Advertisement

ಶ್ರೀ ಪ್ರಸನ್ನ ವೆಂಕಟದಾಸರು ಚಿತ್ರ ವಿಮರ್ಶೆ: ದಾಸ ಶ್ರೇಷ್ಠರಿಗೆ ದೃಶ್ಯರೂಪ

12:40 PM Jul 09, 2023 | Team Udayavani |

ಹರಿದಾಸ ಪರಂಪರೆಯಲ್ಲಿ ಬರುವ ದಾಸ ಶ್ರೇಷ್ಠರಲ್ಲಿ ಒಬ್ಬರಾದ ಪ್ರಸನ್ನ ವೆಂಕಟದಾಸರ ಬಗ್ಗೆ ಅನೇಕರು ಕೇಳಿರಬಹುದು. 16 ಮತ್ತು 17ನೇ ಶತಮಾನದಲ್ಲಿ ಉತ್ತರ ಕರ್ನಾಟಕದ ಬಾಗಲಕೋಟೆ ಮತ್ತು ಬದಾಮಿಯನ್ನು ತನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದ, ಕನ್ನಡ ದಾಸ ಸಾಹಿತ್ಯಕ್ಕೆ ತಮ್ಮದೇ ಆದ ಗಣನೀಯವಾದ ಕೊಡುಗೆ ನೀಡಿದ ಪ್ರಸನ್ನ ವೆಂಕಟದಾಸರ ಬಾಲ್ಯ, ಜೀವನ ಮತ್ತು ಸಾಧನೆಗಳನ್ನು ತೆರೆಮೇಲೆ ಚಿತ್ರಿಸಿರುವ ಸಿನಿಮಾ “ಶ್ರೀ ಪ್ರಸನ್ನ ವೆಂಕಟದಾಸರು’ ಈ ವಾರ ತೆರೆಗೆ ಬಂದಿದೆ.

Advertisement

ಸಿನಿಮಾದ ಹೆಸರೇ ಹೇಳುವಂತೆ, “ಶ್ರೀ ಪ್ರಸನ್ನ ವೆಂಕಟದಾಸರು’ ಒಂದು ಅಪ್ಪಟ ಭಕ್ತಿ ಪ್ರಧಾನ ಸಿನಿಮಾ. ಬಾಲಕ ವೆಂಕಣ್ಣನ ಬಾಲ್ಯ ಜೀವನದಿಂದ ತೆರೆದು ಕೊಳ್ಳುವ ಸಿನಿಮಾದ ಕಥೆ, ಬಳಿಕ ವೆಂಕಣ್ಣ ಎದುರಿಸಿದ ಸಂಕಷ್ಟಗಳು, ಭಕ್ತಿ ಮಾರ್ಗದ ಮೂಲಕ ತಿರುಪತಿ ಶ್ರಿನಿವಾಸನ ಸಾಕ್ಷಾತ್ಕಾರ ಪಡೆದುಕೊಂಡು “ಪ್ರಸನ್ನ ವೆಂಕಟದಾಸ’ನಾದದ್ದು, ಆನಂತರ ತನ್ನ ದಾಸ ಸಾಹಿತ್ಯದ ಮೂಲಕ ಪ್ರಖ್ಯಾತರಾಗಿ ಕೊನೆಗೆ ಹರಿ ಶ್ರೀನಿವಾಸನೊಂದಿಗೆ ಲೀನವಾಗುವುದರೊಂದಿಗೆ ಅಂತ್ಯವಾಗುತ್ತದೆ.

ಇನ್ನು ವೆಂಕಟದಾಸರ ವಂಶಜರಾದ ಡಾ. ರೇಖಾ ಕಾಖಂಡಕಿ ಅವರ ಕಾದಂಬರಿಯನ್ನು ಆಧರಿಸಿ ತಯಾರಾದ ಈ ಸಿನಿಮಾಕ್ಕೆ ಡಾ. ರೇಖಾ ಕಾಖಂಡಕಿ ಚಿತ್ರಕಥೆ, ಸಂಭಾಷಣೆ ರಚಿಸಿದ್ದು, ಉತ್ತರ ಕರ್ನಾಟಕದ ಜನ-ಜೀವನ ಮತ್ತು ಭಾಷೆಯ ಸೊಗಡನ್ನು ಸಿನಿಮಾದಲ್ಲಿ ಕಾಣಬಹುದು. ವೆಂಕಟದಾಸರ ಜೀವನಗಾಥೆಯನ್ನು ಸರಳವಾಗಿ ಪ್ರೇಕ್ಷಕರ ಮನಮುಟ್ಟು ವಂತೆ ಹೇಳುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. “ಶ್ರೀ ಪ್ರಸನ್ನ ವೆಂಕಟದಾಸರು’ ಚಿತ್ರದ ಹಾಡುಗಳಿಗೆ ವಿಜಯಕೃಷ್ಣ ಸಂಗೀತ ಸಂಯೋಜಿಸಿದ್ದು, ವೆಂಕಟದಾಸರ ಹಲವು ಗೀತೆಗಳನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಹಾಡುಗಳು ಮತ್ತು ಹಿನ್ನೆಲೆ ಸಂಗೀತ “ಶ್ರೀ ಪ್ರಸನ್ನ ವೆಂಕಟದಾಸರು’ ಸಿನಿಮಾಕ್ಕೆ ಮೆರಗು ನೀಡಿದೆ.

ಸಿನಿಮಾದಲ್ಲಿ ಪ್ರಸನ್ನ ವೆಂಕಟ ದಾಸರ ಪಾತ್ರ ದಲ್ಲಿ ನಟ ಪ್ರಭಂಜನ ದೇಶಪಾಂಡೆ ತಮ್ಮ ಅಭಿನಯದಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ಬಹುತೇಕ ಕಲಾವಿದರು ಹೊಸಬ ರಾದರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾ ಯಿಸಿದ್ದಾರೆ. ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಕ್ತಿ ಪ್ರಧಾನ ಸಿನಿಮಾಗಳ ಸಂಖ್ಯೆ ಕಡಿಮೆ ಎಂಬ ಮಾತುಗಳ ನಡುವೆಯೇ ತೆರೆಗೆ ಬಂದಿರುವ “ಶ್ರೀ ಪ್ರಸನ್ನ ವೆಂಕಟದಾಸರು’ ಸಿನಿಮಾವನ್ನು ಭಕ್ತಿ ಪ್ರಧಾನ ಸಿನಿಮಾಗಳನ್ನು ಬಯಸುವ ಪ್ರೇಕ್ಷಕರು ಒಮ್ಮೆ ಕಣ್ತುಂಬಿಕೊಳ್ಳಬಹುದು.

 ಜಿ.ಎಸ್‌.ಕಾರ್ತಿಕ ಸುಧನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next