ಕುಂದಾಪುರ: ಸಾರ್ವಜನಿಕ ಜೀವನದಲ್ಲಿ ನಿಷ್ಠುರ ಇಲ್ಲದೆ, ವೈಯಕ್ತಿಕ ದ್ವೇಷ ಇಲ್ಲದ, ಯಾವುದೇ ಪಕ್ಷದಲ್ಲಿದ್ದರೂ ಇತರರನ್ನು ದ್ವೇಷಿಸದೆ ಇರುವ ವ್ಯಕ್ತಿತ್ವ ಪ್ರಮೋದ್ ಮಧ್ವರಾಜ್ ಅವರದ್ದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಗುರುವಾರ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಹುಟ್ಟುಹಬ್ಬದ ದಿನ ಪ್ರಯುಕ್ತ ಹೊಸ ಬಸ್ ನಿಲ್ದಾಣದ ಹತ್ತಿರದ ಫೆರಿ ರಸ್ತೆಯ ರೋಟರಿ ಭವನದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸುತ್ತಲಿನ ಸಮಾಜ ವ್ಯಕ್ತಿಯನ್ನು ಅನುಮಾನಿಸುತ್ತದೆ, ಅವಮಾನಿಸು ತ್ತದೆ, ಎರಡನ್ನೂ ಮೀರಿ ಬೆಳೆದರೆ ಸಮ್ಮಾನಿಸುತ್ತದೆ. ಪ್ರಮೋದ್ಗೆ ಸಮಾಜ ಒಳ್ಳೆಯದು ಮತ್ತು ಕೆಟ್ಟದ್ದನ್ನು ಕೊಟ್ಟರೂ ಅವರು ಎಲ್ಲ ರನ್ನೂ ಪ್ರೀತಿಸುತ್ತಾ ಬೆಳೆದವರು. ನಂಬಲರ್ಹ ರಾಜಕಾರಣಿಯಾಗಿ ಜೀವನ ಸವೆಸಿದವರು ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಹುಟ್ಟುಹಬ್ಬದಂದು ಆಡಂಬರ, ದುಂದುವೆಚ್ಚದ ಬದಲು ಇಂಥ ರಕ್ತದಾನ ಶಿಬಿರ ನಡೆಸುವುದು ಜನರ ಜೀವ ಉಳಿಸುವ ಕೆಲಸ. ಆದ್ದರಿಂದ ಪ್ರತಿವರ್ಷ ನಡೆ ಸುವ ಸಂಕಲ್ಪ ದಂತೆ ಇದೇ ಮಾದರಿ ಅನುಸರಿ ಸಲಾಗುತ್ತಿದೆ. ದಾನ ಪ್ರಚಾರಕ್ಕಾಗಿ ಇರಬಾರದು ಎಂದರು.
ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಪುರಸಭೆ ಅಧ್ಯಕ್ಷ ಮೋಹನ್ ದಾಸ್ ಶೆಣೈ, ಸರಕಾರಿ ಆಸ್ಪತ್ರೆಯ ಡಾ| ನಾಗೇಶ್, ರೆಡ್ಕ್ರಾಸ್ ಸಭಾಪತಿ ಜಯಕರ ಶೆಟ್ಟಿ ಎಸ್., ಅಭಯ ಹಸ್ತ ಚಾರಿಟೆಬಲ್ ಟ್ರಸ್ಟ್ ನ ಸತೀಶ್ ಸಾಲ್ಯಾನ್ ಮಣಿಪಾಲ್, ಹಂಗಳೂರು ಲಯನ್ಸ್ ಅಧ್ಯಕ್ಷ ರೋವನ್ ಡಿ’ ಕೋಸ್ತಾ, ಯುವ ಬಂಟರ ಸಂಘ ಮಾಜಿ ಅಧ್ಯಕ್ಷ ಸುನಿಲ್ ಶೆಟ್ಟಿ ಹೇರಿಕುದ್ರು, ತಾ.ಪಂ. ಮಾಜಿ ಅಧ್ಯಕ್ಷ ಭಾಸ್ಕರ ಬಿಲ್ಲವ ಹೇರಿಕುದ್ರು, ಮೊಗವೀರ ಯುವ ಸಂಘಟನೆಯ ಮಾಜಿ ಜಿಲ್ಲಾಧ್ಯಕ್ಷ ಸದಾನಂದ ಬಳ್ಕೂರು ಉಪಸ್ಥಿತರಿದ್ದರು.
ರಕ್ತದಾನಿಗಳಾದ ಪ್ರಶಾಂತ್ ತಲ್ಲೂರು, ಶರಣ್ ಸಂದೀಪ್ ಕೋಡಿ, ವಿಜಯ್ ಎಸ್. ಪೂಜಾರಿ ಕುಂದಾಪುರ ಅವರನ್ನು ಸಮ್ಮಾನಿಸ ಲಾಯಿತು. ವಿಶೇಷ ಚೇತನ ಕಲಾವಿದ ಗಣೇಶ ಪಂಜಿಮಾರು ರಚಿಸಿದ ಭಾವಚಿತ್ರವನ್ನು ಪ್ರಮೋದ್ಗೆ ನೀಡಲಾಯಿತು. ಗಣೇಶ್ ಅವರನ್ನು ಸಮ್ಮಾನಿಸಲಾಯಿತು.
ಪ್ರಮೋದ್ ಮಧ್ವರಾಜ್ ಅಭಿಮಾನಿ ಬಳಗ ಕುಂದಾಪುರ, ಅಭಯಹಸ್ತ ಚಾರಿಟೆಬಲ್ ಟ್ರಸ್ಟ್ ಉಡುಪಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಸಹಯೋಗ ನೀಡಿದ್ದವು. ಅಖಿಲಾ ಹೆಗ್ಡೆ ಬಳಗದವರು ರಸಮಂಜರಿ ನಡೆಸಿದರು. ನಾಗರಾಜ್ ಸಂಜನಾ ಭಟ್ಕಳ ನಿರ್ವಹಿಸಿದರು.