ಹುಬ್ಬಳ್ಳಿ: ಶಾಲಾ-ಕಾಲೇಜುಗಳಿಗೆ ಸಮವಸ್ತ್ರ ಬಿಟ್ಟು ಬೇರೆ ವಸ್ತ್ರಗಳನ್ನು ಧರಿಸಿ ವಿದ್ಯಾರ್ಥಿಗಳು ಬರಬಾರದು ಎಂಬುದು ಬಿಜೆಪಿ ಸ್ಪಷ್ಟ ನಿಲುವಾಗಿದೆ. ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ತಮ್ಮ ನಿಲುವೇನು ಎಂಬುದನ್ನು ಸ್ಪಷ್ಟ ಪಡಿಸಲಿ ಎಂದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸವಾಲು ಹಾಕಿದರು.
ಇಲ್ಲಿನ ರೈಲು ನಿಲ್ದಾಣದಲ್ಲಿ ಕಾಶಿಗೆ ತೆರಳಿದ ಸುಮಾರು 150 ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರಿಗೆ ಶುಭಕೋರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಹಾಗೂ ಕೇಸರಿ ಶಾಲು ಎರಡನ್ನು ಧರಿಸಿ ಶಾಲೆಗೆ ಯಾರು ಬರಬಾರದು. ಈ ವಿಚಾರದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದೆ.
ಈ ಬಗ್ಗೆ ತನ್ನ ನಿಲುವೇನು ಎಂಬುದನ್ನು ಕಾಂಗ್ರೆಸ್ ಸ್ಪಷ್ಟ ಪಡಿಸಲಿ ಎಂದರು. ಮಕ್ಕಳ ಮನಸ್ಸಿನಲ್ಲಿ ಕೋಮುಭಾವನೆ ಬಿತ್ತುವ ಕಾರ್ಯ ಆಗುವುದು ಬೇಡ ವಿವಾದ ವಿಷಯವಾಗಿ ಎಲ್ಲ ಪಕ್ಷಗಳು ಒಂದಡೆ ಸೇರಿ ಚರ್ಚಿಸಲಿ, ಆತ್ಮಾವಲೋಕನ ಮಾಡಿಕೊಳ್ಳಲಿ.
ಶಿಕ್ಷಣ ಕಾಯ್ದೆಯಲ್ಲಿಯೇ ಸಮವಸ್ತ್ರ ಧರಿಸಿ ಬರಬೇಕೆಂದು ಸ್ಪಷ್ಟವಾಗಿದೆ. ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದರೂ ಕೆಲವರು ಹಿಜಾಬ್ ಧರಿಸಿಯೇ ಬರುತ್ತಿರುವುದು ನೋಡಿದರೆ ಕೋರ್ಟ್ ಆದೇಶ, ಸಂವಿಧಾನವನ್ನೇ ಪ್ರಶ್ನಿಸುವ ದುಸ್ಸಾಹಸಕ್ಕೆ ಮುಂದಾದಂತಿದೆ. ಇದನ್ನು ಯಾರು ಪ್ರೊತ್ಸಾಹಿಸಬಾರದು. ಪಾಲಕರು ಈ ನಿಟ್ಟಿನಲ್ಲಿ ಮಕ್ಕಳಿಗೆ ಬುದ್ದಿವಾದ ಹೇಳಬೇಕೆಂದರು.
ಹಿಜಾಬ್ ಗಲಾಟೆ ಹಿಂದೆ ಕಾಂಗ್ರೆಸ್ ಸೇರಿದಂತೆ ಕೆಲವರ ಕುಮ್ಮಕ್ಕು ಇದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರು ಎಂತಹದ್ದೊ ಬಟ್ಟೆಗಳ ಹೆಸರು ಹೇಳಿದ್ದಾರೆ.ಆದರೆ ಈ ದೇಶಕ್ಕೆ ಅದರದ್ದೇಯಾದ ಸಂಸ್ಕೃತಿ ಇದೆ ಎಂಬುದನ್ನು ತಿಳಿದುಕೊಳ್ಳಲಿ.ಅದೇ ರೀತಿ ಮಾಜಿ ಸಚಿವ ಜಮೀರ್ ಅಹ್ಮದ್ ಅವರ ಕೀಳುಮಟ್ಟದ ಹೇಳಿಕೆಗೆ ಪ್ರತಿಕ್ರಿಯಿಸುವುದೇ ಬೇಡ ಎಂದರು.
ಮತ ತುಷ್ಠೀಕರಣಕ್ಕಾಗಿ ಕಾಂಗ್ರೆಸ್ ಏನೇನೊ ಮಾಡಲು ಮುಂದಾಗಿದೆ. ಹಿಜಾಬ್ ವಿವಾದವನ್ನು ರಾಜ್ಯ ಸರಕಾರ ಉತ್ತಮವಾಗಿ ನಿರ್ವಹಿಸಿದೆ ಎಂದರು.
ದೆಹಲಿ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೊ ಗೊತ್ತಿಲ್ಲ. ಆದರೆ ಕೆಂಪುಕೋಟೆ ಮೇಲೆ ಇಂದು, ಮುಂದೆ ಎಂದೆಂದೂ ತ್ರಿವರ್ಣ ಧ್ವಜವೇ ಇರಲಿದೆ ಅದನ್ನು ಕೆಳಗಿಳಿಸುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವನಾಗಿ ಸ್ಪಷ್ಟ ಮಾತುಗಳಲ್ಲಿ ಹೇಳುವೆ ಎಂದರು.
2024 ರ ವೇಳೆಗೆ ಉಕ್ಕು ತಯಾರಿಕೆಗೆ ಬೇಕಾಗುವ ಕಲ್ಲಿದ್ದಲು ಹೊರತು ಪಡಿಸಿ ಉಳಿದ ಎಲ್ಲ ಕಲ್ಲಿದ್ದಲು ಆಮದು ಸ್ಥಗಿತ ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದ್ದು, ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಶೇ.70 ರಷ್ಟು ಕಲ್ಲಿದ್ದಲು ಆಮದು ನಿಲ್ಲಿಸಲಾಗಿದೆ ಎಂದರು.