Advertisement

Praveen Nettar Case; ಪ್ರಮುಖ ಆರೋಪಿ ಸುಳ್ಯದ ಮುಸ್ತಫಾ ಪೈಚಾರ್ ಬಂಧನ

11:48 AM May 10, 2024 | keerthan |

ಸುಳ್ಯ: 2022ರ ಜುಲೈನಲ್ಲಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ನಾಲ್ಕನೇ ಆರೋಪಿಯನ್ನು ಶುಕ್ರವಾರ (ಮೇ10) ಬಂಧಿಸಲಾಗಿದೆ.

Advertisement

ಪ್ರಮುಖ ಆರೋಪಿ ಎನ್ನಲಾದ ಸುಳ್ಯದ ಮುಸ್ತಫಾ ಪೈಚಾರು ಎಂಬಾತ ಬಂಧಿತ ಎನ್ನಲಾಗಿದ್ದು, ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರಿನಿಂದ ಆಗಮಿಸಿದ ಎನ್ಐಎ ತಂಡ ಆನೆಮಹಲ್ ಗ್ರಾಮದಲ್ಲಿ ಬಂಧಿಸಿ ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ದಿದೆ.

ಆನೆಮಹಲ್ ಗ್ರಾಮದ ಸಿರಾಜ್ ಎಂಬುವರ ಬಳಿ ಈತ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿರಾಜ್ ಎಂಬವರನ್ನು ಸಹ ಎನ್ಐಎ ವಿಚಾರಣೆಗೆ ಕರೆದುಕೊಂಡು ಹೋಗಿದ್ದು, ಜೊತೆಗೆ ಸಿರಾಜ್ ಬಳಿ ಕೆಲಸ ಮಾಡಿಕೊಂಡಿದ್ದ ಮತ್ತೋರ್ವ ವ್ಯಕ್ತಿ ಇಲಿಯಾಸ್ ಎಂಬುವರನ್ನು ಸಹ ವಿಚಾರಣೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

Advertisement

2022ರ ಜುಲೈ 26ರಂದು ರಾತ್ರಿ ಬೆಳ್ಳಾರೆಯಲ್ಲಿ ಪ್ರವೀಣ್‌ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ಬಂಧಿಸಲಾಗಿದ್ದು, ರಾಷ್ಟ್ರೀಯ ತನಿಖಾ ದಳ ತನಿಖೆ ಮುಂದುವರಿಸಿದೆ. ಆರೋಪಿ ಮುಸ್ತಫಾಗೆ ಎನ್‌ಐಎ ಲುಕ್‌ ಔಟ್‌ ನೋಟೀಸ್‌ ಹೊರಡಿಸಿದ್ದು, ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.

ಕಳೆದ ವರ್ಷ ಜನವರಿಯಲ್ಲಿ ಎನ್‌ಐಎ 20 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಎನ್‌ಐಎ ಚಾರ್ಜ್‌ಶೀಟ್‌ನ ಪ್ರಕಾರ, ಒಂದು ಸಮುದಾಯದ ಸದಸ್ಯರಲ್ಲಿ ಭಯವನ್ನು ಸೃಷ್ಟಿಸಲು ಮತ್ತು ಸಮಾಜದಲ್ಲಿ ಕೋಮು ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸಲು ಪಿಎಫ್‌ಐನ ಕಾರ್ಯಸೂಚಿಯ ಭಾಗವಾಗಿ ಪ್ರವೀಣ್ ನೆಟ್ಟಾರು ಅವರನ್ನು ಹರಿತವಾದ ಆಯುಧಗಳಿಂದ ಹತ್ಯೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next