Advertisement

ಬಂಜಾರಾ ಜನರ ಮೂಗಿಗೆ ಬಿಜೆಪಿ ತುಪ್ಪ ಸವರಿದೆ: ಪ್ರಕಾಶ ರಾಠೋಡ್

07:45 PM Jan 22, 2023 | Team Udayavani |

ವಿಜಯಪುರ : ಲಂಬಾಣಿ ತಾಂಡಾ ಕಂದಾಯ ಗ್ರಾಮವಾಗಿ ಪರಿವರ್ತಿಸಿದ್ದಾಗಿ ಬಂಜಾರಾ ಸಮಾಜದ ಜನರಿಗೆ ಪ್ರಧಾನಿ ಹಾಗೂ ಬಿಜೆಪಿ ನಾಯಕರು ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಪ್ರಕಾಶ ರಾಠೋಡ ಟೀಕಾ ಪ್ರಹಾರ ನಡೆಸಿದ್ದಾರೆ.

Advertisement

ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಟೀಷರ ಕಾಲದಲ್ಲಿ ಬಂಜಾರ ಸಮುದಾಯವನ್ನು ಅಪರಾಧಿಕ ಬುಡಕಟ್ಟು ಎಂದು ಗುರುತಿಸಿ, ಶೋಷಣೆ ಮಾಡಿದ್ದರು. ಸ್ವಾತಂತ್ರ್ಯ ಭಾರತದಲ್ಲಿ ಬಂಜಾರ ಸಮುದಾಯಕ್ಕೆ ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಿ, ಸಾಮಾಜಿಕ ಗೌರವ ಹಾಗೂ ಘನತೆಯ ಜೀವನ ನಡೆಸಲು ಅವಕಾಶ ಕಲ್ಪಿಸಿದ್ದು ಕಾಂಗ್ರೆಸ್ ಎಂದು ತಮ್ಮ ಪಕ್ಷದ ಪರ ಸಮರ್ಥನೆ ಮಾಡಿದರು.

ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ, ಹಕ್ಕುಪತ್ರ ವಿತರಿಸಿ ಎಂಬುದು ಇಂದು-ನಿನ್ನೆಯ ಹೋರಾಟ, ಬೇಡಿಕೆಯಲ್ಲ. ಇದು ಮಲ್ಲಿಕಾರ್ಜು ಖರ್ಗೆ ಅವರ ಕನಸಿನ ಕೂಸು ಹಾಗೂ ಕಾಂಗ್ರೆಸ್ ಅನುಷ್ಠಾನ ಮಾಡಿದ ಯೋಜನೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಕಂದಾಯ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಕನಸಿನ ಕೂಸಾಗಿದ್ದ ಸದರಿ ಯೋಜನೆಯನ್ನು ರೂಪಿಸಿದ್ದು ಕಾಂಗ್ರೆಸ್ ಪಕ್ಷದ ಸರ್ಕಾರ. ಆದರೆ ಬಿಜೆಪಿ ಸರ್ಕಾರ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ರೂಪಿಸಿದ ಕಾರ್ಯವನ್ನು ತಮ್ಮದು ಎಬಂತೆ ಬಿಂಬಿಸಿಕೊಳ್ಳಲು ಮುಂದಾಗಿದೆ ಎಂದು ಟೀಕಿಸಿದರು.

ಇಷ್ಟಕ್ಕೂ ಘೋಷಿತ ಕಂದಾಯ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸದೇ ಕೇವಲ ಹಕ್ಕುಪತ್ರ ವಿತರಿಸಿ ಬಂಜಾರ ಸಮುದಾಯವನ್ನು ದಿಕ್ಕತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಕೇವಲ 4 ಸಾವಿರ ಚದರ ಅಡಿ ನಿವೇಶನ ನೀಡಿ, ಇತರೆ ಜಮೀನು ಸರ್ಕಾರ ಸ್ವಾಧೀನ ಮಾಡಿಕೊಳ್ಳುವ ಹುನ್ನಾರವನ್ನು ಮುಚ್ಚಿಡಲಾಗಿದೆ ಎಂದು ಹರಿಹಾಯ್ದರು.

Advertisement

ಇದೇ ವಿಷಯವಾಗಿ ಸಚಿವೆಯಾಗಿದ್ದ ಬಿ.ಟಿ. ಲಲಿತಾ ನಾಯಕ ಶಾಸನಸಭೆಯಲ್ಲಿ ಕಣ್ಣೀರು ಹಾಕಿದ್ದ ಸಂದರ್ಭದಲ್ಲಿ, ನಾನು ಸೇರಿದಂತೆ ಹಲವು ಶಾಸಕರು ಬೆಂಲವಾಗಿ ನಿಂತಿದ್ದೆವು. ಬಂಗಾರಪ್ಪ ಮುಖ್ಯಮಂತ್ರಿ, ಮಲ್ಲಿಕಾರ್ಜುನ ಖರ್ಗೆ ಅವರು ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲೂ ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿದ್ದೆವು. 270 ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ರಚನೆಗೆ ಪ್ರಸ್ತಾವನೆ ಸಲ್ಲಿಸಿದಾಗ, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದದಾಗ ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕೆಲಸ ಮಾಡಿದ್ದೇವೆ ಎಂದರು.

2013 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯೋಜನೆನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ನರಸಿಂಹಯ್ಯ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಅಲ್ಲದೇ ನೋಡಲ್ ಅಧಿಕಾರಿಯಾಗಿ ವಿಶೇಷ ಐಎಎಸ್ ಅಧಿಕಾರಿಯನ್ನೂ ನಿಯೋಜಿಸಿತ್ತು. ಅನೇಕ ತಾಂತ್ರಿಕ ತೊಂದರೆ ನಿವಾರಣೆಗಾಗಿ ಅರಣ್ಯ ಕಾಯ್ದೆ, ಭೂ ಕಾಯ್ದೆ ತಿದ್ದುಪಡಿ ಸೇರಿದಂತೆ ಅನೇಕ ಕಾಯ್ದೆಗಳಿಗೆ ರಾಷ್ಟ್ರಪತಿಗಳ ಅಂಕಿತ ದೊರಕಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂದು ವಿವರಿಸಿದರು.

ಕಾಂಗ್ರೆಸ್ ಬಂಜಾರ ಸಮದಾಯದ ಗುರು ಸಂತ ಸೇವಾಲಾಲ್ ಜಯಂತಿ ಆಚರಿಸಲು ಮುಂದಾಗಿದ್ದರೆ, ಬಿಜೆಪಿ ಸರ್ಕಾರ ಕಲಬುರ್ಗಿಯಲ್ಲಿ ಸಂತ ಸೇವಾಲಾಲ್ ಅವರ ದೇವಾಲಯ ಧ್ವಂಸ ಮಾಡಿ ವಿಮಾನ ನಿಲ್ದಾಣ ನಿರ್ಮಿಸಿತ್ತು. ಹೀಗಾಗಿ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ಅವರ ಹೆಸರು ನಾಮಕರಣ ಮಾಡುವಂತೆ ಆಗ್ರಹಿಸಿದರು.

ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮೊಹಮ್ಮದ್ ರಫೀಕ್ ಟಪಾಲ್, ಕಾಂಗ್ರೆಸ್ ಮುಖಂಡರಾದ ಸಾಹೇಬಗೌಡ ಬಿರಾದಾರ, ಪ್ರೇಮಸಿಂಗ್ ಚವ್ಹಾಣ, ವಸಂತ ಹೊನಮೋಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಸರ್ಕಾರಿ ಶಾಲೆ ಉಳಿಸಲು 39 ಲಕ್ಷ ರೂ. ಚಂದಾ ಎತ್ತಿದ ಹಳ್ಳಿಯ ನಿವಾಸಿಗಳು

Advertisement

Udayavani is now on Telegram. Click here to join our channel and stay updated with the latest news.

Next