ಹೊಸದಿಲ್ಲಿ: ಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸೋಮವಾರ ನಡೆದ ಸಮಾರಂಭದಲ್ಲಿ 1983ರ ಬ್ಯಾಡ್ಮಿಂಟನ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪದಕ ವಿಜೇತ ಪ್ರಕಾಶ್ ಪಡುಕೋಣೆ ಅವರಿಗೆ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದ “ಜೀವಮಾನದ ಸಾಧನೆ’ ಪುರಸ್ಕಾರ ನೀಡಿ ಗೌರವಿಸಿದರು.
ಪ್ರಕಾಶ್ ಪಡುಕೋಣೆ ಅವರನ್ನು “ಬ್ಯಾಡ್ಮಿಂಟನ್ ಆಟದ ಶ್ರೇಷ್ಠ ದಂತಕತೆ’ ಎಂದು ಬಣ್ಣಿಸಿದ ನಾಯ್ಡು ಅವರು 62ರ ಹರೆಯದ ಪಡುಕೋಣೆ ದೇಶಕ್ಕೆ ಅನೇಕ ಗೌರವಗಳನ್ನು ತಂದುಕೊಟ್ಟಿದ್ದಾರೆ ಮಾತ್ರವಲ್ಲದೇ ಅವರ ಅಪರಿಮಿತ ಉತ್ಸಾಹ, ಶ್ರಮದಿಂದ ಇಡೀ ರಾಷ್ಟ್ರಕ್ಕೇ ಸ್ಫೂರ್ತಿಯಾಗಿದ್ದಾರೆ ಎಂದರು.
1980ರ ದಶಕದಲ್ಲಿ ಕ್ರೀಡಾ ಸೌಲಭ್ಯಗಳ ಕೊರತೆಯ ನಡುವೆಯೂ ಪಡುಕೋಣೆ ದೇಶಕ್ಕಾಗಿ ಆಡಿದ್ದು, ಪದಕ ತಂದಿದ್ದನ್ನು ಸ್ಮರಿಸಿಕೊಂಡ ಉಪರಾಷ್ಟ್ರಪತಿಯವರು 1978ರ ಕಾಮನ್‌ವೆಲ್ತ್ ಗೇಮ್ಸ್ ಮತ್ತು 1980ರ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದ ಮೈಸೂರು ಮೂಲದ ಪಡುಕೋಣೆ ಅವರಿಗೆ ಪುರಸ್ಕಾರ ಸಲ್ಲಲೇಬೇಕಾದ್ದೆ’ಎಂದು ಹೇಳಿದರು.
“ಪಡುಕೋಣೆ ಅವರಿಗೆ ನೀಡಿದ ಈ ಪುರಸ್ಕಾರ ಇತರರಿಗೂ ಸ್ಫೂರ್ತಿಯಾಗುವುದರಲ್ಲಿ ಸಂಶಯವಿಲ್ಲ. ನನ್ನ ಕ್ರೀಡಾ ದಿನಗಳಲ್ಲಿ ಬಿಎಐ ಮತ್ತು ಕರ್ನಾಟಕ ರಾಜ್ಯ ಅಸೋಸಿಯೇಶನ್ ಪ್ರೋತ್ಸಾಹಿಸಿದ್ದನ್ನು ನೆನಪಿಸಿಕೊಳ್ಳಬಲ್ಲೆ. ಆ ಸಮಯದಲ್ಲಿ ನನ್ನನ್ನು ಪ್ರೋತ್ಸಾಹಿಸಿದ ನನ್ನ ಕುಟುಂಬ, ಸ್ನೇಹಿತರು, ಸಹ ಆಟಗಾರರಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಪ್ರಕಾಶ್ ಪಡುಕೋಣೆಯವರ ಪತ್ನಿ ಉಜ್ವಲಾ, ಪುತ್ರಿಯರಾದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಅನಿಷಾ ಪಡುಕೋಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.