ಬೆಂಗಳೂರು: ತಮ್ಮ ವಿರುದ್ಧ ಬಿಜೆಪಿ ಸಲ್ಲಿಸಿದ್ದ ಅವಿಶ್ವಾಸ ನಿರ್ಣಯದ ನೋಟಿಸನ್ನು ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ತಿರಸ್ಕರಿಸಿದ್ದು, ಮಂಗಳವಾರದ ವಿಶೇಷ ಕಲಾಪದ ಕಾರ್ಯಸೂಚಿಯಲ್ಲಿ ಉಲ್ಲೇಖೀಸದಿರಲು ನಿರ್ಧರಿಸಿದ್ದಾರೆ.
ಇದರೊಂದಿಗೆ ಬಿಜೆಪಿ ಮತ್ತು ಸಭಾಪತಿ ನಡುವಿನ ಗುದ್ದಾಟ ಮತ್ತಷ್ಟು ತೀವ್ರಗೊಳ್ಳಲಿದೆ. ನ. 25ರಂದು ತಮ್ಮ ವಿರುದ್ಧ ಬಿಜೆಪಿಯ 11 ಜನ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಲು ಸೂಚನೆ ನೀಡಿರುವುದಕ್ಕೆ ಡಿ. 11 ರಂದು ಪರಿಷತ್ ಕಾರ್ಯದರ್ಶಿ ಹಿಂಬರಹದ ಮೂಲಕ ಎಲ್ಲ ಸದಸ್ಯರಿಗೂ ಮಾಹಿತಿ ನೀಡಿದ್ದಾರೆ. ಬಿಜೆಪಿ ಸದಸ್ಯರು ನೀಡಿದ್ದ ಎರಡು ಸೂಚನೆಗಳ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿದ್ದಾರೆ. ಸೂಚನೆಗಳನ್ನು ಪರಿಶೀಲಿಸಿ, ಅವರು ನೀಡಿರುವ ಸೂಚನೆಗಳು ನಿಯಮಾನುಸಾರವಾಗಿಲ್ಲ ಎಂದು ತೀರ್ಮಾನಿಸಿರುವುದಾಗಿ ಅದರಲ್ಲಿ ತಿಳಿಸಲಾಗಿದೆ. ಈ ಮೂಲಕ ತಮ್ಮ ವಿರುದ್ಧ ಬಿಜೆಪಿ ಸದಸ್ಯರು ಮಂಡಿಸಲು ನೀಡಿದ್ದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿರುವುದಾಗಿ ಹೇಳಲಾಗಿದೆ.
ಬಿಜೆಪಿ ಸದಸ್ಯರ ಸೂಚನೆ ತಿರಸ್ಕರಿಸಲು ಲೋಕಸಭೆಯ ನಿವೃತ್ತ ಸೆಕ್ರೆಟರಿ ಜನರಲ್ ಸುಭಾಷ್ ಕಶ್ಯಪ್ ಅವರ “ಪಾರ್ಲಿಮೆಂಟ್ ಪ್ರೊಸೀಜರ್’ ಪುಸ್ತಕದ 2003 ನೇ ಆವೃತ್ತಿಯಲ್ಲಿನ 254ನೇ ಪುಟದಲ್ಲಿನ ಅಂಶಗಳನ್ನು ಉಲ್ಲೇಖ ಮಾಡಲಾಗಿದೆ. ಅದರಲ್ಲಿ ಉಲ್ಲೇಖವಾಗಿರುವ ಪ್ರಕಾರ, “ಸಭಾಪತಿಯನ್ನು ಕೆಳಗಿಳಿಸಲು ನೀಡುವ ಕಾರಣಗಳು ಸ್ಪಷ್ಟ ಮತ್ತು ನಿರ್ದಿಷ್ಟವಾಗಿರಬೇಕು. ಸದಸ್ಯರು ನೀಡುವ ನಿರ್ದಿಷ್ಟ ಕಾರಣಗಳ ಮೇಲೆ ಸಭಾಪತಿ ಅಥವಾ ಉಪ ಸಭಾಪತಿ ತನ್ನ ಪದಚ್ಯುತಿ ವಿಷಯದ ಮೇಲೆ ಚರ್ಚಿಸಲು ಪರಿಗಣಿಸಹುದು’ ಎಂದು ಪ್ರಸ್ತಾವಿಸಲಾಗಿದೆ.
ಇದಕ್ಕೆ ಪೂರಕವಾಗಿ 1983ರಲ್ಲಿ ಮಾಜಿ ಸಂಸದ ಕೆ. ಮಯಾ ತೇವರ್ ಎನ್ನುವವರು ಲೋಕಸಭೆಯಲ್ಲಿ ಉಪ ಸಭಾಧ್ಯಕ್ಷರನ್ನು ಪದಚ್ಯುತಗೊಳಿಸುವಂತೆ ಆಗ್ರಹಿ ಸಿದ್ದರು. ಪದಚ್ಯುತಿಗೆ ಸ್ಪಷ್ಟ ಕಾರಣ ನೀಡದ ಹಿನ್ನೆಲೆಯಲ್ಲಿ ನಿರಾಕರಿಸಲಾಗಿತ್ತು. ಈ ಅಂಶವನ್ನು ಉಲ್ಲೇಖೀಸಿ ಸಭಾಪತಿ ತಮ್ಮ ವಿರುದ್ಧ ಬಿಜೆಪಿ ಸದಸ್ಯರು ನೀಡಿರುವ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡದಿರಲು ಕಾರಣ ಕೊಟ್ಟಿದ್ದಾರೆ.
ಬಿಜೆಪಿ ಸದಸ್ಯರು ನೀಡಿದ್ದ ಅವಿಶ್ವಾಸ ಮಂಡನೆಯ ಸೂಚನೆಯಲ್ಲಿ ನಿರ್ದಿಷ್ಟ ಕಾರಣ ನೀಡದ ಹಿನ್ನೆಲೆಯಲ್ಲಿ ಅದನ್ನು ಸದನದಲ್ಲಿಯೇ ಅಧಿಕೃತವಾಗಿ ತಿರಸ್ಕರಿಸಲಾಗಿದೆ. ಅಲ್ಲದೆ ಈ ಬಗ್ಗೆ ನೋಟಿಸ್ ನೀಡಿರುವ ಸದಸ್ಯರಿಗೆ ಹಿಂಬರಹವನ್ನು ನೀಡಲಾಗಿದೆ. ಒಮ್ಮೆ ತಿರಸ್ಕರಿಸಿದ ವಿಷಯದ ಮೇಲೆ ಚರ್ಚಿಸಲು ಅವಕಾಶವಿಲ್ಲ. ಮಂಗಳವಾರದ ಅಧಿವೇಶನದಲ್ಲಿ ಪ್ರಶ್ನೋತ್ತರ ಮತ್ತು ಗೋಹತ್ಯೆ ನಿಷೇಧ ಮಸೂದೆಗಳ ಮೇಲೆ ಚರ್ಚಿಸಲು ಅವಕಾಶ ಕಲ್ಪಿಸಲಾಗುವುದು.
-ಕೆ. ಪ್ರತಾಪಚಂದ್ರ ಶೆಟ್ಟಿ , ವಿಧಾನ ಪರಿಷತ್ ಸಭಾಪತಿ
ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯ ವಿಷಯದ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸಿದರೆ, ನಾವು ಅವಿಶ್ವಾಸ ನಿರ್ಣಯದ ಪರವಾಗಿ ನಿಲ್ಲುತ್ತೇವೆ. ಈ ಬಗ್ಗೆ ನಮ್ಮ ನಾಯಕರು ಈಗಾಗಲೇ ಸೂಚನೆ ನೀಡಿದ್ದಾರೆ. ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಸಭಾಪತಿಗಳು ಉಪ ಸಭಾಪತಿಗಳನ್ನು ಕೂಡಿಸಿ ಕಲಾಪ ನಡೆಸಲು ಅವಕಾಶ ನೀಡಬೇಕು.
– ಬಸವರಾಜ ಹೊರಟ್ಟಿ, ಜೆಡಿಎಸ್ ಸದಸ್ಯ