ಬೆಂಗಳೂರು: ಆಪರೇಷನ್ ಕಮಲ ಕಾರ್ಯಾಚರಣೆಗೊಳಗಾಗಿದ್ದಾರೆ ಎಂದು ಹೇಳಲಾಗಿದ್ದ ಕಾಂಗ್ರೆಸ್‌ನ ಆನಂದ್‌ಸಿಂಗ್ ಹಾಗೂ ಪ್ರತಾಪಗೌಡ ಪಾಟೀಲ್ ಅವರು ಶನಿವಾರ ಮಧ್ಯಾಹ್ನದವರೆಗೂ ನಗರದ ಗೋಲ್ಡ್ ಪಿಂಚ್
ಹೋಟೆಲ್‌ನಿಂದ ಹೊರಗೆ ಬಂದಿರಲಿಲ್ಲ.
ಇಬ್ಬರೂ ಶಾಸಕರು ಬಿಜೆಪಿ ಶಾಸಕ ಸೋಮಶೇಖರರೆಡ್ಡಿ ವಶದಲ್ಲಿ ಗೋಲ್ಡ್ ಪಿಂಚ್ ಹೋಟೆಲ್‌ನಲ್ಲಿದ್ದಾರೆ ಎಂಬ ಮಾಹಿತಿ ಪಡೆದ ಕಾಂಗ್ರೆಸ್ ನಾಯಕರು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರಿಗೆ ನಮ್ಮ ಶಾಸಕರಿಗೆ ಭದ್ರತೆ ಕೊಟ್ಟು ವಿಧಾನಸೌಧಕ್ಕೆ ಕರೆದುಕೊಂಡು ಬರಲು ಮನವಿ ಮಾಡಿದರು. ಶಾಸಕರಿಗೆ ಭದ್ರತೆ ಒದಗಿಸಲು ಸುಪ್ರೀಂಕೋರ್ಟ್ ಸಹ ಸೂಚನೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಹಾಗೂ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ನೇರವಾಗಿ ಹೋಟೆಲ್‌ಗೆ ಭೇಟಿ ನೀಡಿ ಇಬ್ಬರು ಶಾಸಕರ ಜತೆ ಮಾತನಾಡಿದರು.ಮಧ್ಯಾಹ್ನದ ನಂತರ ನಾವು ಹೊರ ಬರುತ್ತೇವೆ ಎಂದು ಶಾಸಕರು ಹೇಳಿದ್ದರು. ನಂತರ ಮಧ್ಯಾಹ್ನ 3ಗಂಟೆಗೆ ಪೊಲೀಸರ ಭದ್ರತೆಯಲ್ಲಿ ನೇರವಾಗಿ ವಿಧಾನಸೌಧ ಪ್ರವೇಶಿಸಿದರು.
ಈ ಮಧ್ಯೆ ಇಬ್ಬರು ಶಾಸಕರು ಕೋಣೆಯಿಂದ ಹೊರಬಾರದೆ ಇದ್ದ ಕಾರಣ ಗೋಲ್ಡ್ ಪಿಂಚ್ ಹೋಟೆಲ್‌ಗೆ ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಮತ್ತು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಆಗಮಿಸಿ ಧೈರ್ಯ ತುಂಬಿ ಕರೆದೊಯ್ದರು.
ಹೋಟೆಲ್ ಹಾಗೂ ರೆಸಾರ್ಟ್‌ನಲ್ಲಿ ತಂಗಿದ್ದ ಶಾಸಕರನ್ನು ವಿಧಾನಸೌಧಕ್ಕೆ ಕರೆತರಲು ರಾಜ್ಯ ಪೊಲೀಸರು ಹಾಗೂ ಕೇಂದ್ರೀಯ ಮೀಸಲು ಪಡೆಗಳು ಸೇರಿ ಒಟ್ಟು ಮೂರು ಸಾವಿರ ಮಂದಿಯನ್ನು ವಿಧಾನಸೌಧ, ವಿಕಾಸಸೌಧ,
ರಾಜಭವನ ಸುತ್ತ ನಿಯೋಜಿಸಲಾಗಿತ್ತು.