹಠಾವೋ

06:00 AM Aug 01, 2017 | |

ಬೆಂಗಳೂರು: ಕನ್ನಡ ವಿರೋಧಿ ಧೋರಣೆಗೆ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ “ಹಠಾವೋ’ ಆಗಿದ್ದಾರೆ.

Advertisement

ಕೇಂದ್ರ ಸರ್ಕಾರದ “ಹಿಂದಿ ಹೇರಿಕೆ’ ವಿರುದ್ಧ ಹೋರಾಟ ನಡೆಸಿದ್ದ ಕನ್ನಡ ಸಂಘಟನೆಗಳು, ಮೆಟ್ರೋ ನಿಲ್ದಾಣಗಳಲ್ಲಿನ ಹಿಂದಿ ಫ‌ಲಕಕ್ಕೆ ಮಸಿ ಬಳಿಸಿದ್ದರು. ಇವರ ವಿರುದ್ಧ ಕೋಮು ಗಲಭೆ ಪ್ರಕರಣ ದಾಖಲಿಸಲು ಆದೇಶಿಸಿದ್ದ ಪ್ರವೀಣ್‌ ಸೂದ್‌ ಅವರ ಕ್ರಮಕ್ಕೆ ಕನ್ನಡ ಸಂಘಟನೆಗಳು, ಸಾಹಿತಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ “ಸೂದ್‌ ಹಠಾವೋ’ ಚಳುವಳಿ ಆರಂಭಿಸಿದ್ದರು. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಸೂದ್‌ರನ್ನು ಎತ್ತಂಗಡಿ ಮಾಡುವಂತೆಯೂ ಆಗ್ರಹಿಸಿದ್ದರು.

ಇದೀಗ ರಾಜ್ಯ ಸರ್ಕಾರ, ಕೆಲವು ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳನ್ನು ವರ್ಗಾವರ್ಗಿ ಮಾಡಿದ್ದು ಪ್ರವೀಣ್‌ ಸೂದ್‌ ಅವರನ್ನು ಬೇರೆಡೆ ವರ್ಗ ಮಾಡಿದೆ. ಈ ಮೂಲಕ ಕನ್ನಡ ಹೋರಾಟಗಾರರ ಆಗ್ರಹಕ್ಕೆ ಸರ್ಕಾರ ಮಣಿದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡಪರ ನಿಲುವನ್ನು ತೋರುತ್ತಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ಆಡಳಿತ, ಅಧಿಕಾರಿಗಳ ನಿಯೋಜನೆ, ಕನ್ನಡ ಧ್ವಜ ಮತ್ತು ಭಾಷೆ ವಿಚಾರದಲ್ಲಿ ಪರಿಣಾಮಕಾರಿ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಿದೆ. 

ಜತೆಗೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದ ಸಿದ್ದರಾಮಯ್ಯ ಅವರು, ಮೆಟ್ರೋದಲ್ಲಿ ದ್ವಿಭಾಷಾ ನೀತಿ ಬಳಕೆ ಮಾಡುತ್ತೇವೆ, ಹಿಂದಿ ಬಳಕೆ ಬಿಡುತ್ತೇವೆ ಎಂಬ ಮಾಹಿತಿ ನೀಡಿದ್ದರು. ಅಲ್ಲದೆ ಕೆಲವು ದಿನಗಳ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ್ದ ಸಿಎಂ, ಕನ್ನಡ ಕಲಿಯದ ಅಧಿಕಾರಿಗಳಿಗೆ ಎಚ್ಚರಿಕೆಯನ್ನೂ ನೀಡಿದ್ದರು. ಇದೀಗ ಸೂದ್‌ ಅವರ ವರ್ಗಾವಣೆಯೂ ಕನ್ನಡ ಪರ ಧೋರಣೆಯ ಒಂದು ಭಾಗ ಎಂದೇ ವಿಶ್ಲೇಷಿಸಲಾಗುತ್ತಿದೆ.

ಬೆಂಗಳೂರು ನಗರ ಪೊಲೀಸ್‌ ಆಯುಕ್ತರನ್ನು ಆರು ತಿಂಗಳಿಗೂ ಮುನ್ನ ವರ್ಗಾವಣೆ ಮಾಡಿದ್ದ ಉದಾಹರಣೆಗಳು ತೀರಾ ಕಡಿಮೆ. ಒಂದು ವೇಳೆ ಕಾನೂನು ಸುವ್ಯವಸ್ಥೆಯಲ್ಲಿ ವೈಫ‌ಲ್ಯವಾದಾಗ, ಅಪರಾಧಗಳ ಸಂಖ್ಯೆ ಮಿತಿಮೀರಿ ಕೊಲೆ, ಸುಲಿಗೆ ಮತ್ತು ದರೋಡೆ ಪ್ರಕರಣಗಳು ಹೆಚ್ಚಾದಾಗ ಮಾತ್ರ ಆಯುಕ್ತರನ್ನು ವರ್ಗಾವಣೆ ಮಾಡಲಾಗುತ್ತದೆ. ಆದರೆ ಪ್ರವೀಣ್‌ ಸೂದ್‌ ವಿಚಾರದಲ್ಲಿ ಈ ಯಾವ ಅಂಶಗಳೂ ಕಾಣಿಸುತ್ತಿಲ್ಲ. ಅಲ್ಲದೆ ಅವರ ಕಾರ್ಯಕ್ಷಮತೆಯಲ್ಲೂ ವೈಫ‌ಲ್ಯ ಎದುರಾಗಿಲ್ಲ. ಹಾಗಿದ್ದರೂ ವರ್ಗಾವಣೆ ಮಾಡಲಾಗಿದೆ ಎಂದರೆ, ಇದಕ್ಕೆ ಕನ್ನಡ ವಿರೋಧಿ ಧೋರಣೆಯೇ ಕಾರಣ ಎಂದೇ ಹೇಳಲಾಗುತ್ತಿದೆ.

Advertisement

ಕೋಮು ಗಲಭೆ ಕೇಸ್‌
ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಕನ್ನಡ ಪರ ಹೋರಾಟಗಾರರು ಹಿಂದಿ ನಾಮಫ‌ಲಕಕ್ಕೆ ಮಸಿ ಬಳಿದ ಪ್ರಕರಣದಲ್ಲಿ ಅವರ ವಿರುದ್ಧ ಕೋಮು ಗಲಭೆ ಪ್ರಕರಣವನ್ನು ದಾಖಲಿಸಲಾಗಿತ್ತು. ಇದಕ್ಕೆ ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ತೀವ್ರ ವಿರೋಧ ವ್ಯಕ್ತಪಡಿಸಿ, ಕೋಮು ಗಲಭೆ ಪ್ರಕರಣ ವಾಪಸ್‌ ಪಡೆಯದಿದ್ದರೆ, ಕನ್ನಡ ಬಚಾವೊ, ಪ್ರವೀಣ್‌ ಸೂದ್‌ ಹಠಾವೋ ಚಳವಳಿ ನಡೆಸಬೇಕಾಗುತ್ತದೆ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ, ಸಾಹಿತಿ ಚಂದ್ರಶೇಖರ ಪಾಟೀಲ್‌, ರಂಗ ಕರ್ಮಿ ಪ್ರಕಾಶ್‌ ಬೆಳವಾಡಿ ಮುಂತಾದವರು ಸರ್ಕಾರಕ್ಕೆ ಒತ್ತಾಯಿಸಿದ್ದರು.

ಪೊಲಿಸ್‌ ಆಯುಕ್ತರ ಹುದ್ದೆ ಮೇಲೆ ಈಗ ಹೊಸದಾಗಿ ನೇಮಕಗೊಂಡಿರುವ ಹಿರಿಯ ಐಪಿಎಸ್‌ ಅಧಿಕಾರಿ, ಟಿ. ಸುನೀಲ್‌ ಕುಮಾರ್‌ ಮೊದಲಿನಿಂದಲೂ ಕಣ್ಣಿಟ್ಟಿದ್ದರು. ಆದರೆ, ಹಿಂದೆ ಗೃಹ ಸಚಿವರಾಗಿದ್ದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌, ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಪ್ರವೀಣ್‌ ಸೂದ್‌ ಪರ ಒಲವು ವ್ಯಕ್ತಪಡಿಸಿದ್ದರಿಂದ ಸುನಿಲ್‌ ಕುಮಾರ್‌ ನಗರ ಪೊಲಿಸ್‌ ಆಯುಕ್ತರಾಗುವ ಅವಕಾಶ ಕೈ ತಪ್ಪಿತ್ತು.

ಖರೋಲಾ ಮೇಲೂ ಕಣ್ಣು
ಮೆಟ್ರೋ ರೈಲಿನಲ್ಲಿ ಹಿಂದಿ ಬಳಕೆ ಕುರಿತಂತೆ ಬಿಎಂಆರ್‌ಸಿಎಲ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ ಮೇಲೂ ಮುಖ್ಯಮಂತ್ರಿಯವರ ದೃಷ್ಠಿ ನೆಟ್ಟಿದೆ ಎಂದು ಹೇಳಲಾಗುತ್ತಿದೆ. ಅನಗತ್ಯವಾಗಿ ಮೆಟ್ರೋದಲ್ಲಿ ಹಿಂದಿಯನ್ನು ಬಳಸಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾದ ಹಿರಿಯ ಐಎಎಸ್‌ ಅಧಿಕಾರಿ ಖರೋಲಾ ಅವರನ್ನೂ ಸಹ ವರ್ಗಾವಣೆ ಮಾಡಲು ತೆರೆ ಮರೆಯ ಪ್ರಯತ್ನ ನಡೆದಿದೆ. ಮೆಟ್ರೊ ಮೊದಲ ಹಂತದ ಯೋಜನೆ ಪೂರ್ಣಗೊಂಡ ಬಳಿಕ ಖರೋಲಾ ಅವರ ವರ್ಗಾವಣೆ ಆಗುತ್ತದೆ ಎನ್ನುವ ಸುದ್ದಿ ಹಬ್ಬಿದೆ. ಸರ್ಕಾರ ವರ್ಗಾವಣೆಗೊಳಿಸುವ ಮುನ್ನವೇ ಸ್ವಯಂಪ್ರೇರಿತರಾಗಿ ಕೇಂದ್ರ ಸೇವೆಗೆ ತೆರಳುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕನ್ನಡಕ್ಕೆ “ಸಿದ್ದ’ಹಸ್ತ
1. ಕನ್ನಡೇತರ ಅಧಿಕಾರಿಗಳ ಮೇಲೆ ಗರಂ
2. ಮೆಟ್ರೋದಲ್ಲಿ ಹಿಂದಿ ಬಳಕೆಗೆ ವಿರೋಧ
3. ಕನ್ನಡ ಧ್ವಜಕ್ಕಾಗಿ ಸಮಿತಿ ರಚನೆ
4. ಕನ್ನಡ ವಿರೋಧಿ ಅಧಿಕಾರಿಗಳ ವರ್ಗಾವಣೆ
5. ಕನ್ನಡ ಮೇಲಿನ ಅಭಿಮಾನ ವ್ಯಕ್ತಪಡಿಸುವ ವಿಡಿಯೋ
6. ಕನ್ನಡಿಗರಿಗೇ ಉದ್ಯೋಗ ನೀಡಲು ಉತ್ಸಾಹ

ಕನ್ನಡಿಗರ ನಿರಂತರ ಹೋರಾಟಕ್ಕೆ ಸಿಕ್ಕ ಮೊದಲ ಜಯ. ಸೂದ್‌ ಅವರು ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿ ಎನ್ನುವುದರ ಬಗ್ಗೆ ಸಂದೇಹ ಇಲ್ಲ. ಆದರೆ, ಹಿಂದಿ ನಾಮಫ‌ಲಕಗಳಿಗೆ ಕನ್ನಡಪರ ಹೋರಾಟಗಾರರು ಮಸಿ ಬಳಿದ ವಿಚಾರದಲ್ಲಿ ಅವರು ಸುಳ್ಳು ಕೇಸುಗಳನ್ನು ಹಾಕಿದ್ದು ಸರಿ ಅಲ್ಲ. ಆದ್ದರಿಂದ ನಮ್ಮ ಒತ್ತಾಯ ಈ ಸುಳ್ಳೂ ಮೊಕದ್ದಮೆಗಳನ್ನು ವಾಪಸ್‌ ಪಡೆಯಬೇಕು ಎನ್ನುವುದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು.
– ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ), ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next