Advertisement

ಪ್ರಣಬ್ ಮುಖರ್ಜಿ ದೊಡ್ಡ ವಿಚಾರವಾದಿ: ಅವರೊಂದಿಗಿನ ಒಡನಾಟ ನೆನಪಿಸಿಕೊಂಡ ಖರ್ಗೆ

01:34 PM Sep 01, 2020 | Mithun PG |

ಬೆಂಗಳೂರು:  ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನರಾದ ಹಿನ್ನಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಅವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.

Advertisement

ಬಳಿಕ ಮಾತನಾಡಿದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಣಬ್ ಮುಖರ್ಜಿ ದೊಡ್ಡ ವಿಚಾರವಾದಿ. 1977ರಲ್ಲಿಯೇ ನನಗೆ ಅವರ ಪರಿಚಯವಿತ್ತು. 1978ರಲ್ಲಿ ಇಂದಿರಾಗಾಂಧಿ ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿದ್ದರು. ಆಗ ಪ್ರಣಬ್ ಜೊತೆ ನಾವು ಕೆಲಸ ಮಾಡಿದ್ದೆವು ಎಂದು ನೆನಪಿಸಿಕೊಂಡಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಬೆಳ್ತಂಗಡಿಯ ಗೆಸ್ಟ್ ಹೌಸ್ ನಲ್ಲಿ ತಂಗಿದ್ದೆವು. ಎಲ್ಲ ಹಳ್ಳಿಗಳಿಗೆ ಜೊತೆಯಾಗಿ ಭೇಟಿ ನೀಡುತ್ತಿದ್ದೆವು.  ಪ್ರಣಬ್ ಅವರಿಗೆ ಓದುವ ಚಟ ಹೆಚ್ಚಿತ್ತು. ಅಂದಿನಿಂದ ಅವರ ಜೊತೆ ಹತ್ತಿರದ ಸಂಬಂಧವಿತ್ತು. ಕಲಬುರಗಿಗೂ ಎರಡು ಭಾರಿ ಅವರನ್ನ ಕರೆಸಿದ್ದೆ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.

ಕಲಬುರಗಿಯಲ್ಲಿ ಬೌದ್ಧವಿಹಾರ ಕಟ್ಟಿದ್ದ ಸಂದರ್ಭದಲ್ಲಿ, ಪಾಲಿ ಇನ್ಸಿಟಿಟ್ಯೂಟ್ ಮಾಡುವಂತೆ ಮುಖರ್ಜಿಯವರೇ ಸಲಹೆ ಕೊಟ್ಟಿದ್ದರು. ಆದರೆ ಪಾಲಿ ಲಾಂಗ್ವೇಜ್ ಗೆ ವಿದ್ಯಾರ್ಥಿಗಳು ಬರಲ್ಲ. ಆ ಭಾಷೆಯ ಶಿಕ್ಷಕರೂ ಸಿಗುವುದಿಲ್ಲವೆಂದು ಆ ದಿನ ಹೇಳಿದ್ದೆ. ಆಗ ಪ್ರಣಬ್ ಖುದ್ದಾಗಿ ನಾನೇ ಪಶ್ಚಿಮಬಂಗಾಳದಿಂದ ಶಿಕ್ಷಕರನ್ನು ಕಳಿಸಿಕೊಡುತ್ತೇನೆ ಎಂದಿದ್ದರು. ಸಿದ್ದರಾಮಯ್ಯ ಅವಧಿಯಲ್ಲಿ ಅದಕ್ಕೆ ಒಪ್ಪಿಗೆಯೂ ಸಿಕ್ಕಿತ್ತು. ಆದರೆ ಅದನ್ನ ಜಾರಿಗೆ ತರಲು ಸಾಧ್ಯವಾಗಲಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಪ್ರಣಬ್ 1969ರಲ್ಲಿ ಕಾಂಗ್ರೆಸ್ ಸೇರಿದ್ದರು. 1970ರಲ್ಲೂ ಅವರು ಪತ್ರಕರ್ತರಾಗಿ ಮುಂದುವರಿದಿದ್ದರು. ಹಲವು ಹುದ್ದೆಗಳನ್ನ ನಿಭಾಯಿಸಿದ್ದರು. ಕೊನೆಗೆ ರಾಷ್ಟ್ರಪತಿಗಳೂ ಆದರು. ಇಂತಹ ಮೇಧಾವಿ ಕೊನೆಗೆ ಆರ್ ಎಸ್ ಎಸ್ ಗೆ ಯಾಕೆ ಹೋದರು ಎನ್ನುವುದು ನಿಗೂಢವೇ?. ಇಂದಿರಾ ತತ್ವದ ಮೇಲೆಯೇ ನಂಬಿಕೆಯಿಟ್ಟವರು ಪ್ರಣಬ್. ಅಂತವರು ಆರ್ ಎಸ್ ಎಸ್ ಗೆ ಹೋಗಿದ್ದು ಕುತೂಹಲ. ಇದರ ಬಗ್ಗೆ ಅವರ ಜೊತೆ ನಾನು ಮಾತನಾಡಬೇಕಿತ್ತು. ಆದರೆ ಕೊನೆಗೆ ಒನ್ ಟು ಒನ್ ಮಾತನಾಡಲು ಅವಕಾಶ ಸಿಗಲಿಲ್ಲ ಎಂದರು ಖರ್ಗೆ ತಿಳಿಸಿದ್ದಾರೆ.

Advertisement

ಅವರ ಮಗ ಅಭಿಜಿತ್ ಮುಖರ್ಜಿ ನಮ್ಮ ಜೊತೆಯಲ್ಲೇ ಇರುತ್ತಿದ್ದರು. ಮಾತನಾಡುವಾಗ ಸಿದ್ಧತೆ ಮಾಡಿಕೊಂಡೇ ಬರುತ್ತಿದ್ದರು.ಮಗನಿಗೆ ಬೆಂಬಲಿಸುವಂತೆ ಪದೇ ಪದೇ ಪ್ರಣಬ್ ಹೇಳುತ್ತಿದ್ರು. ಅಭಿಜಿತ್ ಉತ್ತಮ ಸಂಭಾವಿತ ವ್ಯಕ್ತಿ. ಪ್ರಣಬ್ ಕಾಂಗ್ರೆಸ್ ಪಕ್ಷವನ್ನು ಎತ್ತರಕ್ಕೇರಿಸಿದವರು. ಅವರ ನಿಧನ ತುಂಬಲಾರದ ನಷ್ಟವಾಗಿದೆ.  ನನಗೂ ಅವರ ನಿಧನ ಸಾಕಷ್ಟು ನೋವು ತಂದಿದೆ ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.

ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಮಾತನಾಡಿ, 91/92 ರಲ್ಲಿ ನಾನು ಸಂಸತ್ತಿಗೆ ಆಯ್ಕೆಯಾಗಿದ್ದೆ. ಪ್ರಣಬ್ ಅವರನ್ನ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಆಗಷ್ಟೇ ನಾನು ಅವರ ಸಂಪರ್ಕಕ್ಕೆ ಬಂದಿದ್ದೆ. ಎನ್ ಡಿಎ ಸರ್ಕಾರ ಕೆಜಿಎಫ್ ಕ್ಲೋಸ್ ಮಾಡಿತ್ತು. ಯುಪಿಎ ಅಧಿಕಾರಕ್ಕೆ ಬಂದಾಗ ಮತ್ತೆ ರೀ- ಓಪನ್ ಬಗ್ಗೆ ಚರ್ಚೆ ನಡೆದಿತ್ತು. ನಾನು ಕೇಂದ್ರದಲ್ಲಿ ರಾಜ್ಯ‌ಸಚಿವನಾಗಿದ್ದೆ. ಸರ್ಕಾರ ಹಣಹಾಕುವುದು ಬೇಡ. ರೀ-ಓಪನ್ ಮಾಡಿ ಎಂದಿದ್ದೆ. ಆದರೆ ಚಿದಂಬರಂ ಸುತಾರಾಂ ಒಪ್ಪಲಿಲ್ಲ. ನಂತರ ಪ್ರಣಬ್ ಮುಖರ್ಜಿ ಅದಕ್ಕೆ ಬೆಂಬಲಿಸಿದ್ದರು. ಕೆಜಿಎಫ್ ರೀ-ಓಪನ್ ಗೆ ಅವಕಾಶವೂ ಸಿಕ್ಕಿತ್ತು. ಮತ್ತೊಮ್ಮೆ ಪವರ್ ಲೂಮ್ ಬಗ್ಗೆಯೂ ಪ್ರಣಬ್ ಬೆಂಬಲಿಸಿದ್ದರು ಎಂದು  ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಹೇಳಿಕೆ  ನೀಡಿದ್ದಾರೆ.

ಆರ್ ಎಸ್ ಎಸ್ ಗೆ ಹೋಗುವ ಮೊದಲು ಅವರನ್ನ ಭೇಟಿ ಮಾಡಿದ್ದೆ. ಇಲ್ಲಿಯವರೆಗೆ ನೀವು ಪಕ್ಷವನ್ನ ಕಟ್ಟಿದ್ದೀರಾ. ಈಗ ಕೋಮುವಾದಿ ಪಕ್ಷಕ್ಕೆ‌ಹೋಗುತ್ತಿದ್ದೀರಿ. ನಿಮ್ಮ‌ ಹೆಸರಿಗೆ ಕಳಂಕ ಬರುವುದಿಲ್ಲವೇ ಎಂದು ಕೇಳಿದ್ದೆ. ಅವರ ಜೊತೆ ಅರ್ಧ ತಾಸು ಮಾತುಕತೆ ನಡೆಸಿದ್ದೆ. ಸಂದರ್ಭ ಬಂದಾಗ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದರು. ಇವತ್ತು ಅವರು ನಮ್ಮನ್ನು ಅಗಲಿದ್ದಾರೆ.  ಇಡೀ ದೇಶ ಅವರ ನಿಧನ ನೋವಿನಲ್ಲಿದೆ ಎಂದು ಮುನಿಯಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next