ಆಳಂದ: ಮುಂಬರುವ ದಿನಗಳಲ್ಲಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಘದಿಂದ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ಹಾಗೂ ತಾಲೂಕು ಕಸಾಪ ಅಧ್ಯಕ್ಷ ಹಣಮಂತ ಶೇರಿ ಅವರು ಪ್ರಕಟಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಪ್ರಥಮ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆರಂಭದ ಹಂತದಲ್ಲಿ ಸಂಘವು ಬ್ಯಾಂಕ್ ಖಾತೆಯನ್ನು ಹೊಂದುವುದರ ಮೂಲಕ ತನ್ನ ಕೆಲಸ ಆರಂಭಿಸಲಿದೆ, ಅಲ್ಲದೇ ಸಂಘದ ಖಾತೆಯು ಅಧ್ಯಕ್ಷರ ಮತ್ತು ಪ್ರಧಾನ ಕಾರ್ಯದರ್ಶಿಗಳ ಹೆಸರಿನಲ್ಲಿ ಜಂಟಿ ಖಾತೆ ಹೊಂದಲಿದ್ದು, ಪಾರದರ್ಶಕವಾಗಿ ಲೆಕ್ಕ ಪತ್ರಗಳನ್ನು ಇಡುವ ಸಲುವಾಗಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ ಅಲ್ಲದೇ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ, ಪ್ರೋತ್ಸಾಹ ಧನ ವಿತರಣೆ, ವಿದ್ಯಾರ್ಥಿ ಕ್ಷೇಮಪಾಲನಾ ಕಲ್ಯಾಣ ನಿಧಿ ಸ್ಥಾಪಿಸುವುದರ ಜೊತೆಗೆ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಸಂಘ ದುಡಿಯಲಿದೆ ಎಂದು ವಿದ್ಯಾರ್ಥಿಗಳು ಓದಿನ ಕಡೆ ಗಮನಕೊಟ್ಟು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಸಂಘದ ಸೌಲಭ್ಯಗಳಿಗೆ ಪಾತ್ರರಾಗಬೇಕು ಎಂದು ಅವರು ಹೇಳಿದರು.
ಸಂಘಧ ಸಂಯೋಜಕ ಡಾ| ಶಿವಶರಣಪ್ಪ ಬಿರಾದಾರ ಮಾತನಾಡಿ, ಸಂಘಧ ನೋಂದಣಿ ಕಾರ್ಯವು ಪೂರ್ಣಗೊಂಡಿದ್ದು, ಈಗ ಮುಂದಿನ ದಿನಗಳಲ್ಲಿ ಸಂಘವು ವೇಗವಾಗಿ ತನ್ನ ಕಾರ್ಯ ಆರಂಭಿಸಲಿ ಎಂದು ಆಶಯ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಚಾರ್ಯ ನಿಂಗಣ್ಣ ಪೂಜಾರಿ, ಪ್ರ. ಕಾರ್ಯದರ್ಶಿ ನಾಗರಾಜ ಕೋರೆ ಸೇರಿದಂತೆ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಕಾಲೇಜಿನ ಸಿಬ್ಬಂದಿ ಭಾಗವಹಿಸಿದ್ದರು.