ಮಸ್ಕಿ: ಮಸ್ಕಿ ಉಪಚುನಾವಣೆ ಕೇವಲ ಶಾಸಕ ಸ್ಥಾನಕ್ಕೆ ಮಾತ್ರವಲ್ಲ; ಇದು ಮಂತ್ರಿ ಸ್ಥಾನದ ಚುನಾವಣೆ. ಪ್ರತಾಪಗೌಡ ಪಾಟೀಲ್ ಗೆದ್ದರೇ ಮಂತ್ರಿಯಾಗುವುದು ಫಿಕ್ಸ್ ಎನ್ನುವ ಅಸ್ತ್ರದ ಮೂಲಕ ಪ್ರಚಾರ ನಡೆಸಿದ್ದ ಬಿಜೆಪಿ ಘಟಾನುಘಟಿಗಳಿಗೆ ಮುಖಭಂಗವಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಆರ್. ಬಸನಗೌಡ ತುರುವಿಹಾಳ ಪರ ಅನುಕಂಪದ ಅಲೆ “ಕೈ’ ಹಿಡಿದಿದ್ದು, ಈ ಮೂಲಕ ಮಸ್ಕಿಗೆ ದಕ್ಕಬೇಕಿದ್ದ ಮಂತ್ರಿ ಸ್ಥಾನ ಕೈ ತಪ್ಪಿದಂತಾಗಿದೆ!. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ವಿರುದ್ಧ ಭುಗಿಲೆದ್ದು ಆಪರೇಷನ್ ಕಮಲಕ್ಕೆ ಬಲಿಯಾದ ಮೊದಲ ವ್ಯಕ್ತಿಯೇ ಪ್ರತಾಪಗೌಡ ಪಾಟೀಲ್. 17 ಜನ ಅತೃಪ್ತ ಶಾಸಕರ ಜತೆಗೂಡಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರು. ತೆರವಾಗಿದ್ದ ಈ ಸ್ಥಾನಕ್ಕೆ ನಡೆದ ಮಸ್ಕಿ ಉಪಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ್ ಋಣ ತೀರಿಸುವುದಕ್ಕಾಗಿ ಸ್ವತಃ ಬಿಜೆಪಿಯ ಆಡಳಿತ ಯಂತ್ರವೇ ಮಸ್ಕಿಯಲ್ಲಿ ಬೀಡುಬಿಟ್ಟಿತ್ತು.
ಸಿಎಂ ಯಡಿಯೂರಪ್ಪ ಪ್ರತ್ಯೇಕ ಎರಡು ಬಾರಿ ವಾಸ್ತವ್ಯ ಹೂಡುವ ಮೂಲಕ ಪ್ರಚಾರ ನಡೆಸಿ ಬಿಜೆಪಿಗೆ ಬಲ ತುಂಬಿದ್ದರು. ಅವರ ಪುತ್ರ ಬಿ.ವೈ. ವಿಜಯೇಂದ್ರ ಹದಿನೈದು ದಿನಕ್ಕೂ ಹೆಚ್ಚು ಕಾಲ ಮಸ್ಕಿಯಲ್ಲೇ ಬೀಡು ಬಿಟ್ಟು ರಾಜಕೀಯ ತಂತ್ರಗಳನ್ನು ಹೆಣೆದಿದ್ದರು. ಜಾತಿವಾರು ಮತದಾರರ ಓಲೈಕೆ, ಪ್ರಮುಖ ಮುಖಂಡರನ್ನು ಸೆಳೆಯುವುದು ಸೇರಿ ಹಲವು ರೀತಿಯ ಕಸರತ್ತು ನಡೆಸಿದ್ದರು. ರಾಜ್ಯ ಸರಕಾರದ ಒಂದು ಡಜನ್‌ಗೂ ಹೆಚ್ಚು ಶಾಸಕರು ಮಸ್ಕಿಯಲ್ಲಿ ಬೀಡು ಬಿಟ್ಟು ಮತಯಾಚನೆ ನಡೆಸಿದ್ದರು. ಪ್ರತಾಪಗೌಡ ಪಾಟೀಲ್ ಜತೆಗೂಡಿ ರಾಜೀನಾಮೆ ಸಲ್ಲಿಸಿ ಶಾಸಕರು, ಮಂತ್ರಿಗಳಾದ ಮಿತ್ರ ಮಂಡಳಿಯವರು ಪ್ರಚಾರದಲ್ಲಿ ಸಾಥ್ ನೀಡಿದ್ದರು. ಆದರೆ ಬಿಜೆಪಿಯ ಈ ಎಲ್ಲ ತಂತ್ರಗಳು ಮಸ್ಕಿ ಅಖಾಡದಲ್ಲಿ ನಡೆದಿಲ್ಲ ಎನ್ನುವುದಕ್ಕೆ ಫಲಿತಾಂಶವೇ ಸಾಕ್ಷಿ.
ಈ ಮೂಲಕ ಮಂತ್ರಿಯಾಗಬೇಕು ಎನ್ನುವ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಕನಸು ಭಗ್ನವಾಗಿದೆ. ಮಸ್ಕಿ ಕ್ಷೇತ್ರ, ರಾಯಚೂರು ಜಿಲ್ಲೆಗೂ ಇದರಿಂದ ಮಂತ್ರಿ ಭಾಗ್ಯ ಕೈ ತಪ್ಪಿದಂತಾಗಿದೆ. ಕೈ ಹಿಡಿದ ಅನುಕಂಪ: ಮಸ್ಕಿಯಲ್ಲಿ ಈ ಬಾರಿ ಅನುಕಂಪದ ಅಲೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕೈ ಹಿಡಿದಿದೆ. 2008ರಿಂದ 2018ರವರೆಗೂ ಮೂರು ಅವ ಧಿಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ವಿರೋ ಧಿ ಅಲೆ, 5ಎ ಕಾಲುವೆ ನೀರಾವರಿ ಬೇಡಿಕೆಗಳು ಬಿಜೆಪಿ ಅಭ್ಯರ್ಥಿ ವಿರುದ್ಧವಾಗಿ ಮತಗಳು ಚಲಾವಣೆಯಾಗಲು ಕಾರಣವಾಗಿದ್ದು, ಈ ಎರಡು ಅಂಶಗಳಿಗಿಂತಲೂ 2018ರ ಚುನಾವಣೆಯಲ್ಲಿ ಕೇವಲ 213 ಮತಗಳ ಅಂತರದಿಂದ ಸೋತಿದ್ದ ಆರ್.ಬಸನಗೌಡ ತುರುವಿಹಾಳ ಪರ ಅನುಕಂಪದ ಅಲೆ ಮಸ್ಕಿಯಲ್ಲಿತ್ತು.
ಈ ಅನುಕಂಪವನ್ನೇ ಬಳಸಿಕೊಂಡ ಕಾಂಗ್ರೆಸ್ ಹಲವು ಭಾವನಾತ್ಮಕ ಅಂಶಗಳನ್ನು ಪ್ರಚಾರದ ಅಖಾಡದಲ್ಲಿ ಉರುಳಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿ ಹಲವು ದಿಗ್ಗಜ ನಾಯರು ಬೀಡು ಬಿಟ್ಟು ಪ್ರಚಾರ ನಡೆಸಿದ್ದರು. “ಆರ್.ಬಸನಗೌಡ ತುರುವಿಹಾಳ ರೈತನ ಮಗ, 2018ರಲ್ಲಿ ಸೋತು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣಕ್ಕಾಗಿ ಮಾರಿಕೊಂಡ ಪ್ರತಾಪಗೌಡ ವಿರುದ್ಧ ಸ್ವಾಭಿಮಾನ ಪ್ರದರ್ಶನ ಮಾಡಬೇಕು’ ಎನ್ನುವ ಕಾಂಗ್ರೆಸ್‌ನ ಭಾವನಾತ್ಮಕ ಅಂಶಗಳು ಮತದಾರರ ಮೇಲೆ ನೇರ ಪರಿಣಾಮ ಬೀರಿವೆ. ಇದೇ ಅಂಶವೇ ಉಪ ಕದನದಲ್ಲಿ ಕೈ ಅಭ್ಯರ್ಥಿ ಗೆಲ್ಲಿಸುವಂತೆ ಮಾಡಿದೆ.