ಹುಬ್ಬಳ್ಳಿ: ಶಾಸಕ ಪ್ರಸಾದ ಅಬ್ಬಯ್ಯ ಅವರು ಕ್ಷೇತ್ರದ ಶಾಸಕರಲ್ಲ, ಬದಲಾಗಿ ನಮ್ಮೆಲ್ಲರ ಮನೆಮಗನಾಗಿದ್ದಾನೆ ಎಂದು ಮೂರುಸಾವಿರ ಮಠದ ಜಗದ್ಗುರು ಡಾ|ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಮೂರುಸಾವಿರ ಮಠದ ಸಭಾಭವನದಲ್ಲಿ ರವಿವಾರ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್, ಶ್ರೀ ಜಗದ್ಗುರು ಮೂರುಸಾವಿರ ಮಠ ಮಹಾಸಂಸ್ಥಾನ ಹಾಗೂ ಪ್ರಸಾದ ಅಬ್ಬಯ್ಯ ಫೌಂಡೇಶನ್ ವತಿಯಿಂದ ನಡೆದ ಉಚಿತ ಹೃದ್ರೋಗ ತಪಾಸಣಾ ಶಿಬಿರದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ ಅಷ್ಟೇ ಅಲ್ಲದೇ ಈ ನಾಡಿನ ಶಾಸಕನಾಗಿ ಪ್ರಸಾದ ಅಬ್ಬಯ್ಯ ಅವರು ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.
ಕ್ಷೇತ್ರಾದ್ಯಂತ ಅಭಿವೃದ್ಧಿಯ ಹರಿಕಾರ ಎಂದು ಹೆಸರು ಪಡೆದಿರುವ ಅವರು, ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ, ಇದೀಗ ಆರೋಗ್ಯ ಕ್ಷೇತ್ರದತ್ತ ತಮ್ಮ ದೃಷ್ಟಿ ನೆಟ್ಟಿದ್ದಾರೆ. ಆರಂಭಿಕವಾಗಿ ಹೃದ್ರೋಗ ತಪಾಸಣೆ ಮಾಡುತ್ತಿರುವುದು ಅವರಿಗೆ ಕ್ಷೇತ್ರದ ಜನರ ಮೇಲೆ ಇಟ್ಟಿರುವ ಹೃದಯವಂತಿಕೆ ತೋರಿಸುತ್ತದೆ. ಶಾಸಕ ಪ್ರಸಾದ ಅವರು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಕಾಳಜಿ ತೋರುತ್ತಾರೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ಮತ್ತೂಮ್ಮೆ ಶಾಸಕರಾಗಲಿ ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಕಡುಬಡವರು, ಮಧ್ಯಮ ವರ್ಗದ ಜನರು ಇರುವಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗುತ್ತಿದೆ. ಕ್ಷೇತ್ರದ ಜನರ ಆರೋಗ್ಯ ದೃಷ್ಟಿಯಿಂದ 15 ಕೋಟಿ ವೆಚ್ಚದಲ್ಲಿ ಆರೋಗ್ಯ ಸೇವೆ ನೀಡಲು ಮುಂದಾಗಿದ್ದು, 3 ಕೋಟಿ ರೂ.ದಲ್ಲಿ ಮೇದಾರ ಓಣಿಯಲ್ಲಿ ಹೆರಿಗೆ ಆಸ್ಪತ್ರೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಎಸ್‌ಡಿಎಂ ಆಸ್ಪತ್ರೆಯ ಡಾ| ಲಲಿತಾ ಮಾತನಾಡಿ, ಇಂದು ಹುಟ್ಟುವ ಮಕ್ಕಳಿಂದ ಹಿಡಿದು ಎಲ್ಲರಲ್ಲೂ ಹೃದಯ ಸಂಬಂಧಿ ಕಾಯಿಲೆ ಕಂಡುಬರುತ್ತಿದ್ದು, ಕಾಲಕಾಲಕ್ಕೆ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಜೊತೆಗೆ ಕೊಬ್ಬಿನಾಂಶ, ತಂಬಾಕು, ಸಿಗರೇಟ್ ಸೇವನೆ ಮಾಡಬಾರದು. ಬೆನ್ನುನೋವು, ಎಡಗೈ ಹರಿಯುವುದು, ಬೆವರುವುದು ಹೃದಯ ಸಂಬಂಧಿ ಕಾಯಿಲೆ ಲಕ್ಷಣಗಳು ಎಂದರು.
ಪಾಲಿಕೆ ಮಾಜಿ ಸದಸ್ಯ ಮೋಹನ ಅಸುಂಡಿ ಮಾತನಾಡಿದರು. ಪಾಲಿಕೆ ಸದಸ್ಯರಾದ ನಿರಂಜನ ಹಿರೇಮಠ, ಸುನೀತಾ ಬುರಬುರೆ, ಪ್ರಮುಖರಾದ ಸ್ವಾಗತ ಪ್ರಕಾಶ ಬುರಬುರೆ, ಸಂಜು ಸಾಟೆ, ಸುರೇಶ ಸೋಳಂಕೆ, ಮುತವಲ್ಲಿ ಐ.ಕೆ. ಗಬ್ಬೂರ, ಐ.ಜಿ. ಸುರೇಶ, ರಾಜೇಶ್ವರಿ, ಪ್ರಭಾಕರ ಇನ್ನಿತರರಿದ್ದರು.