Advertisement

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: 32 ಸ್ಥಳಕ್ಕೆ ಎನ್‌ಐಎ ದಾಳಿ : ಮಹತ್ವದ ದಾಖಲೆ ವಶ

05:08 PM Sep 06, 2022 | Team Udayavani |

ಪುತ್ತೂರು : ಬಿಜೆಪಿ ಯುವ ಮೋರ್ಚಾದ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳದ ತಂಡವು ಮಂಗಳವಾರ ಬೆಳ್ಳಂಬೆಳಗ್ಗೆ ಪುತ್ತೂರು, ಸುಳ್ಯ ತಾಲೂಕಿನ 32 ಸ್ಥಳಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.

Advertisement

ದಿಢೀರ್‌ ಆಗಿ ನಡೆದ ದಾಳಿ ಇದಾಗಿದೆ. ಪ್ರವೀಣ್‌ ಹಂತಕರ ಹತ್ಯಾ ಆರೋಪಿಗಳ ವಿಚಾರಣೆಯ ಸಂದರ್ಭದಲ್ಲಿ ತನಿಖಾ ದಳದ ತಂಡಕ್ಕೆ ದೊರೆತ ಸುಳಿವಿನ ಆಧಾರದಲ್ಲಿ ಹತ್ಯೆ ಪ್ರಕರಣಕ್ಕೆ ಸಹಕಾರ, ಆರೋಪಿಗಳ ರಕ್ಷಣೆ ನೆರವಾಗುತ್ತಿರುವವರ ಮಾಹಿತಿ ಕಲೆ ಹಾಕಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

ಏಕಕಾಲದಲ್ಲಿ ದಾಳಿ
ಪ್ರವೀಣ್‌ ಹತ್ಯೆ ಪ್ರಕರಣದ ಆರೋಪಿಗಳು, ಪಿಎಫ್‌ಐ ಮುಖಂಡರ ನಿವಾಸಕ್ಕೆ ಬೆಳಗ್ಗೆ 5.30 ಹೊತ್ತಿಗೆ ದಾಳಿ ನಡೆಸಲಾಗಿದೆ. 70 ಕ್ಕೂ ಅಧಿಕ ಅಧಿಕಾರಿಗಳ ತಂಡ ಆಯಾ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಹಲವೆಡೆ ಮೊಬೈಲ್‌, ಇತರೆ ದಾಖಲೆಗಳನ್ನು ವಶಕ್ಕೆ ಪಡೆದಿದೆ.

ಮನೆಯಲ್ಲಿ ಇಲ್ಲದವರಿಗೆ ನೋಟಿಸ್‌ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಪಿಎಫ್‌ಐ, ಎಸ್‌ಡಿಪಿಐನಲ್ಲಿ ಗುರುತಿಸಿಕೊಂಡಿರುವ ಪ್ರಮುಖರ ಮನೆ, ಕಚೇರಿಗಳಿಗೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಪ್ರಮುಖರ ಮನೆಗೆ ದಾಳಿ
ಪ್ರಕರಣಕ್ಕೆ ಸಂಬಂಧಿಸಿ ಎಸ್‌ಡಿಪಿಐ ಜಿಲ್ಲಾ ಮುಖಂಡ ಇಕ್ಬಾಲ್‌ ಬೆಳ್ಳಾರೆ, ಜಾಬಿರ್‌ ಅರಿಯಡ್ಕ, ಮನ್ಸೂರ್‌ ಅಗ್ನಾಡಿ ಸೇರಿದಂತೆ ಹಲವರ ನಿವಾಸಕ್ಕೆ ದಾಳಿ ನಡೆಸಲಾಗಿದೆ. ಪ್ರವೀಣ್‌ ನೆಟ್ಟಾರು ಹತ್ಯೆಯ ಪ್ರಮುಖ ಆರೋಪಿಗಳಾದ ಶಿಯಾಬ್‌, ಬಶೀರ್‌, ರಿಯಾಝ್ ಅಂಕತಡ್ಕ, ಶಫೀಕ್‌ ಬೆಳ್ಳಾರೆ, ಜಾಕೀರ್‌ ಸವಣೂರು, ಸದ್ದಾಂ ಪಳ್ಳಿಮಜಲು, ಹಾರೀಸ್‌ ಪಳ್ಳಿಮಜಲು, ಅಬಿದ್‌ ನಾವೂರು, ನೌಫಲ್‌, ಅಬ್ದುಲ್‌ ಕಬೀರ್‌ ಜಟ್ಟಿಪಳ್ಳನ ನಿವಾಸಕ್ಕೆ ದಾಳಿ ನಡೆಸಿ ಮನೆ ಮಂದಿ, ಸುತ್ತಮುತ್ತಲಿನ ಪರಿಸರದಲ್ಲಿ ವಿಚಾರಣೆ ನಡೆಸಿ ಸ್ಥಳ ಮಹಜರು ಮಾಡಲಾಗಿದೆ. ಅನೇಕ ದಾಖಲೆ ಪತ್ರ, ಮೊಬೈಲ್‌ ಪೋನ್‌ ವಶಕ್ಕೆ ಪಡೆಯಲಾಗಿದೆ.

Advertisement

ಮಿತ್ತೂರು ಕಮ್ಯೂನಿಟ್‌ ಹಾಲ್‌ : ಎನ್‌ಐಎ ಕಣ್ಣು
ಮಿತ್ತೂರು ಫ್ರೀಡಂ ಕಮ್ಯೂನಿಟಿ ಹಾಲ್‌ನಲ್ಲಿ ಪಿಎಫ್‌ಐನ ಸಭೆ ಸಮಾರಂಭ ನಡೆಯುವ ಕೇಂದ್ರ ಸ್ಥಾನ ಎನ್ನುವ ಸುಳಿವು ದೊರೆತ ಹಿನ್ನೆಲೆಯಲ್ಲಿ ಎನ್‌ಐಎ ತಂಡವು ಸಭಾಂಗಣದ ಕಚೇರಿಗೆ ದಾಳಿ ನಡೆಸಿ ಸಿಸಿ ಕ್ಯಾಮರಾ ದೃಶ್ಯಾವಳಿ ಸಹಿತ ದಾಖಲೆ ಪತ್ರಗಳನ್ನು ಪರಿಶೀಲಿಸಿದೆ.

ಪಿಎಫ್‌ಐ, ಎಸ್‌ಡಿಪಿಐ ಸಭೆ ನಡೆಸಿ ಸಮಾಜ ಘಾತುಕ ಕೃತ್ಯ ನಡೆಸಲು ಯೋಜನೆ ರೂಪಿಸುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಎನ್‌ಐಎ ದಾಳಿ ಮಹತ್ವ ಪಡೆದಿದೆ. ಇಲ್ಲಿ ಸಂಘಟನೆಯ ಯಾವುದೇ ಕಾರ್ಯಕ್ರಮಕ್ಕೆ ಪೊಲೀಸರಿಗೆ ಇಲ್ಲಿ ಪ್ರವೇಶ ಇರಲಿಲ್ಲ. ಬದಲಿಗೆ ಸಂಘಟನೆಯವರೇ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನುವ ಅಂಶದ ಮೇಲೂ ತನಿಖೆ ದೃಷ್ಟಿ ನೆಟ್ಟಿದೆ.

ಪ್ರವಾಸಿ ಮಂದಿರದಲ್ಲಿ ಕಾರ್ಯಾಚರಣೆ ತಂಡ
ಆಯಾ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ ಬಳಿಕ ಅಧಿಕಾರಿಗಳ ತಂಡ ಪುತ್ತೂರು ನಗರದ ದರ್ಬೆ ನಿರೀಕ್ಷಣಾ ಕೇಂದ್ರದಲ್ಲಿ ಬೀಡು ಬಿಟ್ಟಿದೆ. ಈ ವೇಳೆ ಕೆಲವರ ವಿಚಾರಣೆ ನಡೆದಿದೆ ಎನ್ನಲಾಗಿದೆ. ದಾಳಿ ನಡೆಸಿದ ಸ್ಥಳದಲ್ಲಿಯೂ ಮಹಜರು ನಡೆಸಲಾಗಿದೆ. ಸ್ಥಳಕ್ಕೆ ಮಾಧ್ಯಮ ಸಹಿತ ಇತರರ ಪ್ರವೇಶ ನಿರ್ಬಂಧಿಸಲಾಗಿದೆ.

ಸುಳ್ಯದಲ್ಲಿಯೂ ದಾಳಿ
ಪ್ರವೀಣ್‌ ನೆಟ್ಟಾರು ಹತ್ಯೆ ಘಟನೆಗೆ ಸಂಬಂಧಿಸಿ ಹಂತಕರು ಸುಳ್ಯದವರಾಗಿದ್ದು ಆರೋಪಿಗಳ ವಾಸ ಸ್ಥಳಕ್ಕೆ ದಾಳಿ ನಡೆಸಲಾಗಿದೆ. ಪ್ರಮುಖ ಆರೋಪಿ ಶಿಯಾಬ್‌ ವಾಸವಾಗಿದ್ದ ಸುಳ್ಯ ನಾವೂರಿನ ಮನೆ ಮತ್ತು ಸುತ್ತಮುತ್ತ ತಪಾಸಣೆ ನಡೆಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಖಾಡಕ್ಕೆ ಇಳಿದ ಎನ್‌ಐಎ
ಪ್ರವೀಣ್‌ ನೆಟ್ಟಾರು ಅವರ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕ್ಕೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿತ್ತು. ಪ್ರಕರಣ ಸಂಬಂಧ ಎನ್‌ಐಎ, ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯಡಿ ಪ್ರಕರಣ ದಾಖಲಿಸಿ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಪ್ರಾಥಮಿಕ ತನಿಖಾ ವರದಿ(ಎಫ್‌ಐಆರ್‌)ಸಲ್ಲಿಸಿತ್ತು. ಹತ್ಯೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿ ವಿಪುಲ್‌ ಅಲೋಕ್‌ ಅವರು ಎನ್‌ಐಎ ಮಹಾ ನಿರ್ದೇಶಕರಿಗೆ ಆ.6 ರಂದು ಆದೇಶ ನೀಡಿದ್ದರು. ಕರ್ನಾಟಕ ಸರಕಾರದ ಮುಖ್ಯಕಾರ್ಯದರ್ಶಿ ಮತ್ತು ಪೊಲೀಸ್‌ ಮಹಾನಿರ್ದೇಶಕರಿಗೂ ಈ ಕುರಿತು ಮಾಹಿತಿ ನೀಡಲಾಗಿತ್ತು. ಪ್ರಕರಣದ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿರುವ ಬೆನ್ನಲ್ಲೇ ಎನ್‌ಐಎ ಅಧಿಕಾರಿಗಳು ಪ್ರಕರಣ ಸಂಬಂಧ ಭಾರತೀಯ ದಂಡ ಸಂಹಿತೆ 302(ಕೊಲೆ) ಮತ್ತು 120(ಬಿ)(ಕೊಲೆಗೆ ಸಂಚು) ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಅಡಿಯಲ್ಲಿ ಪ್ರಕರಣ ದಾಖಲಿಸಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಿ ವಿವಿಧ ಪ್ರಕ್ರಿಯೆ ಪೂರ್ಣಗೊಳಿಸಿ ತನಿಖೆ ಕೈಗೆತ್ತಿಕೊಂಡಿತ್ತು.

ಹತ್ಯೆಯ ಹಿಂದೆ ಮತಾಂಧ
ಶಕ್ತಿಗಳ ಕೈವಾಡ..?
ಕೇರಳದಲ್ಲಿ ಸೇರಿದಂತೆ ವಿವಿಧ ರಾಜ್ಯದಲ್ಲಿ ನಡೆದಿರುವ ಕೊಲೆ ಮಾದರಿಯಲ್ಲಿಯೇ ಪ್ರವೀಣ್‌ ಹತ್ಯೆ ನಡೆದಿತ್ತು. ಇದರ ಹಿಂದೆ ವ್ಯವಸ್ಥಿತ ಜಾಲ ಇದ್ದು ಮತಾಂಧ ಶಕ್ತಿಗಳ ಕೈವಾಡ, ವಿದೇಶಿ ಶಕ್ತಿಗಳ ಆರ್ಥಿಕ ನೆರವಿನ ಅನುಮಾನ ಕೇಳಿ ಬಂದಿತ್ತು. ಪ್ರವೀಣ್‌ ನೆಟ್ಟಾರು ಹತ್ಯೆಯ ಸಂದರ್ಭ ಈ ಆಕ್ರೋಶದ ಕಟ್ಟೆಯೊಡೆದು ಜನಪ್ರತಿನಿಧಿಗಳಿಗೆ ದಿಗ್ಬಂಧನ ವಿಧಿಸಿ ಸಮಗ್ರ ತನಿಖೆಗೆ ಆಗ್ರಹ ಕೇಳಿ ಬಂದಿತ್ತು. ಅದಾದ ಬಳಿಕ ರಾಜ್ಯ ಸರಕಾರ ಎಚ್ಚೆತ್ತುಕೊಂಡು ಪ್ರಕರಣವನ್ನು ಎನ್‌ಐಎಗೆ ವಹಿಸಿತು. ಪ್ರವೀಣ್‌ ನೆಟ್ಟಾರು ಹಂತಕರು ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ಜತೆ ಲಿಂಕ್‌ ಹೊಂದಿರುವ ಮಾಹಿತಿ ಖಚಿತ ಪಟ್ಟ ಹಿನ್ನೆಲೆಯಲ್ಲಿ ಹತ್ಯೆಯ ಉದ್ದೇಶ ಏನು ಎನ್ನುವ ಬಗ್ಗೆ ಎನ್‌ಐಎ ವಿಚಾರಣೆ ನಡೆಸುತ್ತಿದೆ. ಬಂಧಿತ ಆರೋಪಿಗಳಿಗೆ ಹದಿನೈದು ದಿನಗಳ ಕಾಲ ಹಲವರು ರಕ್ಷಣೆ ನೀಡಿರುವುದರಿಂದ ಈ ಹತ್ಯೆಯ ಹಿಂದೆ ದೊಡ್ಡ ಜಾಲ ಇರುವ ಶಂಕೆ ವ್ಯಕ್ತವಾಗಿತ್ತು. ಮೂಲಗಳ ಪ್ರಕಾರ ಕೇರಳ, ವಿದೇಶಿ ಶಕ್ತಿಗಳು ಕರಾವಳಿಯಲ್ಲಿ ಕೋಮು ಆಧಾರಿತ ಸಂಘರ್ಷ ಸೃಷ್ಟಿಸುವ ಹುನ್ನಾರವೇ ಈ ಕೊಲೆಯ ಭಾಗ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next