ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯ ಭಾಗವಾಗಿ ಸುಳ್ಯ ಪೇಟೆಯಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಚೇರಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ವಶಕ್ಕೆ ತೆಗೆದುಕೊಂಡಿದೆ.
ಸುಳ್ಯದ ಗಾಂಧಿನಗರದ ಆಲೆಟ್ಟಿ ರಸ್ತೆಯಲ್ಲಿರುವ ತಾಹಿರ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿರುವ ಪಿಎಫ್ಐ ಕಚೇರಿಯನ್ನು ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳು ಹತ್ಯೆಯ ಸಂಚಿನ ಸಭೆಗಳನ್ನು ನಡೆಸಲು, ಜನರಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸಲು, ಶಾಂತಿ ಮತ್ತು ಕೋಮು ಸೌಹಾರ್ದ ಕದಡುವ ಉದ್ದೇಶದಿಂದ ಸಭೆ ನಡೆಸಲು ಬಳಸಿಕೊಂಡಿದ್ದಾರೆ. 1967ರ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಕಲಂ 25ರ ಅನ್ವಯ ಕೃತ್ಯಕ್ಕೆ ಬಳಸಿದ ಸುಳ್ಯ ಪಿಎಫ್ಐ ಕಛೇರಿಯನ್ನು ಎನ್‌ಐಎ ಸ್ವಾಧೀನಕ್ಕೆ ಪಡೆದುಕೊಂಡಿದೆ. ಕಚೇರಿಯನ್ನು ಪೂರ್ವಾನುಮತಿ ಹೊರತುಪಡಿಸಿ ಯಾವುದೇ ರೀತಿಯಲ್ಲಿ ವರ್ಗಾಯಿಸಲು ಅಥವಾ ವ್ಯವರಿಸಲು ನಿರ್ಬಂಧಿಸಲಾಗಿದೆ. ವಶಪಡಿಸಿಕೊಂಡ ಆಸ್ತಿಯ ವಿವರಗಳುಳ್ಳ ನೋಟಿಸ್‌ನ ಪ್ರತಿಯನ್ನು ಕಟ್ಟಡದ ಮಾಲಕರು, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸುಳ್ಯ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ. ಪ್ರತಿಯೊಂದನ್ನು ಜಪ್ತಿ ಮಾಡಲಾದ ಕಚೇರಿಯ ಬಾಗಿಲಿಗೂ ಅಂಟಿಸಲಾಗಿದೆ.
ಕಚೇರಿಯಲ್ಲೇ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಮೂಲಗಳು ವಿವರಿಸಿವೆ. ತಮ್ಮ ಮೂರನೇ ಪ್ರಯತ್ನದಲ್ಲಿ ದುಷ್ಕರ್ಮಿಗಳು ಪ್ರವೀಣ್ ಅವರನ್ನು ಹತ್ಯೆಗೈದಿದ್ದರು. ಈ ಸಂಬಂಧ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ 20 ಮಂದಿಯ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಚಾರ್ಜ್ ಶೀಟ್‌ನಲ್ಲಿ 1,500 ಪುಟಗಳು ಮತ್ತು 240 ಸಾಕ್ಷಿಗಳ ಹೇಳಿಕೆಗಳಿವೆ.