Advertisement
ಪರಿಸರ ಸ್ನೇಹಿ ಜಪಾನಿ ಕಲೆ ಪಾಚಿ ಉಂಡೆ ಕೇರಳ, ತಮಿಳುನಾಡಿನಲ್ಲಿ ಹೆಚ್ಚು ಪ್ರಚಲಿತದಲ್ಲಿ ಇದೆ. ಇದೀಗ ಕರ್ನಾಟಕಕ್ಕೆ ಮೊದಲ ಬಾರಿಗೆ ಈ ಕಲೆಯನ್ನು ಪರಿಚಯಿಸಿದ ಕೀರ್ತಿ ಚೇರ್ಕಾಡಿಯ ಪ್ರಸನ್ನ ಪ್ರಸಾದ್ ಅವರಿಗೆ ಸಲ್ಲುತ್ತದೆ. ಬಡವರ ಬೋನ್ಸಾಯಿ ಖ್ಯಾತಿಯ ಕೊಕೆಡಾಮ (ಪಾಚಿ ಉಂಡೆ) ಗಿಡ ಮನೆಯ ಅಂದ ಹೆಚ್ಚಿಸುವುದಲ್ಲದೆ ಯಥೇತ್ಛ ಆಮ್ಲಜನಕ ನೀಡಿ ಆರೋಗ್ಯವನ್ನು ವೃದ್ಧಿಸುತ್ತದೆ. ಮನೆಯ ಯಾವುದೇ ಭಾಗದಲ್ಲೂ ಇಟ್ಟು ಬೆಳೆಸಬಹುದಾಗಿದೆ. ಡೈನಿಂಗ್ ಟೇಬಲ್, ಬಾಲ್ಕನಿ, ಟಿವಿ ಯುನಿಟ್‌ಗಳಲ್ಲಿ ಇಡುವ ಮೂಲಕ ಮನೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಬಹುದಾಗಿದೆ. ಅಲ್ಲದೆ ಪರಿಸರ ಸ್ನೇಹಿಯಾಗಿರುವ ಕೊಕೆಡಾಮವನ್ನು ಸಭೆ ಸಮಾರಂಭಗಳಲ್ಲಿಯೂ ಸ್ಮರಣಿಕೆಯಾಗಿ ನೀಡಬಹುದಾಗಿದೆ.
ಸಸಿಯ ಬೇರಿಗೆ ತೆಂಗಿನ ನಾರಿನ ಕಾಂಪೋಸ್ಟ್ ಹುಡಿಯನ್ನು ಹಾಕಿ, ಅದರ ಮೇಲೆ ಜೇಡಿ ಮಣ್ಣಿನಿಂದ ಮುಚ್ಚಲಾಗುತ್ತದೆ. ಅನಂತರ ಹತ್ತಿ ಬಟ್ಟೆ ಸುತ್ತಿ, ಅದರ ಮೇಲೆ ಸ್ಫಗ್ನಮ್ ಮೋಸ್ ಪಾಚಿಯನ್ನು ಹಚ್ಚಲಾಗುತ್ತದೆ. ಅನಂತರ ಇಡೀ ಪಾಚಿಯ ಉಂಡೆಯನ್ನು ಸಣ್ಣ ಹಗ್ಗದಿಂದ ಬಿಗಿದು ಕಟ್ಟಲಾಗುತ್ತದೆ. ಇದಕ್ಕೆ ಮರದಲ್ಲಿ ಬರುವ ಪಾಚಿಗಳನ್ನು ಕೂಡ ಬಳಸಲಾಗುತ್ತದೆ. ಮುಂದೆ ಪಾಚಿಯಲ್ಲಿ ಅತಿ ಸಣ್ಣ ಗಾತ್ರದ ಗಿಡಗಳು ಬೆಳೆದು ಇಡೀ ಕೊಕೆಡಾಮದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದಕ್ಕೆ ಕಡಿಮೆ ನೀರು ಸಾಕಾಗುತ್ತದೆ. ಅಲ್ಲದೆ ನಿರ್ವಹಣೆ ಕೂಡ ತುಂಬಾ ಕಡಿಮೆ. ಹಾಗಾಗಿ ಫ್ಲ್ಯಾಟ್‌ಗಳಲ್ಲಿ ವಾಸ ಮಾಡುವವರು ಇದನ್ನು ಹೆಚ್ಚು ಬಳಸಿಕೊಳ್ಳಬಹುದು. ಆಲಂಕಾರಿಕ ಗಿಡ ಬಳಕೆ
ಪ್ರಸನ್ನ ಪ್ರಸಾದ್ ಅವರು ಸದ್ಯ ಕೊಕೆಡಾಮ ಕಲೆಯಲ್ಲಿ ಅಲಂಕಾರಿಕ ಗಿಡಗಳನ್ನು ಮಾತ್ರ ಬಳಸಿಕೊಳ್ಳಲಾಗಿದೆ. ಕರಾವಳಿಯ ವಾತಾವರಣಕ್ಕೆ ಬೇರೆ ಗಿಡಗಳನ್ನು ಇದರಲ್ಲಿ ಬೆಳೆಸುವುದು ಕಷ್ಟವಾದ ಹಿನ್ನೆಲೆಯಲ್ಲಿ ಪ್ರಸ್ತುತ ಕೊಕೆಡಾಮ ಕಲೆಯಲ್ಲಿ ಪೈಕಾಸ್, ಕ್ಯಾಕ್ಟಸ್, ರಿಬ್ಬನ್ ಗ್ರಾಸ್ ಸೇರಿದಂತೆ 10 ಬಗೆಯ ಇಂಡೋರ್ ಪ್ಲಾಂಟ್ಸ್‌ಗಳನ್ನು ಮಾತ್ರ ಬಳಸಿಕೊಂಡಿದ್ದಾರೆ. ಇತರ ಗಿಡಗಳನ್ನು ಈ ಕಲೆಯಲ್ಲಿ ಬೆಳೆಸುವ ಇರಾದೆ ಕೂಡ ಇದೆ. ಆ ಬಗ್ಗೆ ಮುಂದೆ ಪ್ರಯೋಗ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಕರಾವಳಿ ವಾತಾವರಣಕ್ಕೆ ಬೇರೆ ಗಿಡಗಳನ್ನು ಪಾಚಿ ಉಂಡೆಯಲ್ಲಿ ಬೆಳೆಸುವುದು ಕಷ್ಟ. ಕಡಿಮೆ ಬೇರು ಮತ್ತು ಗಟ್ಟಿಯಾದ ಗಿಡಗಳನ್ನು ಮಾತ್ರ ಬಳಸಿಕೊಳ್ಳುತ್ತಿದ್ದಾರೆ.
Related Articles
ಕೊಕೆಡಾಮವನ್ನು ಎರಡು ದಿನಗಳಿಗೊಮ್ಮೆ ಅರ್ಧ ಬಕೆಟ್ ನೀರಿನಲ್ಲಿ ಅದ್ದಿ ತೆಗೆದರೆ ಸಾಕಾಗುತ್ತದೆ. ಅದು ಬಿಟ್ಟರೆ ಇದಕ್ಕೆ ಬೇರೆ ನೀರಿನ ಅವಶ್ಯಕತೆ ಇರುವುದಿಲ್ಲ. ಪಾಚಿಯಲ್ಲಿರುವ ನೀರಿನ ತೇವಾಂಶದಿಂದಲೇ ಈ ಗಿಡ ಬೆಳೆಯುತ್ತದೆ. ಗಿಡದ ಬೇರು ಕೂಡ ಉದ್ದ ಬೆಳೆಯುವುದಿಲ್ಲ. ಬೇರು ಜೇಡಿಮಣ್ಣಿನೊಳಗೆಯೇ ಇರುತ್ತದೆ. ಹೀಗಾಗಿ ಈ ಗಿಡದ ಬೆಳವಣಿಗೆ ತುಂಬಾ ನಿಧಾನವಾಗಿರುತ್ತದೆ. ಇನ್ನೂ ಗಿಡವನ್ನು ತಿಂಗಳಿಗೊಮ್ಮೆ ನೀರಿನಲ್ಲಿ ಕರಗುವ ಗೊಬ್ಬರ ಅಥವಾ ಗಂಜಳವನ್ನು 1:10ರ (ಗಂಜಳ: ನೀರು) ಪ್ರಮಾಣದಲ್ಲಿ ತೆಳು ಮಾಡಿ ಅದ್ದಿ ತೆಗೆಯ ಬೇಕು.
Advertisement
ಎರಡು ತಿಂಗಳ ಯೋಜನೆವಾಟ್ಸಾಪ್ನಲ್ಲಿ ಬಂದ ಸಂದೇಶದಲ್ಲಿ ಕೊಕೆಡಾಮವನ್ನು ನೋಡಿ ಆಸಕ್ತಿ ಬೆಳೆಯಿತು. ಈ ಕುರಿತು ಇಂಟರ್‌ನೆಟ್‌ನಲ್ಲಿ ತಡಕಾಡಿದಾಗ ಕೇರಳ, ತಮಿಳುನಾಡಿನಲ್ಲಿ ಈ ಕಲೆ
ಜನಪ್ರಿಯ ಆಗಿರುವುದು ತಿಳಿದುಬಂತು. ಕರ್ನಾಟಕದಲ್ಲಿ ನಾನು ಮಾಡಿರುವುದು ಇದೇ ಮೊದಲ ಪ್ರಯತ್ನವಾಗಿದೆ. ಕಳೆದ ಎರಡು ತಿಂಗಳ ಹಿಂದೆ ಈ ಯೋಜನೆ ಹಾಕಿಕೊಂಡಿದ್ದೆ. ಒಂದು ತಿಂಗಳ ಹಿಂದೆ ತಯಾರಿಸಿದ ಗಿಡ ಯಶಸ್ವಿಯಾಗಿ ಬೆಳೆದಿರುವ ಹಿನ್ನೆಲೆಯಲ್ಲಿ ಇದರಲ್ಲೇ ಮುಂದೆ ಸಾಗುತ್ತಿದ್ದೇನೆ.
– ಪ್ರಸನ್ನ ಪ್ರಸಾದ್, ಕೊಕೆಡಾಮದ ರೂವಾರಿ