Advertisement

ಬ್ರೆಟ್‌ ಲೀ ಮೇಲೆ ಅಭಿಮಾನ, ಮಸಾಲೆ ದೋಸೆ ಮೇಲೆ ಆಸೆ… : ಪ್ರಸಿದ್ಧ್ ಕೃಷ್ಣ

11:05 PM Mar 24, 2021 | Team Udayavani |

ಪ್ರಸಿದ್ಧ್ ಕೃಷ್ಣ!
ಕರ್ನಾಟಕದ ಈ ವೇಗಿಯ ಹೆಸರು ದಿಢೀರನೇ ಟೀಮ್‌ ಇಂಡಿಯಾದಲ್ಲಿ ಚಾಲ್ತಿಗೆ ಬಂದಿದೆ. ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ಏಕದಿನ ತಂಡಕ್ಕೆ ಆಯ್ಕೆಯಾಗುವಷ್ಟರಲ್ಲಿ ಮೊದಲ ಪಂದ್ಯದ ಆಡುವ ಬಳಗದಲ್ಲೂ ಕಾಣಿಸಿಕೊಂಡ ಅದೃಷ್ಟಶಾಲಿ. ಅಷ್ಟೇ ಅಲ್ಲ. ಚೊಚ್ಚಲ ಪಂದ್ಯದಲ್ಲೇ ಅತ್ಯಧಿಕ ವಿಕೆಟ್‌ ಪಡೆದ ಭಾರತೀಯ ಬೌಲರ್‌ ಎಂಬ ದಾಖಲೆಗೂ ಪಾತ್ರರಾದರು. ಖಂಡಿತ ಇದೊಂದು ಕನಸಿನ ಆರಂಭ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಸಿದ್ಧಿಗೆ ಬರುವ ಸೂಚನೆಯನ್ನು ಒಂದೇ ಪಂದ್ಯದಲ್ಲಿ ರವಾನಿಸಿದ್ದಾರೆ ಪ್ರಸಿದ್ಧ್ ಕೃಷ್ಣ.

Advertisement

ಸಹಜವಾಗಿಯೇ ಎಲ್ಲರಿಗೂ ಈ ಕ್ರಿಕೆಟಿಗನ ಬಗ್ಗೆ ಕುತೂಹಲ ಹೆಚ್ಚಿದೆ. ಭಾರತ ತಂಡದಲ್ಲಿ ಈಗಾಗಲೇ ಸಾಕಷ್ಟು ಮಂದಿ ವೇಗಿಗಳಿದ್ದಾರೆ. ಅನೇಕರು ಹೊಸಬರು. ಸಾಕಷ್ಟು ಯಶಸ್ಸನ್ನೂ ಕಂಡಿದ್ದಾರೆ. ಸಿರಾಜ್‌, ನಟರಾಜನ್‌, ಠಾಕೂರ್‌, ಸೈನಿ… ಇವರೆಲ್ಲರ ಮಧ್ಯೆ ಈ 25 ವರ್ಷದ ಪ್ರಸಿದ್ಧ್ ಕೃಷ್ಣ ಆಯ್ಕೆಯಾದಾಗ ಅಚ್ಚರಿಯಾದದ್ದು ಸಹಜ. ಆದರೆ ಈ ಆಯ್ಕೆಯನ್ನು ಮೊದಲ ಪಂದ್ಯದಲ್ಲೇ ಸಮರ್ಥಿಸಿಕೊಂಡದ್ದು ಪ್ರಸಿದ್ಧ್ ಹೆಚ್ಚುಗಾರಿಕೆ.

ಆಸ್ಟ್ರೇಲಿಯದ ನಂಟು
25 ವರ್ಷದ ಪ್ರಸಿದ್ಧ್ ಕೃಷ್ಣ ಬ್ರೆಟ್‌ ಲೀ ಅವರನ್ನು ಅತಿಯಾಗಿ ಆರಾಧಿಸುತ್ತಾರೆ. ಅವರ ಪಕ್ಕಾ ಅಭಿಮಾನಿ. ಹಾಗೆಯೇ ಮಸಾಲೆ ದೋಸೆಯನ್ನು ಬಹಳ ಇಷ್ಟಪಡುತ್ತಾರೆ, ಆಸ್ಟ್ರೇಲಿಯದೊಂದಿಗೆ ಈತನದ್ದು ನಿಕಟ ಸಂಬಂಧ ಎನ್ನುತ್ತಾರೆ ತಂದೆ ಮುರಳೀಕೃಷ್ಣ. ಮೊದಲು ಆಲ್‌ರೌಂಡರ್‌ ಆಗಿದ್ದ ಪ್ರಸಿದ್ಧ್ 14 ವರ್ಷದ ಬಳಿಕ ವೇಗದ ಬೌಲಿಂಗನ್ನೇ ಗಂಭೀರವಾಗಿ ತೆಗೆದುಕೊಂಡರು.

11ನೇ ವರ್ಷದಿಂದಲೇ ಪ್ರಸಿದ್ಧ್ ಕೃಷ್ಣನ ಕ್ರಿಕೆಟ್‌ ಮತ್ತು ಬೌಲಿಂಗ್‌ ನಂಟು ಮೊದಲ್ಗೊಳ್ಳುತ್ತದೆ. ಮೊದಲು ಎಂಆರ್‌ಎಫ್ ಫೌಂಡೇಶನ್‌ ಮತ್ತು ಆಸೀಸ್‌ ಮಾಜಿ ವೇಗಿಗಳಾದ ಜೆಫ್ ಥಾಮ್ಸನ್‌, ಗ್ಲೆನ್‌ ಮೆಗ್ರಾತ್‌ ಗರಡಿಯಲ್ಲಿ ಪಳಗುವ ಅವಕಾಶ ಲಭಿಸಿತು.

2017ರಲ್ಲಿ “ಐಡಿಬಿಐ ಫೆಡರಲ್‌ ಬೌಲಿಂಗ್‌ ಫೌಂಡೇಶನ್‌’ನೊಂದಿಗೆ ಪ್ರಸಿದ್ಧ್ ಕೃಷ್ಣ ಮತ್ತೆ ಆಸ್ಟ್ರೇಲಿಯಕ್ಕೆ ಪಯಣಿಸುತ್ತಾರೆ. ತುಷಾರ್‌ ದೇಶಪಾಂಡೆ ಮತ್ತು ಇತರ ಇಬ್ಬರು ವೇಗಿಗಳೂ ಇರುತ್ತಾರೆ. ಅಲ್ಲಿ ಥಾಮ್ಸನ್‌ ಮಾರ್ಗದರ್ಶನ ಲಭಿಸುತ್ತದೆ.

Advertisement

ಬುದ್ಧಿವಂತ ಬೌಲರ್‌
ಮಾಜಿ ಕ್ರಿಕೆಟ್‌ ಆಡಳಿತಾಧಿಕಾರಿ ಮಕರಂದ್‌ ವೈಂಗಣರ್‌ ಹೇಳುವ ಪ್ರಕಾರ, ಬ್ರಿಸ್ಬೇನ್‌ನ “ಕ್ರಿಕೆಟ್‌ ಆಸ್ಟ್ರೇಲಿಯ ಅಕಾಡೆಮಿ’ಯಲ್ಲಿ ತರಬೇತಿ ಲಭಿಸಿದ್ದು ಪ್ರಸಿದ್ದ್ ಗೆ ಭಾರೀ ಲಾಭ ತಂದಿತು.

“ಅವರೋರ್ವ ಜಾಣ್ಮೆಯ ಹಾಗೂ ಬುದ್ಧಿವಂತ ಬೌಲರ್‌. ಮೊದಲ 3 ಓವರ್‌ಗಳಲ್ಲಿ ದಂಡಿಸಿ ಕೊಂಡ ಬಳಿಕ ತಿರುಗಿ ಬಿದ್ದ ರೀತಿಯೇ ಇದಕ್ಕೆ ಸಾಕ್ಷಿ’ ಎನ್ನುತ್ತಾರೆ ಅಂಕಣಕಾರರೂ ಆಗಿರುವ ವೈಂಗಣRರ್‌.

2015ರಲ್ಲೇ ಈ ಬೌಲರ್‌ ಮೇಲೆ ಕಣ್ಣಿಟ್ಟಿದ್ದೆ ಎನ್ನುತ್ತಾರೆ ಎಂಆರ್‌ಎಫ್ನ ಪ್ರಧಾನ ಕೋಚ್‌ ಸೆಂಥಿಲನಾಥನ್‌. ಅಂದು ಬಾಂಗ್ಲಾ “ಎ’ ವಿರುದ್ಧ ಪ್ರಸಿದ್ಧ್ ಮಿಂಚಿನ ಬೌಲಿಂಗ್‌ ನಡೆಸಿದ್ದರು. ಇಂಥದೇ ಪರಾಕ್ರಮವೀಗ ಟೀಮ್‌ ಇಂಡಿಯಾ ದಲ್ಲೂ ಮುಂದುವರಿಯುವ ಸೂಚನೆ ಸಿಕ್ಕಿದೆ.

“ಕಷ್ಟಪಟ್ಟು ಮೇಲೆ ಬಂದಿದ್ದೇನೆ’
“ಎಲ್ಲ ಕ್ರಿಕೆಟಿಗರೂ ಕಷ್ಟಪಟ್ಟು ಮೇಲಕ್ಕೆ ಬರುತ್ತಾರೆ. ಇದಕ್ಕೆ ನಾನೂ ಹೊರತಲ್ಲ. ತಂದೆ, ತಾಯಿ, ಕುಟುಂಬ ಮತ್ತು ಗೆಳೆಯರಿಗೆ ಈ ಆಯ್ಕೆಯನ್ನು ಅರ್ಪಿಸುತ್ತಿದ್ದೇನೆ. ಇವರೇ ನನ್ನಲ್ಲಿ ಪ್ರೋತ್ಸಾಹ ತುಂಬಿದವರು. ಹೆತ್ತವರಂತೂ ಏನೂ ಇಲ್ಲ ಎಂದು ಹೇಳಿದವರೇ ಅಲ್ಲ…’ ಎಂದು ಪ್ರಸಿದ್ಧ್ ಕೃಷ್ಣ “ಉದಯವಾಣಿ’ಯೊಂದಿಗೆ ಹೇಳಿಕೊಂಡಿದ್ದರು. ಇವರ ಯಶಸ್ವಿ ಪದಾರ್ಪಣೆಯ ಬಳಿಕ ತಂದೆ ಮುರಳೀಕೃಷ್ಣ ಮಗನ ಕುರಿತು ಮಾಧ್ಯಮದವರೊಂದಿಗೆ ಮಾತಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next