ಬೆಂಗಳೂರು: ಬಿಯರ್‌ನಲ್ಲಿ ಆಲ್ಕೋಹಾಲ್ ಅಂಶ-ಆಧಾರಿತ ವರ್ಗೀಕರಣದ ಮೂಲಕ ಸುಂಕದ ಹೆಚ್ಚಳವನ್ನು ಪ್ರಸ್ತಾಪಿಸಿರುವ ಕರ್ನಾಟಕ ಸರಕಾರವು ಕರಡು ಅಧಿಸೂಚನೆಗಳನ್ನು ಹಿಂತೆಗೆದುಕೊಳ್ಳುವಂತೆ ಬಿಯರ್ ಅಸೋಸಿಯೇಷನ್ ಆಫ್ ಇಂಡಿಯಾ (BAI) ಒತ್ತಾಯಿಸಿದೆ. ಸರಕಾರದ ಕ್ರಮವು 10-20 ಪ್ರತಿಶತದಷ್ಟು ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಅಸೋಸಿಯೇಷನ್ ಹೇಳಿದೆ.
ಕರಡು ಅಧಿಸೂಚನೆಯು ರಾಜ್ಯದಲ್ಲಿ ಸ್ಟ್ರಾಂಗ್ ಬಿಯರ್‌ನ ಮೇಲಿನ ಪ್ರತಿ ಬಲ್ಕ್ ಲೀಟರ್‌ಗೆ 20 ರೂ. ಅಬಕಾರಿ ಸುಂಕ ದ್ವಿಗುಣಗೊಳಿಸಲು, ಬಿಯರ್‌ನ ಕನಿಷ್ಠ ಬಿಲ್ಲಿಂಗ್ ಬೆಲೆಯನ್ನು ಪ್ರತಿ ಕೇಸ್ ಗೆ ರೂ 300 ಕ್ಕೆ ಮತ್ತು ಹೆಚ್ಚುವರಿ ಅಬಕಾರಿ ಸುಂಕವನ್ನು (AED) ಬಿಲ್ಲಿಂಗ್ ಬೆಲೆಯ ಶೇಕಡಾ 195 ಕ್ಕೆ ಅಥವಾ ಬಲ್ಕ್ ಲೀಟರ್‌ಗೆ 130 ರೂ. ಹೆಚ್ಚಿಸುವುದಾಗಿದೆ.
ಉದ್ಯಮ ಸಂಸ್ಥೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಬಿಯರ್ ಬಾಟಲಿಯ ಲೇಬಲ್‌ನಲ್ಲಿ ಸಕ್ಕರೆ ಅಂಶವನ್ನು ಘೋಷಿಸುವುದು ಮತ್ತು ಮಾಲ್ಟ್ /ಧಾನ್ಯದ ತೂಕದ ಶೇಕಡಾ 25 ಕ್ಕೆ ಮಿತಿಗೊಳಿಸಲು ತಯಾರಕರನ್ನು ಸೂಚಿಸಿರುವ ಪ್ರಸ್ತಾಪವನ್ನು ಹಿಂಪಡೆಯುವಂತೆಯೂ ಕೇಳಿದೆ.
“ಕರಡು ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾದ ಹೆಚ್ಚಳವು ಮೇನ್ ಸ್ಟ್ರೀಮ್ ಮತ್ತು ಪ್ರೀಮಿಯಂ ವಿಭಾಗಗಳಲ್ಲಿ 10-20 ಪ್ರತಿಶತದಷ್ಟು ಬೆಲೆಯನ್ನು ಹೆಚ್ಚಿಸುತ್ತದೆ. ಈ ವಿಭಾಗದಲ್ಲಿ ಪ್ರಸ್ತಾಪಿಸಲಾದ 35% ತೆರಿಗೆ ಹೆಚ್ಚಳ ಜನಸಾಮಾನ್ಯರಿಗೆ ಬಿಯರ್ ಅನ್ನು ಕೈಗೆಟುಕದಂತೆ ಮಾಡುತ್ತದೆ,”ಎಂದು BAI ಹೇಳಿದೆ.
ಕಳೆದ 12 ತಿಂಗಳುಗಳಲ್ಲಿ ಬಿಯರ್ ಬೆಲೆಗಳನ್ನು ಎರಡು ಬಾರಿ ಹೆಚ್ಚಿಸಲಾಗಿದೆ ಮತ್ತು ಕಡಿಮೆ ಸಮಯದಲ್ಲಿ ಮೂರನೇ ಹೆಚ್ಚಳವು ಉದ್ಯಮದ ಪರಿಮಾಣಕ್ಕೆ ಮತ್ತು ಬಿಯರ್ ನಿಂದ ರಾಜ್ಯದ ಆದಾಯಕ್ಕೆ ಹಾನಿಕಾರಕವಾಗಿದೆ ಎಂದು ಹೇಳಿದೆ. BAI ಸದಸ್ಯರು ಭಾರತದಲ್ಲಿ ಮಾರಾಟವಾಗುವ 85% ಬಿಯರ್‌ನ ಮಾಲಕತ್ವ ಹೊಂದಿದ್ದಾರೆ.