ಚಾಮರಾಜನಗರ: ಯೋಗ ಗುರು ಪ್ರಕಾಶಣ್ಣ ಇವರು ವೃತ್ತಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಆದರೆ ಪ್ರವೃತ್ತಿಯಲ್ಲಿ ಸಾವಿರಾರು ಜನರ ಆರೋಗ್ಯವನ್ನು ರಕ್ಷಿಸುವ ಯೋಗ ಶಿಕ್ಷಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಹೆಸರು ಬಿ.ಪಿ. ಪ್ರಕಾಶ್. ಆದರೆ ಚಾಮರಾಜನಗರದಲ್ಲಿ ಇವರನ್ನು ಎಲ್ಲರೂ ಕರೆಯುವುದು ಯೋಗ ಪ್ರಕಾಶಣ್ಣ ಎಂದೇ.
ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್‌ಪಿವೈಎಸ್‌ಎಸ್)ಯಲ್ಲಿ ಜಿಲ್ಲಾ ಸಂಚಾಲಕರಾಗಿರುವ ಪ್ರಕಾಶಣ್ಣ ಕಳೆದ 13 ವರ್ಷಗಳಿಂದ ಯೋಗ ಶಿಕ್ಷಕರಾಗಿ ಸಾವಿರಾರು ಜನರಿಗೆ ಯೋಗ, ಪ್ರಾಣಾಯಾಮವನ್ನು ಕಲಿಸಿದ್ದಾರೆ.
ಕಳೆದ 9 ವರ್ಷಗಳಿಂದ ರಥ ಸಪ್ತಮಿಯ ದಿನ ಸಾವಿರಾರು ಜನರಿಂದ, ಶಾಲಾ ಮಕ್ಕಳಿಂದ ಸಾಮೂಹಿಕ ಸೂರ್ಯ ನಮಸ್ಕಾರ ನಡೆಸಿಕೊಂಡು ಬಂದಿದ್ದಾರೆ. ಕಳೆದ ನಾಲ್ಕು ವರ್ಷ ಗಳಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯೋಗಾಭ್ಯಾಸಿಗಳಿಗೆ ಯೋಗಗುರುವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಇದುವರೆಗೆ 150 ಶಿಬಿರಗಳನ್ನು ಮಾಡಿ ಸರಿ ಸುಮಾರು 10 ಸಾವಿರ ಜನರಿಗೆ ಯೋಗಾಭ್ಯಾಸ, ಪ್ರಾಣಾಯಾಮ ಕಲಿಸಿದ್ದಾರೆ.
ಮದ್ಯವರ್ಜನ ಶಿಬಿರ, ಎನ್‌ಸಿಸಿ ಶಿಬಿರ, ರುಡ್‌ಸೆಟ್, ರೈತರ ಶಿಬಿರಗಳಲ್ಲಿ ಯೋಗ ತರಬೇತಿ ನೀಡುತ್ತಾ ಬಂದಿದ್ದಾರೆ. ಜಿಲ್ಲಾ ಕೇಂದ್ರ ಚಾಮರಾಜನಗರದ ರೋಟರಿ ಸಂಸ್ಥೆ ಸಭಾಂಗಣ, ಸೇವಾಭಾರತಿ ಕನ್ನಡ ಮಾಧ್ಯಮ ಶಾಲೆಯ ಕಟ್ಟಡದಲ್ಲಿ ಸಾರ್ವಜ ನಿಕರಿಗೆ ಪ್ರತಿ ನಿತ್ಯ ಯೋಗ ತರಗತಿಗಳನ್ನು ಉಚಿತವಾಗಿ ನಡೆಸುತ್ತಿದ್ದಾರೆ.
ಚಾಮರಾಜನಗರದಂಥ ಪಟ್ಟಣ ಪ್ರದೇಶಗಳಲ್ಲಿ ಯೋಗ ಹೇಳಿಕೊಡುವವರ ಸಂಖ್ಯೆ ಬಹಳ ಕಡಿಮೆಯಿದ್ದು, ಪ್ರಕಾಶ್ ಅವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ, ಯೋಗ ಶಿಕ್ಷಣವನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಉಚಿತವಾಗಿ ಕಲಿಸುತ್ತಿದ್ದಾರೆ.
ಜನರಲ್ಲಿ ಯೋಗದ ಬಗ್ಗೆ ಜಾಗೃತಿ ಹಾಗೂ ಅದರಿಂದ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಕೆಲಸವನ್ನು ಕಳೆದ ಹನ್ನೆರಡು ವರ್ಷಗಳಿಂದ ಮಾಡುತ್ತಿರುವುದು ನನಗೆ ಸಮಾಧಾನ ತಂದಿದೆ ಎನ್ನುತ್ತಾರೆ ಬಿ.ಪಿ. ಪ್ರಕಾಶ್.