ಬೆಂಗಳೂರು: ತಮಗೆ ಜೀವಭಯ ಇದೆ ಹಾಗೂ ತಮ್ಮ ವಕೀಲರೊಂದಿಗೆ ಚರ್ಚಿಸಲು ಒಂದೇ ಕಾರಾಗೃಹಕ್ಕೆ ಸ್ಥಳಾಂತರಿಸಬೇಕು ಎಂದು ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಅಬ್ದುಲ್ ಬಶೀರ್ ಸಹಿತ ರಾಜ್ಯದ ವಿವಿಧ ಜೈಲುಗಳಲ್ಲಿರುವ 10 ಮಂದಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿತು.
ಇದೇ ವೇಳೆ ರಾಜ್ಯದ ಎಲ್ಲ ಜೈಲುಗಳಲ್ಲಿ ಕೈದಿಗಳೊಂದಿಗೆ ವಕೀಲರು ಸಂಭಾಷಣೆ ನಡೆಸಲು ಅತ್ಯುತ್ತಮ ವೀಡಿಯೋ ಕಾನ್ಫರೆನ್ಸಿಂಗ್ ವ್ಯವಸ್ಥೆ ಕಲ್ಪಿಸುವಂತೆ ರಾಜ್ಯ ಸರಕಾರಕ್ಕೆ ನ್ಯಾಯಪೀಠ ನಿರ್ದೇಶನ ನೀಡಿದೆ.
ವಕೀಲರು ಹಾಗೂ ಕುಟುಂಬ ಸದಸ್ಯರೊಂದಿಗೆ ನಡೆಸುವ ಸಂಭಾಷಣೆ ಮತ್ತೂಬ್ಬರಿಗೆ ತಿಳಿಯದಂತೆ ಗೌಪ್ಯತೆ ಕಾಪಾಡಲು ಹೆಡ್‌ಫೋನ್‌ಗಳನ್ನು ಒದಗಿಸಬೇಕು. ಆಗ ಮಾತ್ರ ಗೌಪ್ಯತೆ ಉಲ್ಲಂಘನೆಯಾಗುವ ಆರೋಪ ಎದುರಾಗುವುದಿಲ್ಲ. ಹೀಗಾಗಿ ಈ ಸೌಲಭ್ಯ ಇಲ್ಲದ ಜೈಲುಗಳಲ್ಲಿ ಶೀಘ್ರದಲ್ಲೇ ಸರಕಾರ ಸೌಲಭ್ಯ ಒದಗಿಸಬೇಕು. ಇರುವಲ್ಲಿ ದೋಷವಿಲ್ಲದಂತೆ ಕಾರ್ಯನಿರ್ವಹಿಸಲು ನಿರ್ದೇಶನ ನೀಡಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಕೈದಿಗಳನ್ನು ಸುರಕ್ಷಿತರನ್ನಾಗಿಡುವುದು ಸರಕಾರದ ಕರ್ತವ್ಯ. ಒಂದು ವರ್ಷದ ಹಿಂದೆ ನಡೆದ ಅಹಿತಕರ ಘಟನೆಯ ಕಾರಣದಿಂದ ಅರ್ಜಿದಾರರನ್ನು ಒಂದೇ ಜೈಲಿನಲ್ಲಿರಿಸುವುದಕ್ಕೆ ಕಾರಣವಾಗುವುದಿಲ್ಲ. ಆ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ಮತ್ತು ಅವರ ಜೀವಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಸರಕಾರದ ಪರ ಅಡ್ವೊಕೇಟ್ ಜನರಲ್ ಭರವಸೆ ನೀಡಿದ್ದಾರೆ. ಈ ಪ್ರಕರಣಲ್ಲಿ ಬಂಧನಕ್ಕೊಳಗಾಗಿರುವ ಎಲ್ಲ ಆರೋಪಿಗಳು ನಿಷೇಧಿತ ಪಿಎಫ್ಐ ಸಂಘಟನೆಯವರು. ಒಬ್ಬರು ಈಗಾಗಲೇ ತಪ್ಪೊಪ್ಪಿಕೊಂಡಿರುವುದರಿಂದ ಇನ್ನಿತರರನ್ನು ಒಂದೇ ಕಡೆ ಇಡುವುದು ಸೂಕ್ತವಲ್ಲ. ಆದ ಕಾರಣ ಸ್ಥಳಾಂತರ ಅನಗತ್ಯ. ಹಾಗಾಗಿ ಅರ್ಜಿ ವಜಾಗೊಳಿಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಒಂದೇ ಜೈಲಿಗೆ ಸ್ಥಳಾಂತರ ಮಾಡುವಂತೆ ಕೋರಿರುವ ಅರ್ಜಿದಾರರ ಜೀವಕ್ಕೆ ಅಪಾಯವಿದ್ದು, ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಿ ವಿವಿಧ ಕೊಠಡಿಗಳಲ್ಲಿ ಇರಿಸಬೇಕು. ಅಲ್ಲದೆ ಅವರ ಪರ ವಕೀಲರು ಅಗತ್ಯವಿದ್ದಲ್ಲಿ ಭೇಟಿಗೆ ಅವಕಾಶ ನೀಡಬೇಕು. ಅಲ್ಲದೆ, ಜೈಲುಗಳಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಸರಿ ಇಲ್ಲದ ಪರಿಣಾಮ ಅವರ ಪರ ವಕೀಲರು ಚರ್ಚೆ ನಡೆಸುವುದಕ್ಕೆ ಸಾಧ್ಯವಿರುವುದಿಲ್ಲ ಎಂದು ಕೋರಿದರು.