ಶಿರಸಿ: ಇಂದಿರಾ ಗಾಂಧಿ 46 ವರ್ಷದ ಹಿಂದೆ ತುರ್ತು ಪರಿಸ್ಥಿತಿ ಹೇರಿದ್ದ ಕಾರಣ ದೇಶದಲ್ಲಿ ಅರಾಜಕತೆಯಾಗಿತ್ತು. ಸ್ವಾತಂತ್ರ್ಯ ಹರಣ ಮಾಡಿದ್ದರು. ಹಲವರ ಬಲಿದಾನ ಆಗಿತ್ತು. ಪ್ರಜಾಪ್ರಭುತ್ವದಲ್ಲಿ ಇಂಥದೊಂದು ಕೆಟ್ಟ ದಿವಸ ಬಂದಿತ್ತು. ಇದನ್ನು ಇಂದಿನ ಮಕ್ಕಳಿಗೆ ತಿಳಿಸದೇ ಇದ್ದರೆ ಚರಿತ್ರೆ ಅರ್ಧ ಹೇಳಿದಂತೆ ಆಗುತ್ತದೆ ಎಂದು ರಾಜ್ಯ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ವಿಕೇಂದ್ರೀಕರಣ ಯೋಜನಾ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಪ್ರತಿಪಾದಿಸಿದರು.
ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ 1975 ರಲ್ಲಿ ತುರ್ತು ಪರಿಸ್ಥಿತಿ ನೆನಪಿಗಾಗಿ ಜಿಲ್ಲಾ ಬಿಜೆಪಿ ವತಿಯಿಂದ ಆಚರಿಸಲಾದ ಕರಾಳ ದಿನದ ವೇಳೆ ಅಂದು ಜೈಲುವಾಸ ಅನುಭವಿಸಿದ್ದ ಕಾರಣಕ್ಕೆ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ಜಯದೊಂದಿಗೆ ಇಂದಿರಾ ಯುಗ ಅಂತ್ಯವಾಗುತ್ತದೆ ಎಂದ ಅವರು, ಭಾರತದ ಪ್ರಾಚೀನ ಪರಂಪರೆ ಎರಡು ದಾಸ್ಯವನ್ನು ಎದುರಿಸಿದೆ. ಇಂದಿರಾ ಗಾಂಧಿ ಯುಗ ಇಡೀ ದೇಶವನ್ನು ಆಳಿದೆ. ತುರ್ತು ಪರಿಸ್ಥಿತಿಯಿಂದ ಬೇಸತ್ತ ಕಾಂಗ್ರೆಸ್ಸೇತರ ಪಕ್ಷಗಳೆಲ್ಲಾ ಒಂದಾಗಿ ಇಡೀ ದೇಶಕ್ಕೆ ಒಂದು ಪ್ರಣಾಳಿಕೆ ಬರೆಯುತ್ತಾರೆ. ತುರ್ತು ಪರಿಸ್ಥಿತಿಯ ವೇಳೆ ಸಾಕಷ್ಟು ಜನ ಬಲಿಯಾಗಿದ್ದಾರೆ. ತುರ್ತು ಪರಿಸ್ಥಿತಿಯ ಕರಾಳ ದಿನವನ್ನು ಎಲ್ಲರಿಗೂ ತಿಳಿಸಬೇಕಾಗಿದೆ ಎಂದರು.
ತುರ್ತು ಪರಿಸ್ಥಿತಿಯ ನಂತರ ಇಂದಿರಾ ಕಾಂಗ್ರೆಸ್ ಪತನವಾಗಿ ಜನತಾ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದ ಅವರು ಇಂತಹ ಘಟನೆ ನಮ್ಮೆಲ್ಲರಲ್ಲಿ ಅಚ್ಚಳಿಯದೆ ಉಳಿಯುವಂತಾಗಬೇಕು. ಮಕ್ಕಳಲ್ಲಿ ದೇಶ ಬಕ್ತಿ ಹೆಚ್ಚಲು ಭಾರತದ ಚರಿತ್ರೆ ಅರಿತಿರಬೇಕು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ ಅವರು,ಇತಿಹಾಸ ನೋಡಿ ಹೆಜ್ಜೆ ಇಟ್ಟರೆ ತಪ್ಪು ತಿದ್ದಿಕೊಳ್ಳಲು ಸಾಧ್ಯ ಎಂದರು.
ಈ ವೇಳೆ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗಡೆ ಬೆಳ್ಳೆಕೇರಿ, ಮಾಜಿ ಶಾಸಕ ಹಳಿಯಾಳದ ಸುನೀಲ ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರು ದೇವಾಡಿಗ, ಎನ್.ಎಸ್.ಹೆಗಡೆ ಮಾಧ್ಯಮ ವಕ್ತಾರ ಸದಾನಂದ ಭಟ್ಟ ನಿಡಗೋಡ, ಶ್ರೀರಾಮ ನಾಯ್ಕ, ಡಾನಿ ಡಿಸೋಜಾ ಇತರರು ಇದ್ದರು.