ಮುಂಬಯಿ: ದೇಶದಲ್ಲಿ ಅಲ್ಪಸಂಖ್ಯಾಕರ ಮೇಲೆ ಹಲ್ಲೆ ನಡೆಯುತ್ತಿದೆ ಹಾಗೂ ಅಸಹಿಷ್ಣುತೆ ಸನ್ನಿವೇಶ ಎದುರಾಗಿದೆ ಎಂದು ಆಕ್ಷೇಪಿಸಿ ಪ್ರಧಾನಿ ನರೇಂದ್ರ ಮೋದಿಗೆ ವಿವಿಧ ಕ್ಷೇತ್ರಗಳ 49 ಗಣ್ಯರು ಪತ್ರ ಬರೆದಿದ್ದನ್ನು ವಿರೋಧಿಸಿ ಸಿನಿಮಾ ನಿರ್ದೇಶಕ ಪ್ರಸೂನ್ ಜೋಶಿ, ನಟಿ ಕಂಗನಾ ರನೌತ್ ಸಹಿತ 61 ಗಣ್ಯರು ಮಾತನಾಡಿದ್ದಾರೆ.
ಅಸಹಿಷ್ಣುತೆ ಬಗ್ಗೆ ಆರೋಪವು ಸುಳ್ಳು ಎಂದು ಅವರು ಹೇಳಿದ್ದಾರೆ. ಜುಲೈ 23ರಂದು ಗಣ್ಯರು ಬರೆದ ಪತ್ರಗಳು ರಾಜಕೀಯ ಪಕ್ಷಪಾತಿತನವನ್ನು ಹೊಂದಿದೆ ಹಾಗೂ ಕೆಲವು ಘಟನೆಗಳಿಗೆ ಮಾತ್ರ ಅವರು ತಮ್ಮ ಆಕ್ಷೇಪ ವ್ಯಕ್ತಪಡಿಸಿರುವುದು ಇದನ್ನು ಸ್ಪಷ್ಟಪಡಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ಹಾಳು ಮಾಡುವುದು ಮತ್ತು ರಾಷ್ಟ್ರೀಯತೆ, ಮಾನವೀಯತೆ ಆಧಾರದಲ್ಲಿ ಆಡಳಿತ ನಡೆಸುವ ಮೋದಿಯವರ ಪ್ರಯತ್ನವನ್ನು ಇದು ಋಣಾತ್ಮಕವಾಗಿ ಬಿಂಬಿಸುತ್ತದೆ. ನಿರ್ದೇಶಕ ಮಣಿರತ್ನಂ, ಅನುರಾಗ್ ಕಶ್ಯಪ್, ಶ್ಯಾಮ್ ಬೆನಗಲ್ ಹಾಗೂ ಅಪರ್ಣಾ ಸೇನ್ ಸಹಿತ ಹಲವು ಗಣ್ಯರು ಮೋದಿಗೆ ಪತ್ರ ಬರೆದು ಜೈ ಶ್ರೀರಾಮ್ ಎಂಬ ಘೋಷಣೆಯನ್ನು ಪ್ರಚೋದನೆಗೆ ಬಳಸಲಾಗುತ್ತಿದೆ. ಜೈ ಶ್ರೀರಾಮ್ ಘೋಷಣೆ ಕೂಗದಿದ್ದವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಧರ್ಮಾಧಾರಿತ ದ್ವೇಷ ಹೆಚ್ಚುತ್ತಿದೆ ಎಂದು ಆಕ್ಷೇಪಿಸಿದ್ದರು.
ಬಿಜೆಪಿ ನಾಯಕನಿಂದಲೇ ಟೀಕೆ: ದೇಶದಲ್ಲಿ ಅಸಹಿಷ್ಣುತೆ ಇಲ್ಲ ಎಂದು ಹೇಳಿಕೆ ನೀಡಿದ ಗಣ್ಯರನ್ನು ಪಶ್ಚಿಮ ಬಂಗಾಲದ ಬಿಜೆಪಿ ಉಪಾಧ್ಯಕ್ಷ ಚಂದ್ರ ಕುಮಾರ್ ಬೋಸ್ ಟೀಕಿಸಿದ್ದಾರೆ! ಅಷ್ಟೇ ಅಲ್ಲ, ದೇಶದಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಬಲವಂತ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರಧಾನಿಗೆ ಪತ್ರ ಬರೆದಿರುವ 49 ಗಣ್ಯರಿಗೆ ಬೋಸ್ ಬೆಂಬಲವನ್ನೂ ಘೋಷಿಸಿದ್ದಾರೆ. ಗುಂಪು ಥಳಿತದ ಬಗ್ಗೆ ಸೆಲೆಬ್ರಿಟಿಗಳ ಕಾಳಜಿ ನಾನು ಮೆಚ್ಚುತ್ತೇನೆ. ಇಂತಹ ಘಟನೆಗಳನ್ನು ನಿಯಂತ್ರಿಸಲು ಪ್ರಧಾನಿ ಮೋದಿ ಕ್ರಮ ಕೈಗೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೇನೆ. ಈ ಪತ್ರವನ್ನು ಯಾರು ಬರೆದಿದ್ದಾರೆ ಎಂಬುದನ್ನು ನಾನು ನೋಡುತ್ತಿಲ್ಲ. ಬದಲಿಗೆ ಪತ್ರದಲ್ಲಿನ ಅಂಶಗಳನ್ನು ಮಾತ್ರ ನಾನು ನೋಡಿದ್ದೇನೆ ಎಂದು ಅವರು ಹೇಳಿದ್ದಾರೆ.