Advertisement

ಕಳ್ಳ ಪೊಲೀಸ್‌ ಆಟದಲ್ಲಿ ಪ್ರವೀಣ್‌

12:05 PM Oct 19, 2018 | |

ನಟ ಪ್ರವೀಣ್‌ “ಚೂರಿಕಟ್ಟೆ’ ಬಳಿಕ ಯಾವ ಚಿತ್ರ ಆಯ್ಕೆ ಮಾಡಿಕೊಂಡರು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಹಾಗೆ ನೋಡಿದರೆ, ಅವರು ಬೆರಳೆಣಿಕೆಯ ಚಿತ್ರಗಳನ್ನು ಸದ್ದಿಲ್ಲದೆಯೇ ಮಾಡಿ ಮುಗಿಸಿರುವುದು ನಿಜ. ಆ ಸಾಲಿಗೆ “ಸ್ಟ್ರೈಕರ್‌’ ಹೊಸ ಸೇರ್ಪಡೆ ಎನ್ನಬಹುದು. ಚಿತ್ರ ಈಗ ಮುಗಿದಿದ್ದು, ನವೆಂಬರ್‌ ಅಂತ್ಯ ಅಥವಾ ಡಿಸೆಂಬರ್‌ ಮೊದಲ ವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಪ್ರವೀಣ್‌ ಆಯ್ಕೆ ಮಾಡಿಕೊಂಡ ಕಥೆ ವಿಭಿನ್ನವಾಗಿದೆ.

Advertisement

ನಿರ್ದೇಶಕ ಪವನ್‌ ತ್ರಿವಿಕ್ರಮ್‌ ಅವರು ಹೇಳಿದ ಕಥೆಯ ಒನ್‌ಲೈನ್‌ ವಿಶೇಷ ಅನಿಸಿದ್ದೇ ತಡ, ಪ್ರವೀಣ್‌ ನಟಿಸಲು ಗ್ರೀನ್‌ಸಿಗ್ನಲ್‌ ಕೊಟ್ಟು, ಇದೀಗ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ನಾಗಾಭರಣ ಅವರ ಬಳಿ ಕೆಲಸ ಮಾಡಿದ್ದ ನಿರ್ದೇಶಕ ಪವನ್‌ ತ್ರಿವಿಕ್ರಮ್‌ ಅವರಿಗೆ ಇದು ಮೊದಲ ಚಿತ್ರ. ಅವರನ್ನು ನಂಬಿ ಚಿತ್ರಕ್ಕೆ ಹಣ ಹಾಕಿ ನಿರ್ಮಾಣ ಮಾಡಿರುವ ಜಿ.ಶಂಕರಪ್ಪ, ಸುರೇಶ್‌ ಬಾಬು ಮತ್ತು ರಮೇಶ್‌ ಬಾಬು ಸಹೋದರರಿಗೂ ಇದು ಮೊದಲ ಅನುಭವ.

ಇನ್ನು, ನಾಯಕ ಪ್ರವೀಣ್‌ ಅವರಿಗೆ ಜೋಡಿಯಾಗಿ ಶಿಲ್ಪಾ ನಟಿಸಿದ್ದಾರೆ. “ಮುಂಗಾರು ಮಳೆ 2′ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಶಿಲ್ಪಾ ಅವರಿಗೆ ಇದು ಕನ್ನಡದಲ್ಲಿ ನಾಯಕಿಯಾಗಿ ಪೂರ್ಣಪ್ರಮಾಣದ ಚಿತ್ರ. ಈ ಹಿಂದೆ ತೆಲುಗು, ತಮಿಳು ಚಿತ್ರದಲ್ಲೂ ಶಿಲ್ಪಾ ನಟಿಸಿದ್ದಾರೆ. ಚಿತ್ರದ ಬಗ್ಗೆ ಹೇಳುವುದಾದರೆ, ಇದು ಪೊಲೀಸ್‌ ಮತ್ತು ಕ್ರಿಮಿನಲ್‌ ನಡುವಿನ ಕಥೆ. ಇಲ್ಲೊಂದು ಸಂಘರ್ಷವಿದೆ. ಅದರ ಜೊತೆಯಲ್ಲೇ ಒಂದು ಪ್ರೀತಿಯೂ ಇದೆ.

ಕ್ರೈಮ್‌ ಥ್ರಿಲ್ಲರ್‌ ಅಂಶಗಳು ಚಿತ್ರದ ಹೈಲೆಟ್‌. ಈಗಿನ ವಾಸ್ತವ ಅಂಶಗಳೊಂದಿಗೆ ಚಿತ್ರ ಮಾಡಿದ ಖುಷಿ ನಿರ್ಮಾಪಕ ಸಹೋದರರಿಗಿದೆ. ಹಾಗೆ ನೋಡಿದರೆ, ನಿರ್ಮಾಪಕರಿಗೆ ಸಿನಿಮಾ ಮಾಡುವ ಆಸೆ ಹೊಸದಲ್ಲ. ಚಿಕ್ಕಂದಿನಿಂದಲೂ ಅವರಿಗೆ ಒಳ್ಳೆಯ ಚಿತ್ರ ಮಾಡುವ ಯೋಚನೆ ಇತ್ತು. ಆದರೆ, ತಮಗೆ ಹಿಡಿಸುವ ಕಥೆ ಸಿಕ್ಕಿರಲಿಲ್ಲ. “ಸ್ಟ್ರೈಕರ್‌’ ಅವರ ನಂಬಿಕೆ ಹುಸಿಮಾಡಲ್ಲ ಎಂಬ ಭರವಸೆಯೂ ಇದೆ. ಇಲ್ಲಿ ನಾಯಕ, ಖಳನಟ ಇದ್ದರೂ, ಕಥೆಯೇ ಹೈಲೆಟ್‌ ಎಂಬುದು ನಿರ್ಮಾಪಕರ ಮಾತು.

ಪ್ರವೀಣ್‌ಗೆ ಎದುರಾಗಿ “ಭಜರಂಗಿ’ ಲೋಕಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಅಶೋಕ್‌ ಶರ್ಮ, ಹಾಸ್ಯನಟ ಧರ್ಮಣ್ಣ,  ಶಶಿಧರ ಕೋಟಿ, ಸಂದೀಪ್‌ ಇತರರ ಅಭಿನಯವಿದೆ. ಬೆಂಗಳೂರು ಸುತ್ತಮುತ್ತ ಸುಮಾರು 57 ದಿನ ಚಿತ್ರೀಕರಣ ನಡೆದಿದೆ. ಚಿತ್ರಕ್ಕೆ ಬಿ.ಜೆ.ಭರತ್‌ ಎರಡು ಹಾಡುಗಳಿಗೆ ಸಂಗೀತ ನೀಡಿದ್ದಾರೆ. “ಸಿಂಪಲ್‌’ ಸುನಿ ಸಾಹಿತ್ಯವಿದೆ. ವಿಜಯಪ್ರಕಾಶ್‌, ಸುಪ್ರಿಯಾ ಲೋಹಿತ್‌ ಹಾಡಿದ್ದಾರೆ. ಹೈದರಾಬಾದ್‌ ಮೂಲದ ರಾಕೇಶ್‌ ಛಾಯಾಗ್ರಹಣವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next