ರಾಯಚೂರು: ಓಸಾಮಾ ಬಿನ್ ಲಾಡೆನ್, ಮುಲ್ಲಾ ಓಮರ್ ಗೆ ಅಧಿಕಾರ ಕೊಟ್ಟರೆ ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಆಡಳಿತಕ್ಕೆ ತರುತ್ತಾರೆ ಎಂದು ಸಂಸದ ಪ್ರತಾಪ ಸಿಂಹ ಪರೋಕ್ಷವಾಗಿ ಟಾಂಗ್ ನೀಡಿದರು.
ತಾಲೂಕಿನ ಯಾಪಲದಿನ್ನಿಯಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಕಂಡರೆ ಪ್ರಾಣಿ ಪಕ್ಷಿಗಳಿಗೂ ಇಷ್ಟವಿಲ್ಲ. ಡಿಕೆಶಿ ಯೇಸು ಬೆಟ್ಟ ಮಾಡಲು ಹೋದರೆ, ಸಿದ್ದರಾಮಯ್ಯ ಟಿಪ್ಪು ಕುಂಡಲಿ ಬರೆಯಿಸಿದ್ದರು. ಸಿದ್ದರಾಮಯ್ಯನ ಕಾರಿಗೆ ಕಾಗೆ ಕುಳಿತರೆ, ಡಿಕೆಶಿ ಹೆಲಿಕಾಪ್ಟರ್ ಗೆ ಹದ್ದು ಹೊಡೆದಿದೆ. ಇವರಿಗೆ ಹನುಮಂತನನ್ನು ಪ್ರಶ್ನಿಸುವ ನೈತಿಕತೆ ಏನಿದೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ವರುಣಾದಲ್ಲಿ ಮನೆಗೆ ಹೋಗುವುದು ನಿಶ್ಚಿತ. ನಾಮಪತ್ರ ಸಲ್ಲಿಸಿದ ನಂತರ ಮತ್ತೆ ಬರುವುದಿಲ್ಲ ಎಂದಿದ್ದರು. ಬಿಜೆಪಿ ಸೋಮಣ್ಣನವರಿಗೆ ಟಿಕೆಟ್ ನೀಡುತ್ತಿದ್ದಂತೆ ಸೋಲಿನ ಭೀತಿ ಶುರುವಾಗಿದೆ ಎಂದರು.
ಕಾಂಗ್ರೆಸ್ ನವರಿಗೆ ವೀರಶೈವ ಲಿಂಗಾಯತರ ಬಗ್ಗೆ ನಡುಕ ಶುರುವಾಗಿದೆ. ಕಾಂಗ್ರೆಸ್ ನವರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಲಿಂಗಾಯತರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.