Advertisement

“ಅತ್ತೆ ಹಾಕಿಕೊಟ್ಟ ಹಾದಿಯಲ್ಲೇ ನಡೆಯುತ್ತಿದ್ದೇನೆ’

11:42 AM Oct 14, 2021 | Team Udayavani |

ಇಂದು ನಾಡಿನಾದ್ಯಂತ ಸಂಭ್ರಮದ ದಸರೆ. ಅದರಲ್ಲೂ ಮೈಸೂರಿನಲ್ಲಿ ವೈಭವದಿಂದ ದಸರಾ ಮಹೋತ್ಸವ ನಡೆಯಲಿದೆ. ಸರಳ ದಸರೆ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲೇ ಜಂಬೂಸವಾರಿಯೂ ನಡೆಯಲಿದೆ. ಈ ಎಲ್ಲ ಸಂಭ್ರಮದ ನಡುವೆ ಮೈಸೂರಿನ ರಾಜವಂಶಸ್ಥೆ  ಪ್ರಮೋದಾ ದೇವಿ ಅವರು ಉದಯವಾಣಿಗಾಗಿ ಮಾತನಾಡಿದ್ದಾರೆ.  

Advertisement

ಈ ಬಾರಿಯ ದಸರೆಯಲ್ಲಿ ವಿಶೇಷಗಳು, ಹೊಸ ಬದಲಾವಣೆಗಳು ಏನೇನು?
ವಿಧಿವತ್ತಾಗಿ ನಡೆದುಕೊಂಡು ಬಂದಿರುವ, ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡಿರುವ ಕ್ರಿಯಾವಿಧಿಗಳಲ್ಲಿ ಯಾವುದೇ ತರಹದ ನವೀನತೆಗೆ ಅವಕಾಶವಿರುವುದಿಲ್ಲ. ಸನಾತನ ಕಾಲದಿಂದ ನಡೆದುಕೊಂಡುಬಂದಿರುವುದನ್ನು ಮುಂದುವರಿಸುತ್ತೇವೆ ಅಷ್ಟೆ. ಪೂಜೆ ಹೇಗೆ ಮಾಡಬೇಕು, ಧಾರ್ಮಿಕ ವಿಧಿಗಳನ್ನು ಹೇಗೆ ಆಚರಿಸಬೇಕು ಎಂಬುದು ನಿಗದಿತವಾಗಿರುತ್ತದೆ. ಬದಲಾವಣೆ ಗಳ ಬಗ್ಗೆ ಹೇಳಬೇಕೆಂದರೆ, ಕೊರೊನಾದಿಂದ, ನಾವು ಹೆಚ್ಚಾಗಿ ಯಾರನ್ನೂ ಆಮಂತ್ರಿಸಲಾಗಲಿಲ್ಲ- ಇದು ಎಲ್ಲರ ಸುರಕ್ಷತೆ ಕಾಪಾಡಲು ತೆಗೆದುಕೊಂಡ ಕ್ರಮವಾಗಿದೆ.

ನೀವು ಬಾಲ್ಯದಲ್ಲಿ ಕಂಡ ದಸರಾದ ಬಗ್ಗೆ ಹೇಳಿ…
ಚಿಕ್ಕವಳಿದ್ದಾಗ ನಾನು ನನ್ನ ಅಮ್ಮನೊಡನೆ ದಸರಾ ಸಮಯದಲ್ಲಿ ಇಲ್ಲಿಗೆ ಬರುತ್ತಿದ್ದೆ. ಆದರೆ ಆಗ, ನನಗೆ ಏನೂ ಅರ್ಥವಾಗುತ್ತಿರಲಿಲ್ಲ. ಆದರೆ ಆ ಸಮಯದಲ್ಲಿ, ಜಗಮಗಿಸುತ್ತಿದ್ದ ದೀಪಾ ಲಂಕಾರಗಳು, ಆನೆ ಕುದುರೆ, ಮೆರವಣಿಗೆ, ಅಂಬಾರಿಯ ಮೇಲೆ ಕುಳಿತು ವಿಜೃಂಭಿಸುತ್ತಿದ್ದ  ಮಹಾರಾಜರು, ಮೈಸೂರ ನಾಡಗೀತೆ, ಇವೆಲ್ಲ ನೋಡಿ ಸಂಭ್ರಮಿಸುತ್ತಿದ್ದೆ. ಇವೆಲ್ಲ ನನ್ನ ಮನದಲ್ಲಿ ಅಚ್ಚೊತ್ತಿದ ನೆನಪಾಗಿ ಉಳಿದಿದೆ. ಅಂದಿಗೂ ಇಂದಿಗೂ ತುಂಬಾ ಬದಲಾವಣೆಗಳಾಗಿವೆ, ಬದ ಲಾವಣೆಗಳನ್ನು ಒಪ್ಪಿಕೊಂಡು ಮುನ್ನಡೆಯುವುದು ಅತ್ಯವಶ್ಯಕ.

ಮಹಾರಾಣಿಯಾಗಿ ಬಂದಾಗಿನಿಂದ ಇಂದಿನವರೆಗೆ ದಸರೆಯಲ್ಲಿ ಯಾವ ಪ್ರಮುಖ ಬದಲಾವಣೆಗಳನ್ನು ನೀವು ಗುರುತಿಸುತ್ತೀರಿ?
1976ರಲ್ಲಿ ಮದುವೆಯಾಗಿ ಬಂದಾಗಿನಿಂದ, 76ರಿಂದ 82ರ ವರೆಗೆ, ನಮ್ಮ ಅತ್ತೆಯವರು ನಮಗೆ ಮಾರ್ಗದರ್ಶನ ನೀಡುತ್ತಿದ್ದರು. ಅವರು ಹಾಕಿಕೊಟ್ಟ ಹಾದಿಯಲ್ಲಿಯೇ ನಡೆ ಯುತ್ತಾ ಬಂದಿದ್ದೇನೆ. ಅವರಿಂದ ನಾನು ಪ್ರತಿಯೊಂದನ್ನೂ ಕಲಿತೆ. ನಮ್ಮನ್ನು ತಿದ್ದಿ-ತೀಡಿ ಸರಿಯಾದ ದಾರಿಯಲ್ಲಿ ಅವರು ನಡೆಸಿದರು. ಅವರ ಅನಂತರ ಅವರ ಜಾಗದಲ್ಲಿ, ನನ್ನ ಪತಿ ನನಗೆ ಮಾರ್ಗದರ್ಶನ ನೀಡುತ್ತಿದ್ದರು. ಅವರ ಅಕಾಲಿಕ ಮೃತ್ಯು ವಿನಿಂದಾಗಿ, ಈಗ ಅದರ ಕೊರತೆಯಿದೆ. ಈಗ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ಅವರೀರ್ವರ ಮಾರ್ಗದರ್ಶನದಂತೆ ನಡೆಯುತ್ತಾ ನಿಭಾಯಿಸಲು ಪ್ರಯತ್ನಿಸುತ್ತಿದ್ದೇನೆ.

ದಸರಾ ಪರಂಪರೆಗೆ ಸಾಕ್ಷಿಯಾಗುತ್ತಿದ್ದ 8 ಆನೆಗಳನ್ನು ಗುಜರಾತ್‌ಗೆ ಕಳುಹಿಸುವ ನಿರ್ಧಾರ ಭಾರೀ ಚರ್ಚೆಯಲ್ಲಿದೆ. ಗಜನಿರ್ವಹಣೆ ಅರಮನೆಗೆ ಅಷ್ಟೊಂದು ಹೊರೆಯಾಗಿದ್ದೇಕೆ ?
ನೀವು ಕೇಳುತ್ತಿರುವ ಆನೆಗಳ ಬಗ್ಗೆ ಹೇಳಬೇಕೆಂದರೆ, ಅವು ಮೂಲತ: ಸರ್ಕಸ್‌ ಗುಂಪಿನಲ್ಲಿದ್ದ ಆನೆಗಳು. ಸರ್ಕಸ್‌ನಲ್ಲಿ ಪ್ರಾಣಿಗಳ ಬಳಕೆ ನಿಲ್ಲಿಸಲು ನ್ಯಾಯಾಲಯ ಆದೇಶಿಸಿದ ಬಳಿಕ, ಅವುಗಳ ಉಸ್ತುವಾರಿಯ ಹೊಣೆಹೊತ್ತು ನಮ್ಮ ಪತಿ 20 ವರ್ಷಗಳ  ಹಿಂದೆ ಆ 5 ಹೆಣ್ಣಾನೆಗಳನ್ನು ಅರಮನೆಗೆ ಕರೆ ತಂದರು. ಇದಕ್ಕೆ ಮುನ್ನ, ನಾವು ಅರಣ್ಯ ಇಲಾಖೆಯ ವತಿಯಿಂದ 2 ಹೆಣ್ಣಾನೆಗಳನ್ನು ಖರೀದಿಸಿದ್ದೆವು. ಪ್ರತೀ ವರ್ಷ, ದಸರಾ ಸಮಯದಲ್ಲಿ ಪಾಲ್ಗೊಳ್ಳಲು ಗಂಡಾನೆಗಳನ್ನು, ಅರಣ್ಯ ಇಲಾಖೆಯಿಂದ ತರಿಸಿಕೊಳ್ಳಲಾಗುವುದು. ಕಾರಣ, ಪೂಜೆ ಗಂಡಾನೆಗೇ ನಡೆಯುವುದು ಹಾಗೂ ದಸರಾ ಮೆರವಣಿಗೆ ಯಲ್ಲಿ ಸಹ ಗಂಡಾನೆಗಳನ್ನೇ ಬಳಸಲಾಗುವುದು. ಈ ಹಿನ್ನೆ ಲೆಯ ವಿಷಯದಲ್ಲಿ ಕೆಲವರು, ಸಂಪೂರ್ಣ ತಿಳಿವಳಿಕೆ ಇಲ್ಲದೆ ಮಾತನಾಡುತ್ತಿರುವುದು ಸರಿಯಲ್ಲ. ನನ್ನ ಪತಿ ತೀರಿಕೊಂಡ ಬಳಿಕವೂ ಸಹ ನಾನು ಆ 5 ಹೆಣ್ಣಾನೆಗಳನ್ನು ಸಾಕುತ್ತಾ ಬಂದಿ ದ್ದೇನೆ. ಆನೆಗಳ ವಿಷಯದಲ್ಲಿ ಒಂದು ಮುಖ್ಯ ಅಂಶವೆಂದರೆ, ಅವುಗಳನ್ನು ಒಬ್ಬರೇ ಮಾವುತ ನೋಡಿಕೊಳ್ಳಬೇಕಾಗುತ್ತದೆ. 2017ರ ವರೆಗೆ ಆ ಆನೆಗಳನ್ನು ನಾನು ಸಾಕಿ ನೋಡಿಕೊಂಡೆ, ಅನಂತರ, ಅರಮನೆಯಲ್ಲಿನ ಕೆಲವು ಆಡಳಿತಕ್ಕೆ ಸಂಬಂಧಿಸಿದ ಅಡಚಣೆಗಳಿಂದಾಗಿ ಅವುಗಳನ್ನು ಅರಣ್ಯ ಇಲಾಖೆಗೆ ರವಾ ನಿಸುವ ಯೋಚನೆಮಾಡಿ ಅವರಿಗೆ ಪತ್ರ ಬರೆದಾಗ, ಅವರು, ನಾವು ಆ ಆನೆಗಳನ್ನು ಸಾಕಲು ಬೇಕಾದ ಸವಲತ್ತುಗಳೆಲ್ಲವನ್ನೂ ಒದಗಿಸಿದಲ್ಲಿ ನೋಡಿಕೊಳ್ಳುವುದಾಗಿ ತಿಳಿಸಿದರು. ಹಾಗಾಗಿ ಆ ಯೋಚನೆ ಕೈಬಿಟ್ಟಿದ್ದೆವು. ಕೊರೊನಾ, ಲಾಕ್‌ಡೌನ್‌ನಿಂದಾಗಿ ಮಾವುತರು ಅರಮನೆಗೆ ಬಂದು ಹೋಗುವುದು ಕಷ್ಟಕರ ವಾಗಿತ್ತು, ಆಗಲೂ ಹೇಗೋ ಸಂಭಾಳಿಸುತ್ತಿದ್ದೆವು. ಇತ್ತೀಚೆಗೆ, ಗುಜರಾತಿನ ಒಂದು ದೇವಾಲಯದ ಟ್ರಸ್ಟ್‌ನವರು ಆ ಆನೆಗಳನ್ನು ಕಳುಹಿಸಿಕೊಡಿ ಎಂಬ ಬೇಡಿಕೆ ನಮ್ಮ ಮುಂದಿಟ್ಟರು. ಆಗ, ಅರಣ್ಯ ಇಲಾಖೆಯ ವತಿಯಿಂದ ನೋ ಅಬೆjಕ್ಷನ್‌ ಸರ್ಟಿಫಿಕೆಟ್‌ ಪಡೆದ ಅನಂತರ ಕಳುಹಿಸಲು ಒಪ್ಪಿದ್ದೇನೆ. ಟ್ರಾವೆಲ್‌ ಫಿಟೆ°ಸ್‌ ಸರ್ಟಿಫಿಕೆಟ್‌ಗಾಗಿ ಕಾಯುತ್ತಿದ್ದೇನೆ. ಅರಮನೆಯಲ್ಲಿ ಎರಡು ಆನೆಗಳನ್ನು ಸಾಕುವುದು ಮುಂದುವರೆಯುತ್ತದೆ.

Advertisement

ಇದನ್ನೂ ಓದಿ:500 ಕೆ.ಜಿ.ಚಿನ್ನ ಈಗಲೇ ಕರಗಿಸಿದ್ದೇವೆ: ಮದ್ರಾಸ್‌ ಹೈಕೋರ್ಟ್‌ಗೆ ತಮಿಳುನಾಡು ಸರ್ಕಾರ ಮಾಹಿತಿ

ಜಾಗತಿಕ ಕ್ರೀಡೆಯಲ್ಲಿ ಭಾರತ ಬೆಳಗುತ್ತಿರುವಾಗ, ಪರಂಪರೆಯಾಗಿ ಬಂದ ಕುಸ್ತಿ ಕ್ರೀಡೆಯ ಪೋಷಣೆ ಬಗ್ಗೆ ಅರಮನೆ ಮುಂದಿರುವ ಯೋಜನೆಗಳೇನು?
ದಸರಾದಲ್ಲಿ ನಡೆಯುವ ವಿಶೇಷವಾದ ಕುಸ್ತಿ, “ವಜ್ರ ಮುಷ್ಟಿ’. ಇದನ್ನು ನಾವು ಅನಾದಿಕಾಲದಿಂದಲೂ ಪೋಷಿಸುತ್ತಾ ಬಂದಿದ್ದೇವೆ. ಇದು ನಮ್ಮ ನಾಡಿನ ಒಂದು ವಿಶಿಷ್ಟ ಗುಂಪಿನವರು ಆಡುವಂಥದು. ಕಳೆದೆರಡು ವರ್ಷಗಳಿಂದ, ಕೊರೊನಾ ಪ್ರಾರಂಭ ವಾದ ಮೇಲೆ, ಸುರಕ್ಷತೆ ಕಾಪಾಡುವ ಸಲುವಾಗಿ, ಇದು ನಡೆದಿಲ್ಲ. ಈ ಕ್ರೀಡೆಯನ್ನು ಪ್ರೋತ್ಸಾಹಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ತರಬೇಕೆಂದರೆ, ಒಮ್ಮನಸ್ಕರು ಒಗ್ಗೂಡಬೇಕಿದೆ. ಇದು ಖಂಡಿತ ಸಾಧ್ಯವಾಗುತ್ತೆ.

ಕೋವಿಡ್‌, ಲಾಕ್‌ಡೌನ್‌ ಸಂದಿಗ್ಧತೆಯನ್ನು ಇಡೀ ಜಗತ್ತು ಎದುರಿಸಿತು. ಈ ಬಿಕ್ಕಟ್ಟು ಅರಮನೆಗೆ ಬಾಧಿಸಿದ ಬಗೆ ?
ಹೊರಗಿನ ಜಗತ್ತಿಗೆ ಇದು ಅರಮನೆ, ಆದರೆ ಇಲ್ಲಿನ ಪ್ರತೀ ಸದಸ್ಯರಿಗೆ ಇದು ನಮ್ಮ ಮನೆ, ಒಂದು ಕುಟುಂಬದ ಸದಸ್ಯರಂತಿದ್ದೇವೆ. ನಮಗೂ ಇತರರಂತೆ ಕೊರೊನಾ ಬಿಸಿ ಮುಟ್ಟಿತು, ಸ್ವಲ್ಪ ಹೆಚ್ಚಾಗೇ ಅನ್ನಬೇಕು, ಕಾರಣ ನಮ್ಮೊಡನಿರುವ ಪ್ರಾಣಿಗಳಿಗೆ ಯಾವುದೇ ಕಷ್ಟವಾಗದಂತೆ ನೋಡಿಕೊಳ್ಳುವ ಹೊಣೆಯೂ ಸೇರಿತ್ತು. ನಮ್ಮಲ್ಲಿ ಆನೆಗಳಿವೆ, ಒಂಟೆಗಳಿವೆ ಹಾಗೂ 50-60 ಗೋವುಗಳಿವೆ, ನಮ್ಮಲ್ಲಿ ಕೆಲಸ ಮಾಡು ವವರೆಲ್ಲ ಒಂದು ಗುಂಪಿನ ಸದಸ್ಯರಂತೆ ಒಮ್ಮತದಿಂದ ಕೆಲಸ ಮಾಡುತ್ತೆವೆ. ಈ ಕೊರೊನಾ ಸಮಸ್ಯೆ ಇಡೀ ವಿಶ್ವದ ಸಮಸ್ಯೆಯಾಗಿದೆ, ಬರೀ ನಮ್ಮ ಅರಮನೆಯದ್ದಲ್ಲ.

ಅರಮನೆಯಲ್ಲಿ ನಿಮ್ಮ ಒಂದು ದಿನದ ದಿನಚರಿಯ ಬಗ್ಗೆ ತಿಳಿಸಿ
ಈ ಪ್ರಶ್ನೆಗೆ ಉತ್ತರಿಸುವಾಗ, ನಾನು ಒಂದು ಹೇಳಕ್ಕೆ ಇಷ್ಟಪಡ್ತೀನಿ, ನಾನು ನಿಗದಿತವಾದ ದಿನಚರಿ ಪಾಲಿಸುವುದಿಲ್ಲ. 9-6, 8-5 ಈ ರೀತಿಯ ದಿನಚರಿಗೆ ಒಳಪಡುವುದಿಲ್ಲ. ಕೆಲಸ ಇದ್ದಾಗ ಕೆಲಸ ಮಾಡ್ತೇನೆ. ಇಲ್ಲದಿದ್ದಾಗ ಮಾಡಲ್ಲ ಅಷ್ಟೆ. ಪ್ರತೀ ದಿನವೂ ನನಗೆ ವಿಭಿನ್ನವಾಗಿರತ್ತೆ. ಕೆಲವು ದಿನಗಳಲ್ಲಿ ನಾನು ಬೆಳಗ್ಗೆ 6ರಿಂದ ತಡರಾತ್ರಿಯವರೆಗೂ ಕೆಲಸ ಮಾಡುವುದುಂಟು, ಕೆಲವೊಮ್ಮೆ ಏನೂ ಮಾಡುವುದಿಲ್ಲ, ನಾನು ಪ್ರತೀ ದಿನವನ್ನು ಹೇಗೆ ಬರತ್ತೋ ಹಾಗೆ ಸ್ವೀಕರಿಸುತ್ತೇನೆ.

-ಗೀತಾ ಶ್ರೀನಿವಾಸನ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next