Advertisement

ಸಿಎಂ ವಿರುದ್ಧ ಪ್ರತಾಪ್‌ ಕಿಡಿ

02:58 PM Apr 30, 2018 | Team Udayavani |

ಮೈಸೂರು: ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ನನಗೆ ಮರಾಠಿ ಬರುವುದಿಲ್ಲ ಕ್ಷಮಿಸಿ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕಕ್ಕೆ ಅಪಮಾನ ಮಾಡಿದ್ದಾರೆ. ಕೂಡಲೇ ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂದು ಸಂಸದ, ರಾಜ್ಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರತಾಪ್‌ ಸಿಂಹ ಆಗ್ರಹಿಸಿದರು.

Advertisement

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಓಟಿಗಾಗಿ ಮರಾಠಿಗರ ಮುಂದೆ ಸಿದ್ದರಾಮಯ್ಯ ಮಂಡಿಯೂರಿ, ಕರ್ನಾಟಕ ಮತ್ತು ಕನ್ನಡಿಗರನ್ನು ಅಪಮಾನಿಸಿದ್ದಾರೆ ಎಂದು ತಿಳಿಸಿದರು.

ಕನ್ನಡದ ಅಸ್ಮಿತೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರಿಗೆ ಕನ್ನಡ ಅರಿವಿಲ್ಲ. ಇತ್ತೀಚೆಗೆ ಮಂಗಳೂರಿನಲ್ಲಿ ಬಿಡುಗಡೆ ಮಾಡಿದ ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನೇ ಪ್ರನಾಳಿಕೆ ಎಂದು ಮುದ್ರಿಸಲಾಗಿದೆ. ಇವರಿಗೆಲ್ಲಿದೆ ಕನ್ನಡ ಅಸ್ಮಿತೆ ಎಂದು ಪ್ರಶ್ನಿಸಿದರು.

ರಮ್ಯಾ ಎಲ್ಲಿ: ಭ್ರಷ್ಟಾಚಾರದ ಬಗ್ಗೆ ಸದಾ ಟ್ವೀಟ್‌ ಮಾಡುವ ರಮ್ಯಾ ಈಗೆಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಲಲಿತ್‌ ಮೋದಿ, ನೀರವ್‌ ಮೋದಿ, ವಿಜಯಮಲ್ಯ ಅವರು ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಮಾಡಿ, ಈಗ ಮೋದಿ ಭಯದಿಂದ ದೇಶ ಬಿಟ್ಟಿದ್ದಾರೆ ಎಂದು ಹೇಳಿದರು.

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಡೆ ತಿರುಗಾಡುತ್ತಿರುವ ಸೋನಿಯಾಗಾಂಧಿ, ರಾಹುಲ್‌ ಗಾಂಧಿ ಕೂಡ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ರಾಹುಲ್‌ ಗಾಂಧಿ ಅವರ ಅಜ್ಜ ಆಗಿನ ಕಾಲದಲ್ಲೇ ಜೀಪ್‌ ಹಗರಣ ನಡೆಸಿದ್ದರು. ಇಂತವರಿಂದ ನಾವು ನೈತಿಕತೆಯ ಪಾಠ ಕಲಿಯಬೇಕಿಲ್ಲ ಎಂದು ತಿಳಿಸಿದರು.

Advertisement

ಮುಗಿದ ಅಧ್ಯಾಯ: ವರುಣಾ ಕ್ಷೇತ್ರದ ಟಿಕೆಟ್‌ ಹಂಚಿಕೆ ವಿಚಾರ ಮುಗಿದ ಅಧ್ಯಾಯ. ಯಡಿಯೂರಪ್ಪ ಅವರು ತಮ್ಮ ಪುತ್ರ ವಿಜಯೇಂದ್ರ ಅವರನ್ನು ವರುಣಾ ಕ್ಷೇತ್ರದಲ್ಲಿ ಪ್ರಚಾರಕ್ಕಷ್ಟೇ ಕಳುಹಿಸಿದ್ದರು. ಅಭ್ಯರ್ಥಿಯಾಗಿ ಅಲ್ಲ. ಈ ಬಗ್ಗೆ ಸ್ವತಃ ವಿಜಯೇಂದ್ರ ಅವರೇ ಸ್ಪಷ್ಟನೇ ನೀಡಿ, ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಹೇಳಿದರು. ಪಕ್ಷದ ಮುಖಂಡರಾದ ಮೈ.ವಿ.ರವಿಶಂಕರ್‌, ಮಹೇಶ್‌ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ರೈ ನಿಜಜೀವನದಲ್ಲೂ ಖಳನಾಯಕ: ಪ್ರಕಾಶ್‌ ರೈ ಸಂವಿಧಾನ ಉಳಿಸಿ ಎಂದು ಕೇಳುತ್ತಿದ್ದಾರೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬರೆದುಕೊಟ್ಟ ಸಂವಿಧಾನದ ಪೀಠಿಕೆಯನೇ° ಕಾಂಗ್ರೆಸ್‌ನವರು ಬದಲಾವಣೆ ಮಾಡಲಿಲ್ಲವೇ ಎಂದು ಪ್ರಶ್ನಿಸಿದರು. ಪ್ರಕಾಶ್‌ ರೈ, ತೆರೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಖಳನಾಯಕ. ಅವರೀಗ ಮಾಡುತ್ತಿರುವುದೆಲ್ಲಾ ಚುನಾವಣಾ ಗಿಮಿಕ್‌, ಇದಕ್ಕೆಲ್ಲಾ ಜನರೇ ಉತ್ತರ ನೀಡುತ್ತಾರೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next