ಪ್ರಾಸ ಪ್ರವೀಣ ಚುಟುಕು ಸಾಹಿತಿ ಕಾರ್ಕಳ ಶೇಖರ ಭಂಡಾರಿ ಸದ್ಯ ತುಳು ಸಿನೆಮಾ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ನಾನಾ ಸಿನೆಮಾಗಳ ಮೂಲಕ ಮಿಂಚಿದ್ದ ಭಂಡಾರಿ ಅವರು ತಮ್ಮ ಪ್ರಾಸ ಸಾಹಿತ್ಯದ ಮೂಲಕವೇ ಮನೆಮಾತಾಗಿದ್ದಾರೆ. ಇಂದ್ರ ಧನುಷ್, ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ, ಏಕಾಂಗಿ, ಓ ನನ್ನ ನಲ್ಲೆ, ನನ್ನ ತಂಗಿ ಬೀಸಿದ ಬಲೆ, ಕೋಟಿ ಚೆನ್ನಯ್ಯ, ತಮಾಷೆಗಾಗಿ ಸಹಿತ ಹಲವು ಕನ್ನಡ ಸಿನೆಮಾದಲ್ಲಿ ಬಣ್ಣ ಹಚ್ಚಿದ ಶೇಖರ ಭಂಡಾರಿ ಅವರು ತುಳು ಸಿನೆಮಾ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದಾರೆ.
ಇತ್ತೀಚೆಗೆ ತೆರೆಕಂಡ ‘ಮೈ ನೇಮ್ ಈಸ್ ಅಣ್ಣಪ್ಪ’ ಸಿನೆಮಾದಲ್ಲೂ ಶೇಖರ್ ಭಂಡಾರಿ ಅವರದ್ದು ಅದ್ಭುತ ನಟನೆ. ಜತೆಗೆ ದೇವೆರ್, ಪಿಲಿಬೈಲ್ ಯಮುನಕ್ಕ, ಜುಗಾರಿ, ಅಂಬರ ಕ್ಯಾಟರರ್, ಗಂಟ್ ಕಲ್ವೆರ್ ಸಿನೆಮಾದಲ್ಲಿಯೂ ಶೇಖರ ಭಂಡಾರಿ ಅವರು ತನ್ನ ನಟನಾ ಕೌಶಲದಿಂದ ರಂಜಿಸಿದ್ದಾರೆ. ಅದರಲ್ಲೂ ಬಿಡುಗಡೆಯ ಹೊಸ್ತಿಲಲ್ಲಿರುವ ‘ಕೋರಿ ರೊಟ್ಟಿ’ ಸಿನೆಮಾದಲ್ಲಿಯೂ ಭಂಡಾರಿ ಅವರು ವಿಭಿನ್ನ ಪಾತ್ರದ ಮೂಲಕ ಗಮನಸೆಳೆಯಲಿದ್ದಾರೆ.
ವಿಶೇಷವೆಂದರೆ ಸಾಹಸ ಕಲೆಯ ಮೂಲಕವೂ ಅವರು ಸುದ್ದಿಯಲ್ಲಿದ್ದಾರೆ. ತನ್ನ ಹಲ್ಲಿಂದ 40 ಕೆ.ಜಿ.ಯ ಅಕ್ಕಿಮುಡಿಯನ್ನು ಕಚ್ಚಿಕೊಂಡು ಕೈಗಳಲ್ಲಿ 40+40 ಕೆ.ಜಿ.ಯ ಅಕ್ಕಿಮುಡಿಯನ್ನು ಒಟ್ಟಿಗೆ 120 ಕೆ.ಜಿ. ಅಕ್ಕಿಯನ್ನು ಒಮ್ಮೆಲೆ ಎತ್ತಿದ ಸಾಹಸಿಯೂ ಹೌದು. ಇವರು ಬರೆದ ಹಲವು ಪ್ರಾಸಭರಿತ ನುಡಿಗಳು ಪುಸ್ತಕದ ರೂಪದಲ್ಲಿ ಬಿಡುಗಡೆಯಾಗಿವೆ.
ನಾಡಿನ ಹಲವು ಸಂಘಸಂಸ್ಥೆಗಳಿಂದ ಪ್ರಶಸ್ತಿ ಪಡೆದಿರುವ ಅವರು ತುಳು ಸಿನೆಮಾರಂಗದಲ್ಲಿ ಇನ್ನೂ ಕೂಡ ಸಾಧನೆಯ ಉತ್ತುಂಗಕ್ಕೆ ಏರಬೇಕು ಎಂಬುದು ಅವರ ಅಭಿಮತ. ಹೀಗಾಗಿ ಸಿನೆಮಾ ಅವಕಾಶ ಎಷ್ಟೇ ಇದ್ದರೂ ‘ನಾನು ರೆಡಿ’ ಎಂದು ಆಸಕ್ತಿಯಿಂದ ಮುನ್ನುಗ್ಗುವ ಶೇಖರ ಭಂಡಾರಿ ಅವರು ನಾಟಕ ಕಲಾವಿದರಾಗಿ, ನಟರಾಗಿ, ರಂಗಭೂಮಿಯ ನಿರ್ದೇಶಕರಾಗಿ ಮನೆ ಮಾತಾಗಿದ್ದಾರೆ.