Advertisement

ಹೌಡಿ ಮೋದಿ ಕಾರ್ಯಕ್ರಮದಲ್ಲಿ ನಮೋ ನಡೆಯನ್ನು ಪ್ರಶಂಸಿಸಿದ ಪ್ರಶಾಂತ್ ಕಿಶೋರ್

08:42 AM Sep 24, 2019 | Hari Prasad |

ರಾಜಕೀಯ ತಂತ್ರಗಾರಿಕೆ ಚತುರ ಪ್ರಶಾಂತ್ ಕಿಶೋರ್ ಅವರು ನಿನ್ನೆ ಹ್ಯೂಸ್ಟನ್ ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತೋರಿದ ಜಾಣ ನಡೆಯನ್ನು ಪ್ರಶಂಸಿದ್ದಾರೆ.

Advertisement

ಈ ಕಾರ್ಯಕ್ರಮದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸುವಂತೆ ಮಾಡಿದ ಮಾತ್ರವಲ್ಲದೇ ಅಮೆರಿಕಾ ಅಧ್ಯಕ್ಷರೊಬ್ಬರ ಎದುರು ಭಾರತದ ಪ್ರಧಾನಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ರಾಜಕೀಯ ತಂತ್ರಗಾರಿಕೆಗೆ ಪ್ರಶಾಂತ್ ಭೂಷಣ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಅಮೆರಿಕಾ ಅಧ್ಯಕ್ಷರು ಚುನಾವಣೆಯನ್ನು ಎದುರಿಸಲು ಸಿದ್ಧರಾಗುತ್ತಿರುವ ಈ ಸಂದರ್ಭದಲ್ಲಿ ‘ರಾಜಕೀಯ ಪ್ರತಿದಾಳಿ’ ಸನ್ನಿವೇಶವನ್ನು ಭಾರತೀಯ ಸಮುದಾಯದ ಅನುಕೂಲಕ್ಕಾಗಿ ಬಳಸಿಕೊಳ್ಳುವ ಚಾಣಾಕ್ಷತನವನ್ನು ಪ್ರಧಾನಿ ಮೋದಿ ಅವರು ತೋರಿಸಿದ್ದಾರೆ – ಮತ್ತು ಅಭೂತಪೂರ್ವ ಜನಸಂದೋಹವನ್ನು ತನ್ನ ಮಾತಿನ ಮೂಲಕ ಚಕಿತಗೊಳಿಸಿದ್ದಾರೆ, ಪ್ರಜಾಪ್ರಭುತ್ವದಲ್ಲಿ ಇದೂ ಗಣನೆಗೆ ಬರುತ್ತದೆ’ ಎಂದು ಪ್ರಶಾಂತ್ ಕಿಶೋರ್ ಅವರು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಹ್ಯೂಸ್ಟನ್ ನಲ್ಲಿ ನಡೆದ ಈ ಮೆಗಾ ಸಮಾರಂಭವು ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನವನ್ನು ತನ್ನತ್ತ ಸೆಳೆದಿತ್ತು ಮಾತ್ರವಲ್ಲದೇ ಸುಮಾರು 50 ಸಾವಿರ ಭಾರತೀಯ ಅಮೆರಿಕನ್ನರ ಭಾಗೀದಾರಿಕೆಗೆ ಈ ಕಾರ್ಯಕ್ರಮ ಸಾಕ್ಷಿಯಾಗಿತ್ತು.

ಅದ್ಯಕ್ಷೀಯ ಚುನಾವಣೆ ಮುಂದಿರುತ್ತಾ ಈ ವೇದಿಕೆಯನ್ನು ಚೆನ್ನಾಗಿಯೇ ಬಳಸಿಕೊಂಡ ಟ್ರಂಪ್ ಅವರು ಅಮೆರಿಕಾದಲ್ಲಿರುವ ಭಾರತೀಯ ಸಮುದಾಯಕ್ಕಾಗಿ ತಮ್ಮ ಸರಕಾರ ಕೈಗೊಂಡಿರುವ ಕಾರ್ಯಕ್ರಮಗಳ ವಿವರವನ್ನು ತಮ್ಮ ಭಾಷಣದಲ್ಲಿ ನೀಡಿದರು. ಮಾತ್ರವಲ್ಲದೇ ತಾನು ಭಾರತದ ಅತ್ಯುತ್ತಮ ಸ್ನೇಹಿತ ಎಂಬುದನ್ನು ಟ್ರಂಪ್ ಅವರು ಭಾರತೀಯ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಮಾಡಿದರು.

Advertisement

ಇತ್ತ ಮೋದಿ ಅವರೂ ಸಹ ಟ್ರಂಪ್ ಅವರನ್ನು ಸಭೆಗೆ ಪರಿಚಯ ಮಾಡಿಕೊಡುವ ಸಂದರ್ಭದಲ್ಲಿ ‘ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’ ಎಂದು ಘೋಷಿಸಿದ್ದು ವಿಶೇಷವಾಗಿತ್ತು.

ನಾನು ಹಲವಾರು ಸಲ ಟ್ರಂಪ್ ಅವರನ್ನು ಭೇಟಿಯಾಗಿದ್ದೇನೆ. ಆದರೆ ಪ್ರತೀ ಸಲ ಭೇಟಿಯಾದಗಲೂ ಟ್ರಂಪ್ ಅವರು ಅದೇ ಸ್ನೇಹ, ಸಜ್ಜನಿಕೆ ಮತ್ತು ಸರಳತೆಯುಳ್ಳ ವ್ಯಕ್ತಿಯಾಗಿ ನನಗೆ ಕಾಣಿಸುತ್ತಾರೆ. ಅವರಲ್ಲಿರುವ ನಾಯಕತ್ವ ಗುಣ ಹಾಗೂ ಅಮೆರಿಕಾ ಮೇಲಿರುವ ಅವರ ಪ್ರೀತಿಗಾಗಿ ನಾನು ಅವರನ್ನು ವಿಶೇಷವಾಗಿ ಗೌರವಿಸುತ್ತೇನೆ’ ಎಂದು ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದರು.

2014ರ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಬಿಜೆಪಿಯ ರಾಜಕೀಯ ತಂತ್ರಗಾರಿಕೆಯ ಮಾಸ್ಟರ್ ಮೈಂಡ್ ಆಗಿದ್ದ ಪ್ರಶಾಂತ್ ಕಿಶೋರ್ ಅವರು ಆ ಬಳಿಕ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಾಳಯಕ್ಕೆ ಜಿಗಿದಿದ್ದರು ಮತ್ತು ಇದೀಗ ಪ್ರಶಾಂತ್ ಅವರು ಮಮತಾ ಬ್ಯಾನರ್ಜಿ ಅವರಿಗೆ ರಾಜಕೀಯ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next