Advertisement

ಪ್ರಯಾಣಿಕರ ಪ್ರಾಣದೊಡನೆ ಚೆಲ್ಲಾಟವಾಡುತ್ತಿದೆ ಹೆದ್ದಾರಿ ಕಾಮಗಾರಿ

01:01 PM Apr 06, 2017 | Team Udayavani |

ಬೈಂದೂರು: ಹಿಮಾಲಯ ಪರ್ವತ ಪಾರ್ಶ್ವದ ಲಡಾಕ್‌ ಎಂಬಲ್ಲಿ ಕರ್‌ದುಂಗ್ಲಾ ಪಾಸ್‌ ಎನ್ನುವ ರಸ್ತೆಯಿದೆ. ಸಮುದ್ರ ಮಟ್ಟದಿಂದ 18,358 ಅಡಿ ಎತ್ತರವಿರುವ ಈ ರಸ್ತೆ ಪ್ರಪಂಚದ ಅತ್ಯಂತ ಎತ್ತರದ, ಅಪಾಯಕಾರಿ ರಸ್ತೆ ಎಂದು ಗುರುತಿಸಿಕೊಂಡಿದೆ. ಇಲ್ಲಿನ ಕಣಿವೆಗಳು ನೋಡುಗರ ಎದೆ ಝಲ್‌ ಎನಿಸುತ್ತದೆ. 

Advertisement

ಸಂಚಾರ ಅಪಾಯಕಾರಿ
ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಬೈಂದೂರು ಸಮೀಪದ ಒತ್ತಿನೆಣೆ ಪರಿಸರದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಹಿಮಾಲಯದ ಕಣಿವೆ ರಸ್ತೆಗಳನ್ನು ನೆನಪು ಮಾಡುತ್ತಿದೆ. ಲಡಾಕ್‌ ರಸ್ತೆ ಸಂಚಾರಕ್ಕಿಂತ ಭಯಾನಕವಾಗಿದೆ. ಮಾತ್ರವಲ್ಲದೆ ನಿತ್ಯ ಪ್ರಯಾಣಿಕರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ.

ಕಾದಿದೆ ಅಪಾಯ, ನಿರ್ಲಕ್ಷ್ಯ
ಬೈಂದೂರು ಒತ್ತಿನೆಣೆ ಪರಿಸರ ಮೇಲ್ಪದರದಲ್ಲಿ ಬಾಕ್ಸೈಟ್‌ ಕಲ್ಲು ಗಳಿವೆ. ಆದರೆ ಆಳಕ್ಕೆ ಇಳಿದಂತೆ ಜೇಡಿ ಮಣ್ಣಿನಿಂದಾವೃತವಾಗಿದೆ. ಹೀಗಾಗಿ ಇಲ್ಲಿ ಮೇಲ್ನೋಟಕ್ಕೆ ಯಾವ ತಜ್ಞರಿಂದಲೂ ಮಣ್ಣಿನ ಲಕ್ಷಣಗಳನ್ನು ಹೇಳಲಾಗುತ್ತಿಲ್ಲ. ಹೀಗಾಗಿ ಕೊಂಕಣ ರೈಲ್ವೇ ಮಾರ್ಗ ನಿರ್ಮಾಣವಾಗುವ ಸಂದರ್ಭದಲ್ಲಿ ಸುರಂಗ ನಿರ್ಮಿಸಲು ಹರ ಸಾಹಸ ಪಡಬೇಕಾಯಿತು ಮತ್ತು ಹಲವು ಜನರು ಪ್ರಾಣ ಕಳೆದುಕೊಂಡಿದ್ದರು. 

ಮಣ್ಣು ಕುಸಿಯುತ್ತಿದೆ
ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸುವ ಕಂಪೆನಿಗೆ ಒತ್ತಿನೆಣೆ ರಸ್ತೆ ನಿರ್ಮಾಣದ ಲೆಕ್ಕಾಚಾರ ತಪ್ಪಿದೆ. ಹೀಗಾಗಿ ಈ ಭಾಗದಲ್ಲಿ ಸ್ಪಷ್ಟತೆ ಇಲ್ಲದೇ ಗುಡ್ಡವನ್ನು ಸೀಳಲಾಗಿದೆ. ಬೃಹತ್‌ ಕಣಿವೆ ಮಧ್ಯೆ ರಸ್ತೆ ನಿರ್ಮಾಣ ಮಾಡಿದ್ದು, ದಿನದಿಂದ ದಿನಕ್ಕೆ ಮಣ್ಣು ಕುಸಿಯುತ್ತಿದೆ. ಮಳೆಗಾಲ ಆರಂಭವಾದರೆ ಸಂಪೂರ್ಣ ಗುಡ್ಡ ಕುಸಿಯುವ ಜತೆಗೆ ಒತ್ತಿನೆಣೆ ಹೆದ್ದಾರಿ ಸಂಪರ್ಕವೇ ಕಡಿದು ಹೋಗುವ ಸಾಧ್ಯತೆಗಳಿದೆ. 

ಚರ್ಮ ಸುಲಿದ ದೇಹದಂತೆ
ಈಗಿರುವ ರಸ್ತೆಯ ಪಕ್ಕದಲ್ಲಿ  ಕಾಮಗಾರಿ ನಡೆಸುವ ಕಂಪೆನಿ ಗುಡ್ಡವನ್ನು ಕೊರೆದು ರಸ್ತೆ ನಿರ್ಮಿಸಲು ಮುಂದಾಗಿದೆ. ಇದರ ಪರಿಣಾಮ ವಿಶಾಲ ಗುಡ್ಡದ ಪರಿಸರ ಸೌಂದರ್ಯ ಕಳೆದುಕೊಂಡು ಚರ್ಮ ಸುಲಿದ ದೇಹದಂತಾಗಿದೆ. ಗುಡ್ಡದ ಮೇಲ್ಭಾಗದಲ್ಲಿ ಬೃಹತ್‌ ಕಲ್ಲುಗಳು ಕುಸಿಯುವ ಭೀತಿ ಒಂದೆಡೆಯಾದರೆ ಮಳೆ ನೀರು ಸುರಿದರೆ ಮಣ್ಣು ಕುಸಿಯುತ್ತದೆ.

Advertisement

ಜನರಲ್ಲಿ  ಭೀತಿ
ಮಳೆಗಾಲಕ್ಕೆ ಒಂದೆರಡು ತಿಂಗಳುಗಳು ಮಾತ್ರ ಇದೆ. ಆದರೆ ಯಾವುದೇ ಮುಂಜಾಗ್ರತೆ ವಹಿಸದಿರುವುದು ಜನರಲ್ಲಿ ಭೀತಿ ಉಂಟು ಮಾಡಿದೆ. ಈಗಿರುವ ರಸ್ತೆಯ ಪಕ್ಕದಲ್ಲಿ ಮೂವತ್ತು ಅಡಿಗೂ ಅಧಿಕ ಕಣಿವೆ ತೆಗೆದಿದ್ದಾರೆ. ಇಷ್ಟೊಂದು ಅಪಾಯಕಾರಿ ರಸ್ತೆಯಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿಲ್ಲ. ಒಂದೊಮ್ಮೆ ವಾಹನಗಳು ಕಣಿವೆಗೆ ಉರುಳಿದರೆ ಭಾರೀ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಅದರಲ್ಲೂ ರಸ್ತೆಗಳು ಉಬ್ಬು ತಗ್ಗುಗಳಿಂದಾವೃತವಾಗಿರುವುದರಿಂದ ವಾಹನ ನಿಯಂತ್ರಣ ತಪ್ಪುವ ಸಾಧ್ಯತೆಗಳಿವೆ.

ಜಲಾವೃತವಾಗುವ ಭೀತಿ 
ಉಪ್ಪುಂದ ಪರಿಸರದಲ್ಲಿ ರಸ್ತೆಯ ಮಧ್ಯ ಭಾಗದಲ್ಲಿ ಮಣ್ಣಿನ ರಾಶಿ ಹಾಕಲಾಗಿದೆ.ಅಕ್ಕಪಕ್ಕದಲ್ಲಿ ಕಿರಿದಾದ ಮಾರ್ಗಗಳಿವೆ. ಮಳೆಗಾಲದಲ್ಲಿ ಉಪ್ಪುಂದ ಪೇಟೆ ಜಲಾವೃತ ಗೊಳ್ಳುವುದು ಖಚಿತ ಎನ್ನುವುದು ಇಲ್ಲಿನ ಸ್ಥಳೀಯರ ಅಭಿಪ್ರಾಯವಾಗಿದೆ. ಕಾಮಗಾರಿ ನಡೆಸುವ ಕಂಪೆನಿ ಸಾರ್ವಜನಿಕ ರಿಗಾಗುತ್ತಿರುವ ಸಮಸ್ಯೆಗಳ ಕುರಿತು ಗಮನಹರಿಸುತ್ತಿಲ್ಲ. 
ಜಿಲ್ಲಾಧಿಕಾರಿ ಪರಿಶೀಲಿಸಲಿ ಕಾಮಗಾರಿಯಲ್ಲೂ ಸ್ಪಷ್ಟತೆಯಿಲ್ಲ ಹೀಗಾಗಿ ಜಿಲ್ಲಾಧಿಕಾರಿಗಳು ಬೈಂದೂರಿನಲ್ಲಿ ನಡೆಯುವ ಕಾಮಗಾರಿ ಪರಿಶೀಲಿಸಬೇಕಾಗಿದೆ. 

ಒಟ್ಟಾರೆಯಾಗಿ ಜನರಿಗೆ ಅನುಕೂಲ ವಾಗಬೇಕಾದ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಚಿಂತನೆಗಳಿಂದಾಗಿ ಜನರಿಗೆ ಸಮಸ್ಯೆಯಾಗಿ ಪರಿಣಮಿಸುವುದು ಸಾರ್ವಜನಿಕರ ಅತೃಪ್ತಿಗೆ ಕಾರಣವಾಗಿದೆ.

ಕಳೆದ ವರ್ಷದ ಕಹಿ ನೆನಪು 
ಒತ್ತಿನೆಣೆ ಪರಿಸರದಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ನೀರಿನ ಹರಿವು ನಿಯಂತ್ರಣ ಮಾಡಲಾಗದೆ ಅಪಾರ ಪ್ರಮಾಣದ ಜೇಡಿಮಣ್ಣು ಒತ್ತಿನೆಣೆ ಗುಡ್ಡದ ಕೆಳ ಭಾಗದಲ್ಲಿ ಶೇಖರಣೆಗೊಂಡಿತ್ತು. ಚರಂಡಿ, ನದಿಗಳು ಶೇಡಿಮಣ್ಣು ತುಂಬಿದ ಪರಿಣಾಮ ಪಡುವರಿ, ಬೈಂದೂರು ಮುಂತಾದ ಕಡೆ ಜನರು ಕಾಮಗಾರಿ ನಡೆಸುವ ಕಂಪೆನಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. 

ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next