ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಡೆದಿದ್ದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಮೇರೆಗೆ ಮೂವರನ್ನು ನಗರದಿಂದ ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೇಕರಿ ಕಾರ್ಮಿಕರು
ಪೂರ್ವ ವಿಭಾಗದ ಗೋವಿಂದಪುರ ಠಾಣೆ ವ್ಯಾಪ್ತಿಯ ನಾಗವಾರ ಬಳಿಯ ಮಾನ್ಯತಾ ಟೆಕ್ ಪಾರ್ಕ್ ಬಳಿಯ ಬೇಕರಿ ಮತ್ತು ಕಾಫಿ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಸಯ್ಯದ್ ಇರ್ಫಾನ್, ಮೊಹಮ್ಮದ್ ಅಲ್ತಾಫ್ ಹಾಗೂ ಹೆಸರು ತಿಳಿದು ಬಾರದ ಮತ್ತೊಬ್ಬನನ್ನು ಮಂಗಳೂರಿಗೆ ಕರೆದೊಯ್ಯಲಾಗಿದೆ. ಇವರೆಲ್ಲರೂ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು.
ಹತ್ಯೆಗೆ ಒಂದೆರಡು ದಿನ ಮೊದಲು ಊರಿಗೆ ಹೋಗಿದ್ದರು ಇವರು ಕೆಲವು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ಬೇಕರಿ ಮತ್ತು ಕಾಫಿ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಪ್ರವೀಣ್ ಹತ್ಯೆಗೆ ಒಂದೆರಡು ದಿನಗಳ ಹಿಂದಷ್ಟೇ ಮೂವರೂ ಬೆಳ್ಳಾರೆಗೆ ಹೋಗಿದ್ದರು ಹಾಗೂ ಕೃತ್ಯದಲ್ಲಿ ಭಾಗಿಯಾಗಿ ಬಂಧನಕ್ಕೊಳಗಾಗಿರುವ ಶಫೀಕ್ ಮತ್ತು ಜಾಕೀರ್ ಜತೆ ಸಂಪರ್ಕದಲ್ಲಿದ್ದರು. ಕೃತ್ಯ ನಡೆದ ಬಳಿಕ ಬೆಂಗಳೂರಿಗೆ ಮರಳಿದ್ದಾರೆ ಎಂದು ಹೇಳಲಾಗಿದೆ.
ಪ್ರಸ್ತುತ ಬಂಧಿಸಲ್ಪಟ್ಟಿರುವ ಶಫೀಕ್ ಮತ್ತು ಜಾಕೀರ್ ಮಾಹಿತಿ ಮೇರೆಗೆ ಮೊಬೈಲ್ ಲೋಕೇಷನ್ ಆಧರಿಸಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಇವರು ನೇರವಾಗಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರಾ ಅಥವಾ ಆರೋಪಿಗಳಿಗೆ ನೆರವು ನೀಡಿದ್ದಾರಾ ಎಂಬುದು ತನಿಖೆ ನಡೆಸಿದ ಬಳಿಕವಷ್ಟೇ ತಿಳಿಯಬೇಕಿದೆ ಎಂದು ಮೂಲಗಳು ತಿಳಿಸಿವೆ.