Advertisement
ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಪೊಲೀಸರು ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿಸಿದರು. ಪರಿಣಾಮವಾಗಿ ಇಡೀ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಘಟನೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಸೋಮವಾರ ಹುಣಸೂರು ಬಂದ್‌ಗೆ ಕರೆ ನೀಡಿವೆ.
2015ರಲ್ಲಿ ಹುಣಸೂರಿನಲ್ಲಿ ಹನುಮ ಜಯಂತಿ ಹಾಗೂ ಈದ್ ಮಿಲಾದ್ ಮೆರವಣಿಗೆ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಕೋಮು ಗಲಭೆ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಅಲ್ಲದೆ, ನಿರ್ಧಿಷ್ಟ ಮಾರ್ಗದಲ್ಲಿ ಮಾತ್ರ ಹನುಮ ಜಯಂತಿ ಮೆರವಣಿಗೆಗೆ ಅವಕಾಶ ನೀಡಲಾಗಿತ್ತು. ಆದರೆ, ಇದಕ್ಕೆ ಒಪ್ಪದ ಸಂಸದ ಪ್ರತಾಪ್ ಸಿಂಹ ಹಾಗೂ ಹನುಮಂತೋತ್ಸವ ಸಮಿತಿ ಪದಾಧಿಕಾರಿಗಳು ನಿಷೇಧಿತ ಮೂರು ರಸ್ತೆಗಳನ್ನು ಬಿಟ್ಟು ಈ ಹಿಂದಿನಂತೆ ನಗರದ ಕಲ್ಕುಣಿಕೆಯ ರಂಗನಾಥ ಬಡಾವಣೆಯಿಂದ ಮೆರವಣಿಗೆ ಹೊರಡಲು ಅವಕಾಶ ನೀಡುವಂತೆ ಪಟ್ಟು ಹಿಡಿದರು. ಇದಕ್ಕೆ ಪೊಲೀಸರು ಒಪ್ಪಲಿಲ್ಲ. ಮುಂಜಾಗ್ರತಾ ಕ್ರಮವಾಗಿ ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ಕರೆದೊಯ್ದರು. ಲಾಠಿ ಪ್ರಹಾರ:
ಈ ಮಧ್ಯೆ, ಹುಣಸೂರಿನಲ್ಲಿ ಮೈಸೂರು ರಸ್ತೆಯಲ್ಲಿ ಗುಂಪುಗೂಡಿದ್ದ ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈ ವೇಳೆ, ಕೆಲ ಕಿಡಿಗೇಡಿಗಳು ಹುಣಸೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಕಲ್ಲು ತೂರಿದ್ದರಿಂದ ಮೂರು ಬಸ್‌ಗಳು ಜಖಂ ಗೊಂಡಿವೆ. ಜತೆಗೆ, ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಹುಣಸೂರು ಉಪ ವಿಭಾಗಾಧಿಕಾರಿಗಳ ವಾಹನಕ್ಕೂ ಕಲ್ಲು ಬಿದ್ದಿದೆ. ಘಟನೆಯಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಮಹಿಳೆ ಹಾಗೂ ಬಸ್ ಕಂಡಕ್ಟರ್‌ಗೆ ಪೆಟ್ಟು ಬಿದ್ದಿದೆ.
Related Articles
ಇದೇ ವೇಳೆ, ಹನುಮ ಜಯಂತಿಯಲ್ಲಿ ಪಾಲ್ಗೊಳ್ಳಲು ಮೈಸೂರಿನಿಂದ ಹುಣಸೂರಿಗೆ ಬರುತ್ತಿದ್ದ ಸಂಸದ ಪ್ರತಾಪ್ ಸಿಂಹ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದರು. ಸ್ವತಃ ತಾವೇ ವಾಹನ ಚಾಲನೆ ಮಾಡಿಕೊಂಡು ಬರುತ್ತಿದ್ದ ಪ್ರತಾಪ್ ಸಿಂಹ ಅವರನ್ನು ಬಿಳಿಕೆರೆಯಲ್ಲೇ ಪೊಲೀಸರು ತಡೆಯುವ ಯತ್ನ ಮಾಡಿದರು. ಆದರೆ, ಅವರು ರಸ್ತೆಗೆ ಅಡ್ಡಲಾಗಿರಿಸಿದ್ದ ಬ್ಯಾರಿಕೇಡ್ ಮೇಲೆಯೇ ವಾಹನ ಹತ್ತಿಸಿಕೊಂಡು ಹುಣಸೂರಿನತ್ತ ಹೊರಟರು. ಹುಣಸೂರಿನಲ್ಲಿ ಪ್ರತಾಪ್ ಅವರನ್ನು ವಶಕ್ಕೆ ಪಡೆದ ಪೊಲೀಸರು, ತಮ್ಮ ವಾಹನದಲ್ಲಿ ಎಚ್.ಡಿ.ಕೋಟೆ ತಾಲೂಕಿನ ತಾರಕ ಅತಿಥಿಗೃಹಕ್ಕೆ ಕರೆದೊಯ್ದರು. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮತ್ತು ನಿರ್ಲಕ್ಷ್ಯದ ಚಾಲನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Advertisement
ಇಂದು ಯುವ ಮೋರ್ಚಾ ಪ್ರತಿಭಟನೆಹನುಮ ಮಾಲಾಧಾರಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ, ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ಬಿಜೆಪಿ ಯುವ ಮೋರ್ಚಾ ಡಿ.4ರಂದು (ಸೋಮವಾರ) ರಾಜ್ಯಾದ್ಯಂತ ಪ್ರತಿಭಟನೆಗೆ ಕರೆನೀಡಿರುವುದಾಗಿ ಬಿಜೆಪಿ ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ತಮ್ಮೇಶಗೌಡ ತಿಳಿಸಿದ್ದಾರೆ. ಸಂಸದ ಪ್ರತಾಪಸಿಂಹ ಹಾಗೂ ಕಾರ್ಯಕರ್ತರ ಬಂಧನದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಬಂಧಿತರನ್ನು ಬಿಡುಗಡೆ ಮಾಡದಿದ್ದರೆ ಸೋಮವಾರ ಹುಣಸೂರು ಬಂದ್ ಮಾಡಿ ಪ್ರತಿಭಟನೆಗಿಳಿಯುತ್ತೇವೆ.
- ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ. ಚುನಾವಣಾ ವರ್ಷವಾಗಿದ್ದರಿಂದ ರಾಜ್ಯದಲ್ಲಿ ಕೋಮು ಸಾಮರಸ್ಯ ಹಾಳು ಮಾಡಲು ಬಿಜೆಪಿ ಹೊರಟಿದೆ. ಸಂಸದರೇ ಕಾನೂನು ಕೈಗೆತ್ತಿಕೊಂಡರೆ ಜನರು ಅವರನ್ನೇ ಅನುಕರಿಸಿದರೆ ಕಾನೂನು ವ್ಯವಸ್ಥೆ ಏನಾಗಬೇಕು. ಪ್ರತಾಪ್ ಮಾಡಿರುದ್ದು ಅಪರಾಧ.
- ಸಿದ್ದರಾಮಯ್ಯ, ಮುಖ್ಯಮಂತ್ರಿಗಳು ರಾಜ್ಯ ಸರ್ಕಾರ ಹಿಟ್ಲರ್‌ಶಾಹಿ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಸಂಸದರನ್ನು ಪ್ರತಿಬಂಧಿಸುವುದು ಪ್ರಜಾಸತ್ತೆಯ ಹತ್ಯೆಯಾಗಿದ್ದು, ಈ ವಿಷಯದಲ್ಲಿ ರಾಜ್ಯ ಸರ್ಕಾರದ ನಡತೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
– ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ.