ಬೆಂಗಳೂರು: ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಹಾಗೂ ತೇಜಸ್‌ಗೌಡ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಹಿಂದೂಪರ ಸಂಘಟನೆ ಮುಖಂಡ ಪ್ರವೀಣ್ ಖಾಂಡ್ಯಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್ ಸೋಮವಾರ ನಿರಾಕರಿಸಿದೆ.
ಪ್ರಕರಣ ಸಂಬಂಧ ಜಾಮೀನು ಕೋರಿ ಪ್ರವೀಣ್ ಖಾಂಡ್ಯ ಸತತ ಎರಡನೇ ಬಾರಿಗೆ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಬಿ.ಎ ಪಾಟೀಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಎರಡನೇ ಬಾರಿ ಅರ್ಜಿ ತಿರಸ್ಕರಿಸಿ, ಜಾಮೀನು ನೀಡಲು ನಿರಾಕರಿಸಿತು. ಈ ಹಿಂದೆ ಜಾಮೀನು ಕೋರಿ ಪ್ರವೀಣ್ ಖಾಂಡ್ಯ ಸಲ್ಲಿಸಿದ್ದ ಅರ್ಜಿಯನ್ನು ಸಹ ಹೈಕೋರ್ಟ್ ವಜಾಗೊಳಿಸಿತ್ತು.
ತೇಜಸ್ ಗೌಡ ಎಂಬಾತನನ್ನು 2016ರ ಜೂನ್ 28ರಂದು ಅಪಹರಿಸಿ ಸುಮಾರು 25 ಲಕ್ಷ ರೂ. ಬೇಡಿಕೆಯಿಟ್ಟ ಪ್ರಕರಣದಲ್ಲಿ 2016ರ ಡಿ.16ರಂದು ಪ್ರವೀಣ್ ಖಾಂಡ್ಯಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಈ ಕ್ರಮ ಪ್ರಶ್ನಿಸಿ ಪ್ರಕರಣದ ತನಿಖೆ ನಡೆಸಿದ್ದ ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ ಠಾಣಾ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದ್ದ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು.
ಬಳಿಕ ಆರೋಪಿ ಖಾಂಡ್ಯ ಅಧೀನ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಆತನನ್ನು ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದರಿಂದ 2018ರ ಸೆಪ್ಟೆಂಬರ್‌ನಲ್ಲಿ ಜಾಮೀನು ಕೋರಿ ಮೊದಲ ಬಾರಿಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಆ ಅರ್ಜಿಯನ್ನು 2018ರ ಅ.22ರಂದು ಹೈಕೋರ್ಟ್ ತಿರಸ್ಕರಿಸಿತ್ತು. ಇದಾದ ನಂತರ 2ನೇ ಬಾರಿ ಜಾಮೀನು ಕೋರಿ 2018ರ ಡಿ.19ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸೋಮವಾರ (ಫೆ.11) ಈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ, ಪ್ರವೀಣ್ ಖಾಂಡ್ಯಾಗೆ ಜಾಮೀನು ನೀಡಲು ನಿರಾಕರಿಸಿದೆ.
ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ ನಂತರವೇ ಆರೋಪಿ ಜಾಮೀನು ಕೋರಿ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಆಗ ಹೈಕೋರ್ಟ್ ಜಾಮೀನು ತಿರಸ್ಕರಿಸಿತ್ತು. ಇದಾದ ನಂತರ ತನಿಖಾಧಿಕಾರಿಗಳು ಇತರೆ ಆರೋಪಿಗಳ ಮೇಲೆ ಹೆಚ್ಚುವರಿ ದೋಷರೋಪ ಪಟ್ಟಿ ಸಲ್ಲಿಸಿದ ಬಳಿಕ ಪ್ರವೀಣ್ ಖಾಂಡ್ಯ ಜಾಮೀನು ಕೋರಿ ಎರಡನೇ ಬಾರಿ ಅರ್ಜಿ ಸಲ್ಲಿಸಿದ್ದಾರೆ.
ಆದರೆ, ಜಾಮೀನು ನೀಡಲು ಯಾವುದೇ ಬಲವಾದ ಅಂಶಗಳು ಕೋರ್ಟ್‌ಗೆ ಮನವರಿಕೆಯಾಗಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ಅರ್ಜಿ ತಿರಸ್ಕರಿಸಿದೆ. ಇದೇ ಪ್ರಕರಣದಲ್ಲಿ ತೇಜಸ್ ಕಡೆಯವರಿಂದ 10 ಲಕ್ಷ ರೂ. ಒತ್ತೆಹಣ ಪಡೆದ ಆರೋಪ ಎದುರಿಸಿ ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಮಾಡಿಕೊಂಡಿದ್ದು ಗಮನಾರ್ಹ.