Advertisement

ಪುಟಾಣಿಗಳಿಗೆ ಪ್ರಮಾ ಪ್ರಶಸ್ತಿ 

06:00 AM Dec 28, 2018 | |

ಮಕ್ಕಳ ದಿನಾಚರಣೆಯ ಅಂಗವಾಗಿ ನಾಲ್ಕನೆಯ ಪ್ರಮಾ ಪ್ರಶಸ್ತಿಗಳನ್ನು ಮಣಿಪಾಲದ ಮಣಿಪಾಲ್‌ ಡಾಟ್‌ನೆಟ್‌ನಲ್ಲಿ ಪ್ರದಾನಿಸಲಾಯಿತು. ದಿ. ಡಾ. ಪಳ್ಳತ್ತಡ್ಕ ಕೇಶವ ಭಟ್‌ರ ಮೊಮ್ಮಗಳು ಪ್ರಮಾ ತನ್ನ ಅದ್ಭುತ ಜ್ಞಾಪಕ ಶಕ್ತಿ ಮತ್ತು ವಿಶಿಷ್ಟ ಪ್ರತಿಭೆಗಳಿಂದ ಗುರುತಿಸಲ್ಪಟ್ಟವಳು. ಪ್ರಮಾ ಇಂದು ನಮ್ಮೊಡನಿಲ್ಲ. ಮಣಿಪಾಲದ ಡಾ. ಪಳ್ಳತ್ತಡ್ಕ ಕೇಶವ ಭಟ್‌ ಮೆಮೋರಿಯಲ್‌ ಟ್ರಸ್ಟ್‌ ಪ್ರಮಾ ನೆನಪಿನಲ್ಲಿ ಸಮಾಜದಲ್ಲಿರುವ ಪ್ರತಿಭೆಗಳನ್ನು ಸಮ್ಮಾನಿಸಿ ಪ್ರೋತ್ಸಾಹಿಸುತ್ತಿದೆ. 2018ರ ಪ್ರಮಾ ಪ್ರಶಸ್ತಿಗೆ ಪಾತ್ರರಾದ ಪ್ರತಿಭೆಯ ಅನಾವರಣ ಇಂತಿದೆ: 

Advertisement

ಕುಂದಾಪುರದ ವೆಂಕಟರಮಣ ಹೈಸ್ಕೂಲಿನ 9ನೇ ತರಗತಿಯ ವಿದ್ಯಾರ್ಥಿನಿಯಾದ ನಿಯತಿ ಎಚ್‌. ಕೆ. ಶಾಸ್ತ್ರೀಯ ನೃತ್ಯ ಪ್ರವೀಣೆ. ಹೂವಯ್ಯ ಮತ್ತು ಅಮೃತಾ ದಂಪತಿಯ ಮಗಳಾದ ನಿಯತಿ ನೃತ್ಯವಸಂತ ನಾಟ್ಯಾಲಯದ ಶಿಷ್ಯೆ. ಅಪರೂಪದ ಹುಸೇನಿ ರಾಗದ ರೂಪಕತಾಳದ ರಚನೆಯೊಂದನ್ನು ನೃತ್ಯದಲ್ಲಿ ಪ್ರಸ್ತುತಪಡಿಸಿದರು. 

ಪ್ರಜ್ಞಾ ಅಡಿಗ – ಶ್ರೀನಿಧಿ ಶೇಟ್‌ ಅವರ ಚಿತ್ರ-ಕಾವ್ಯ ಲಹರಿಯು ಮಂತ್ರಮುಗ್ಧರನ್ನಾಗಿಸಿತು. ಇಬ್ಬರೂ ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿನಿಯರು. ಕರ್ನಾಟಕ ಸಂಗೀತವನ್ನು ವಿ| ವಾರಿಜಾಕ್ಷಿ ಆರ್‌. ಭಟ್‌ ಇವರಲ್ಲಿ ಅಭ್ಯಸಿಸಿ, ವಿ|ಜಯಂತಿ ಕುಮರೇಶ್‌ ಅವರಲ್ಲಿ ಸಂಗೀತದ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ಪ್ರಜ್ಞಾ, ಅಂಬಲಪಾಡಿಯ ಪ್ರಕಾಶ ಮತ್ತು ವೀಣಾ ದಂಪತಿಯ ಪುತ್ರಿ. ರಾಘವೇಂದ್ರ ಸ್ವಾಮಿಗಳ ರಚನೆ ಇಂದು ಎನಗೆ ಗೋವಿಂದ (ರಾಗಮಾಲಿಕಾ, ಮಿಶ್ರಛಾಪುತಾಳ), ಕನಕದಾಸರ ಈಶ ನಿನ್ನ (ರಾಗ ವಾಸಂತಿ, ರೂಪಕತಾಳ), ಡಿ.ವಿ.ಜಿ.ಯವರ ಕೊಳಲನೂದುವರಾರೆ (ಸಿಂಹೇಂದ್ರಮಧ್ಯಮ, ಮಿಶ್ರಛಾಪುತಾಳ), ಪುರಂದರದಾಸರ ಇನ್ನೂ ದಯೆ ಬಾರದೆ (ಕಲ್ಯಾಣವಸಂತ, ಖಂಡಛಾಪುತಾಳ)ಗಳನ್ನು ಪ್ರಸ್ತುತಪಡಿಸಿದರು. ಡಿ.ವಿ.ಜಿ.ಯವರ ಕೊಳಲನೂದುವರಾರೆಗೆ ಸಿಂಹೇಂದ್ರಮಧ್ಯಮ ರಾಗದಲ್ಲಿ ರಾಗಾಲಾಪನೆ ಮತ್ತು ಸ್ವರ ಪ್ರಸ್ತಾರಗಳನ್ನು ಅಳವಡಿಸಿ ತನ್ನ ನೈಪುಣ್ಯತೆಯನ್ನು ತೋರಿದರು. ಬಾಲಕಲಾವಿದ ಗೌತಮ ಭಟ್‌ ಪಿಟೀಲಿನಲ್ಲಿಯೂ, ಡಾ. ಬಾಲಚಂದ್ರ ಆಚಾರ್‌ ಮೃದಂಗದಲ್ಲಿಯೂ ಸಹಕರಿಸಿದರು. 

 ಶ್ರೀನಿಧಿ ಶೇಟ್‌ ಚಿತ್ರಕಲೆಯಲ್ಲಿ ಪರಿಣತೆ. ಸಂಗೀತದ ಹಿನ್ನೆಲೆಯಲ್ಲಿ ಪ್ರಸಾದ್‌ ರಾವ್‌ರವರ ಮಾರ್ಗದರ್ಶನದಲ್ಲಿ ಕಪ್ಪುಹಲಗೆಯ ಮೇಲೆ ಚಕಚಕನೇ ಅಕ್ರಿಲಿಕ್‌ ಬಣ್ಣವನ್ನು ಬಳಿಯುತ್ತಿದ್ದರು. ಇಪ್ಪತ್ತು ನಿಮಿಷದ ಕಿರು ಅವಧಿಯಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ರಚಿಸಿದರು. ತಾನೇ ರಚಿಸಿದ ಪ್ರಮಾಳ ಭಾವಚಿತ್ರವನ್ನು ಟ್ರಸ್ಟ್‌ಗೆ ಹಸ್ತಾಂತರಿಸಿದರು. ಈಕೆ ಪ್ರಕಾಶ್‌ ಶೇಟ್‌ ಮತ್ತು ವಿದ್ಯಾ ಇವರ ಪುತ್ರಿ. 

 ಮನಸ್ಸಿಗೆ ಚಟುವಟಿಗೆ ನೀಡುವ ವಿವಿಧ ಮಾಯಾಚೌಕಗಳ ಬಗ್ಗೆ ಗಣಿತದ ಪ್ರತಿಭಾನ್ವಿತೆ ಮೈತ್ರಿ ಬಾಯರಿ ಸಭಿಕರಿಗೆ ವಿವರಿಸಿದಳು. ಸಂಖ್ಯೆಗಳ ಮಾಯಾನಕ್ಷತ್ರದ ವಿನ್ಯಾಸಗಳು, ಪೈಥಾಗೊರಸ್‌ ನಿಯಮದ ವಿವಿಧ ಆಯಾಮಗಳು, ಜಿಯೋ-ಜೀಬ್ರಾ ವಿನ್ಯಾಸಗಳ ಬಗ್ಗೆ ಹೇಳಿದ್ದು ಮಾಧವ ಕೃಪಾ ಶಾಲೆಯ ಪಿ.ಯು.ಸಿ ವಿದ್ಯಾರ್ಥಿನಿ ಅಂತಾರಾಷ್ಟ್ರೀಯ ಗಣಿತ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿರುವ ಮೈತ್ರಿ. ಇವರು ಡಾ| ಮುರಳೀಧರ ಬಾಯರಿ ಮತ್ತು ಶೈಲಜಾ ದಂಪತಿಯ ಪುತ್ರಿ. 

Advertisement

ಅಗಸ್ತ್ಯ ಸಮ್ಯಕ ಜ್ಞಾನ ಇವನು ತನ್ನ ಅದ್ಭುತ ಸ್ಮರಣ ಶಕ್ತಿಗಾಗಿ ಪ್ರಮಾ ಪ್ರಶಸ್ತಿ ಪಡೆದುಕೊಂಡನು. ಸತೀಶ ಜಿ. ಮತ್ತು ಅನೂಷಾ ರೋಹಿಣಿಯವರ ಪುತ್ರನಾದ ಇವರು ಹಿರಿಯಡ್ಕದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 9ನೇ ತರಗತಿಯ ವಿದ್ಯಾರ್ಥಿ. ಅಂಕೆಗಳೊಡನೆ ಸರಸವಾಡುವುದು ಆತನಿಗೆ ಕರತಲಾಮಲಕ. 

ಅಗಸ್ತ್ಯ ಸಮ್ಯಕ ಜ್ಞಾನ 

Advertisement

Udayavani is now on Telegram. Click here to join our channel and stay updated with the latest news.

Next